ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ನಾಲ್ಕು ತಾಲೂಕುಗಳು ಪೂರ್ವ ಒಣವಲಯಕ್ಕೆ ಸೇರಿದ್ದು, ಮಳೆ ಆಧಾರಿತ ತೋಟಗಾರಿಕಾ ಪ್ರದೇಶವಾಗಿರುವುದರಿಂದ ಎಲ್-ನಿನೋ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತದೆ. ಅನಿಯಮಿತ ಮಳೆಯ ಮಾದರಿ ಹಾಗೂ ಬೆಳೆ ಬೆಳವಣಿಗೆಯ ಅವಧಿಯಲ್ಲಿ ತೇವಾಂಶದ ಅಸಮರ್ಪಕ ಲಭ್ಯತೆಯಿಂದ ಹೂ ಬಿಡುವಿಕೆ ಮತ್ತು ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಕೀಟ ಹಾಗೂ ರೋಗಗಳ ಉಲ್ಬಣದಿಂದ ಬೆಳೆಗಳ ಆರ್ಥಿಕ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳ ರಕ್ಷಣೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ.
ಎಲ್-ನಿನೋ ಸಾಮಾನ್ಯವಾಗಿ ದುರ್ಬಲ ನೈಋತ್ಯ ಮಾನ್ಸೂನ್ ಮಳೆ, ಹೆಚ್ಚಿನ ತಾಪಮಾನ ಮತ್ತು ಒಣ ಹವಾಮಾನದ ಅವಧಿಗಳ ಹೆಚ್ಚಳದೊಂದಿಗೆ ಸಂಬಂಧ ಹೊಂದಿದೆ. ಗ್ರಾಮಾಂತರ ಜಿಲ್ಲೆಯು ಮಳೆ ಆಧಾರಿತ ತೋಟಗಾರಿಕಾ ಪ್ರದೇಶವಾಗಿರುವುದರಿಂದ ಎಲ್-ನಿನೋ ದುಷ್ಪರಿಣಾಮ ಎದುರಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಯಾವುದೇ ನದಿ ಮೂಲವಿಲ್ಲದೆ ಕೇವಲ ಕೊಳವೆಬಾವಿಗಳ ಆಶ್ರಯ ಕಂಡುಬರುತ್ತದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಹಣ್ಣಿನ ಬೆಳೆಗಳಾದ ಮಾವು, ದ್ರಾಕ್ಷಿ, ಸೀಬೆ, ಬಾಳೆ ಮತ್ತು ದಾಳಿಂಬೆ ಹಾಗೂ ತರಕಾರಿ ಬೆಳೆಗಳಾದ ಟೊಮ್ಯಾಟೋ, ಬದನೆ, ಕಡ್ಡಿಬೀನ್ಸ್, ಎಲೆ ಮತ್ತು ಹೂಕೋಸು, ಕುಂಬಳ ಜಾತಿ ತರಕಾರಿಗಳು, ಅಲ್ಲದೇ ಹೂವಿನ ಬೆಳೆಗಳಾದ ಗುಲಾಬಿ, ಸೇವಂತಿಗೆ ಮತ್ತು ಸುಗಂಧರಾಜ, ತೋಟದ ಬೆಳೆಗಳಾದ ತೆಂಗು, ಅಡಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ ಈ ಪರಿಸ್ಥಿತಿಯಲ್ಲಿ ಇವುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಅಗತ್ಯ ಎಂದು ಇಲಾಖೆ ತಿಳಿಸಿದೆ.
ಬೆಳೆಗಳಿಗೆ ಸಂರಕ್ಷಣೆ ವಿಧಾನಗಳು:
ಬಹುವಾರ್ಷಿಕ ಬೆಳೆಗಳಿಗೆ ತೇವಾಂಶ ಸಂರಕ್ಷಣೆಯ ಕ್ರಮಗಳಾಗಿ ಬುಡದ ಸುತ್ತ ಪಾತಿಯಲ್ಲಿ ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ತೆಂಗಿನ ಮಟ್ಟೆ, ತೆಂಗಿನ ನಾರು ಹಾಗೂ ಇತರೆ ಬೆಳೆ ತ್ಯಾಜ್ಯಗಳನ್ನು ಹೊದಿಕೆಯಾಗಿ ಹಾಸುವುದು. ನೀರಿನ ಉಳಿತಾಯ ಮತ್ತು ಸಮರ್ಪಕ ಬಳಕೆಗಾಗಿ ಕಡ್ಡಾಯವಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬೆಳೆಗೆ ಅನುಗುಣವಾಗಿ ನೀರು ನೀಡುವುದು. ಗಿಡಗಳ ಎಲೆಗಳ ಮೂಲಕ ಭಾಷಿಕರಣ ಕಡಿಮೆಗೊಳಿಸಲು ಎಲೆಗಳ ಮೇಲೆ (ಶೇ. 5) ಸಿಂಪಡಣೆ ಮಾಡುವುದು ಮತ್ತು ಸೂರ್ಯನ ಕಿರಣಗಳಿಂದ ಸಂರಕ್ಷಿಸಲು ಸುಣ್ಣದ ಧೂಳೀಕರಣ ಅಥವಾ ಸಿಂಪಡಣೆ ಮಾಡುವುದು. ಎಲೆಗಳ ಮೂಲಕ ಭಾಷಿಕರಣ ಕಡಿಮೆಗೊಳಿಸಲು ಶೇ. 30-40 ರೆಂಬೆಗಳನ್ನು ಸವರುವುದರಿಂದ ಎಲೆಗಳ ಭಾಷಿಕರಣದ ವಿಸ್ತೀರ್ಣ ಕಡಿಮೆಗೊಳಿಸಲಾಗುವುದು.
ತರಕಾರಿ ಬೆಳೆಗಳನ್ನು ನಾಟಿ ಮಾಡುವಾಗ ಕಡ್ಡಾಯವಾಗಿ ಹನಿ ನೀರಾವರಿ ಮತ್ತು ಪ್ಲಾಸ್ಟಿಕ್ ಹೊದಿಕೆ ಅಳವಡಿಸಿಕೊಳ್ಳುವುದರ ಜತೆಗೆ ಹೆಚ್ಚು ಸಾವಯವ ಅಂಶ ಭೂಮಿಗೆ ಸೇರಿಸುವುದರಿಂದ ತೇವಾಂಶದ ಸಂರಕ್ಷಣೆ ಮಾಡುವುದು. ತರಕಾರಿ ನಾಟಿ ಮಾಡುವ ಸಮಯದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿಕೊಂಡು ಸಸಿಗಳ ಬುಡಗಳು ಪಾಲಿಥಿನ್ ಹೊದಿಕೆಗಳ ಸಂಪರ್ಕಕ್ಕೆ ಬಾರದಂತೆ ಮಾಡಲು ನಾಟಿ ಮಾಡುವ ರಂಧ್ರಗಳಲ್ಲಿ ಪೇಪರ್ ಕಪ್ಸ್ ಅಳವಡಿಸಿ ತರಕಾರಿ ಸಸಿಗಳನ್ನು ನಾಟಿ ಮಾಡುವುದು.
ಬಿಸಿಲಿನ ತಾಪಮಾನ ತಡೆಯುವ ವಿಧಾನ:
ತರಕಾರಿ ಬೆಳೆಗಳನ್ನು ಬೆಳೆಯುವಾಗ ಕಡಿಮೆ ಖರ್ಚಿನಲ್ಲಿ ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ಕಟ್ಟುವುದರ ಮೂಲಕ ಬೆಳೆಗಳನ್ನು ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಬಹುದು. ಪಾಲಿಮನೆಯ ಮೇಲೆ ಬಿದ್ದ ನೀರನ್ನು ಕೃಷಿಹೊಂಡಗಳಲ್ಲಿ ಸಂಗ್ರಹಿಸುವುದು ಮತ್ತು ಅವಶ್ಯಕತೆಗನುಸಾರವಾಗಿ ಇತರೆ ಗಿಡಗಳಿಗೆ ನೀರು ಹಾಯಿಸುವುದು. ತರಕಾರಿ ಮತ್ತು ಹೂವುಗಳನ್ನು ಕಡ್ಡಾಯವಾಗಿ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಕಟಾವು ಮಾಡಿ ನೀರು ಸಿಂಪಡಿಸಿ, ತಂಪಾದ ಜಾಗದಲ್ಲಿ ಶೇಖರಣೆ ಮಾಡುವುದು. ಅಂತರ್ಜಲ ಮಟ್ಟ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾವಿನ ತಾಕಿನಲ್ಲಿ ಮಳೆ ನೀರನ್ನು ಸಂಗ್ರಹಿಸಲು ಕಟ್ಟೆ ನಿರ್ಮಾಣ ಮಾಡುವುದು.
ಕೃಷಿ ಹೊಂಡಗಳ ಮೂಲಕ ಮಳೆ ನೀರನ್ನು ಸಂಗ್ರಹಣೆ ಮಾಡಿಟ್ಟುಕೊಂಡು, ಅವಶ್ಯಕತೆಗನುಸಾರವಾಗಿ ನೀರುಣಿಸುವುದು, ಕೊಳವೆಬಾವಿಗಳನ್ನು ಮರುಪೂರಣ ಮಾಡುವುದರಿಂದ ಅಂತರ್ಜಲ ನಿರ್ವಹಣೆಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ರೈತರು ಎಲ್‌ನಿನೋ ಪರಿಣಾಮ ಎದುರಿಸಬಹುದಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಾಂತರ ಜಿಲ್ಲೆಯು ಒಣಹವೆ ಹಾಗೂ ಮಳೆ ಆಶ್ರಿತ ತೋಟಗಾರಿಕೆಯಾಗಿದ್ದು, ಎಲ್ ನಿನೋ ಪರಿಣಾಮ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈತರು ಕೆಲವೊಂದು ಸಲಹೆ ಸೂಚನೆಗಳನ್ನು ಪಾಲಿಸಿದರೆ ಆರ್ಥಿಕ ನಷ್ಟದಿಂದ ಪಾರಾಗಬಹುದು. ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರಗಳು, ದೊಡ್ಡಬಳ್ಳಾಪುರ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಬಹುದು.
ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ