World Day Against Child Labor 
ಬೆಂಗಳೂರು ಗ್ರಾಮಾಂತರ

ಶಿಕ್ಷಣ ಬಲವಾದ ಆಯುಧ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಮಾಜದಿಂದ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೆ ಶಿಕ್ಷಣವೆಂಬುದು ಬಲವಾದ ಆಯುಧವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ್ ಭೀಮಸೇನ ಬಾಗಡಿ ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು. ಬಡತನ ಹಾಗೂ ಅನಕ್ಷರತೆಯಿಂದ ಬಾಲಕಾರ್ಮಿಕ ಪದ್ದತಿ ಹೆಚ್ಚಾಗುತ್ತಿದೆ. ಪ್ರತಿ ಮಗುವಿಗೆ ಶಿಕ್ಷಣ ಕಡ್ಡಾಯ ಶಿಕ್ಷಣವನ್ನು ಪಾಲಕರು ಕೊಡಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವ ಜತೆಗೆ ಬಾಲಕಾರ್ಮಿಕ ಪದ್ದತಿ ಸಂಪೂರ್ಣ ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ದೂರು ಸಮಿತಿ ಇಲ್ಲದಿದ್ದರೆ ಕಾನೂನು ಕ್ರಮ:
ಕಾರ್ಖಾನೆ ಮಾಲೀಕರು ಅಡ್ಡದಾರಿಯಲ್ಲಿ ಬಾಲಕ ಕಾರ್ಮಿಕರ ಆಧಾರ್ರ್‌ನಲ್ಲಿ ವಯಸ್ಸು ತಿದ್ದುಪಡಿ ಮಾಡಿ, ದುಡಿಮೆಗೆ ಪಡೆಯುತ್ತಿರುವುದು ಕಾನೂನು ಬಾಹಿರ. ಕಾರ್ಖಾನೆಗಳಲ್ಲಿ ಮಹಿಳಾ ಸುರಕ್ಷತೆ, ದೌರ್ಜನ್ಯ ನಡೆಯದಂತೆ ಆಂತರಿಕ ದೂರ ಸಮಿತಿ ಕಡ್ಡಾಯವಾಗಿ ಇರಬೇಕು. ಆಂತರಿಕ ದೂರ ಸಮಿತಿ ಇರದ ಕಾರ್ಖಾನೆ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಭೀಮಸೇನ ಬಾಗಡಿ ಹೇಳಿದರು. ವಿದ್ಯಾರ್ಥಿಗಳು ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಅರಿತು ತಮ್ಮ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಬೇಕು, ಬಾಲಕಾರ್ಮಿಕರ ರಕ್ಷಣೆಗಾಗಿ ಶಿಕ್ಷಕರು, ಪೋಲಿಸರಿಗೆ ಇಲ್ಲವೇ ಇಲಾಖೆ ಸಹಾಯವಾಣಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ದುಡಿಮೆಗೆ ಸೇರಿಸಿಕೊಳ್ಳಬಾರದು:
ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧಾ ಮಾತನಾಡಿ, 14 ವರ್ಷದೊಳಗಿನ ಬಾಲಕಾರ್ಮಿಕರನ್ನು ದುಡಿಮೆಗೆ ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು. ಅಪಾಯಕಾರಿ ಕಾರ್ಖಾನೆಗಳಲ್ಲಿ ದುಡಿಯುವ 18 ವರ್ಷದೊಳಗಿನ ಬಾಲಕಾರ್ಮಿಕರ ರಕ್ಷಣೆಗೆ ಅಧಿಕಾರಿಗಳು ಮುಂದಾಬೇಕು, ಬಾಲಕಾರ್ಮಿಕ ಕಾಯ್ದೆಯ ಜಾಗೃತಿ ಮೂಡಿಸಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು. ಪ್ರತಿ ಮಗುವಿಗೆ ಕಡ್ಡಾಯವಾಗಿ ಶಿಕ್ಷಣ ಸಿಗುವಂತೆ ಪಾಲಕರು ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು. ಮಕ್ಕಳ ದೌರ್ಜನ್ಯ ಹಾಗೂ ಬಾಲಕಾರ್ಮಿಕ ದುಡಿಮೆ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ನೆನಪಿನಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಮಾಹಿತಿ ತಿಳಿಸಬೇಕು. ಜಿಲ್ಲೆಯಲ್ಲಿ 120 ವಸತಿಶಾಲೆ ಹಾಗೂ ಹಾಸ್ಟೆಲ್ಗಳಿದ್ದು, ಬಡ ಪಾಲಕರು ತಮ್ಮ ಮಕ್ಕಳನ್ನು ಈ ಸಂಸ್ಥೆಗಳಿಗೆ ಸೇರಿಸಿ, ಶೈಕ್ಷಣಿಕ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಚಟವಾಗಿ ರೂಡಿಸಿಕೊಳ್ಳದೇ ಅವಶ್ಯಕ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಂಡು ಜ್ಞಾನಾರ್ಜನೆ ವೃದ್ದಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಕಿವಿ ಮಾತು ಹೇಳಿದರು.
ಮಕ್ಕಳು ದೇಶದ ಸಂಪತ್ತು:
ಕಾನೂನು ಪ್ರಾಧಿಕಾರ ಸೇವಾ ಅಧಿಕಾರೇತರ ಸದಸ್ಯ ವೆಂಕಟೇಶ್ ಮಾತನಾಡಿ, ಮಕ್ಕಳು ದೇಶದ ಸಂಪತ್ತು, ಆ ಸಂಪತ್ತು ಬೆಳೆಸುವ ಕೆಲಸವನ್ನು ಪ್ರತಿ ಪಾಲಕರೂ ಮಾಡಬೇಕು ಎಂದು ಕರೆ ನೀಡಿದರು. ಬಾಲಕಾರ್ಮಿಕ ಪದ್ಧತಿ ತಡೆಯುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಮಹತ್ವದ್ದು, ಪಂಚಾಯಿತಿ ಮಟ್ಟದಿಂದಲೇ ಮಕ್ಕಳ ಹಕ್ಕುಗಳು, ಬಾಲಕಾರ್ಮಿಕ ಪದ್ಧತಿ ನಿಷೇಧ ಹಾಗೂ ಬಾಲ್ಯವಿವಾಹ ತಡೆ ಬಗ್ಗೆ ನಿರಂತರ ಅರಿವು ಮೂಡಿಸಬೇಕು ಎಂದರು.