workshop 
ಬೆಂಗಳೂರು ಗ್ರಾಮಾಂತರ

ನಮ್ಮ ಪರಿಸರ ನಾವೇ ಹಾಳುಮಾಡಿದಂತೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು ಇದರಿಂದ ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಂಡಂತಾಗುತ್ತದೆ ಜತೆಗೆ ನಮ್ಮ ಆರೋಗ್ಯವನ್ನು ನಾವೇ ಕೆಡಿಸಿಕೊಂಡಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದರು.
ದೇವನಹಳ್ಳಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ವತಿಯಿಂದ ಹಮ್ಮಿಕೊಂಡಿದ್ದ ಘನತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನಗರಸಭೆ, ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳಿಗೆ ನೀಡುವ ಮೂಲಕ ಘನ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸರ್ಕಾರ ಘನ ತ್ಯಾಜ್ಯ ನಿರ್ವಹಣಾ ನಿಯಮ ಅನುಷ್ಠಾನಗೊಳಿಸಿದ್ದು, ಸಾರ್ವಜನಿಕರು ಮನೆಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ಒಣ ತ್ಯಾಜ್ಯ, ಹಸಿ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಹಾಗೂ ಕಪ್ಪು ತ್ಯಾಜ್ಯವಾಗಿ ನಾಲ್ಕು ವಿಭಾಗದಲ್ಲಿ ವಿಂಗಡಿಸಿ, ಸ್ವಚ್ಛ ವಾಹಿನಿ ವಾಹನಕ್ಕೆ ನೀಡುವಲ್ಲಿ ಸಹಕರಿಸಬೇಕು. ಇದರಿಂದ ಸ್ವಚ್ಚ ಹಾಗೂ ಸುಂದರ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.
ಅಧಿಕಾರಿಗಳು ಅರಿವು ಮೂಡಿಸಬೇಕು:
ಪೌರಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳ ಸ್ವಚ್ಚ ವಾಹಿನಿ ವಾಹನ ಮನೆ ಬಾಗಿಲಿಗೆ ಬಂದಾಗ ವಿಂಗಡಿಸಿದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿಕೊಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಡಿಸಿ ತಿಳಿಸಿದರು. ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಿ ಉದ್ದೇಶಗಳಿಗೆ ಸೂಕ್ತ ಜಾಗ ಕೊಡಿಸಲು ಪ್ರಯತ್ನಿಸಬೇಕು. ಜತೆಗೆ ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
4 ವಿಭಾಗಗಳಲ್ಲಿ ಕಸ ವಿಂಗಡಣೆ:
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎಸ್.ರಮೇಶ್‌ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ನಿಯಮದಂತೆ ಭಾರತವನ್ನು ಸ್ವಚ್ಛ, ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರವಾಗಿಸುವ ಗುರಿಯನ್ನು ಹೊಂದಿವೆ. ಆಹಾರದ ತುಣುಕುಗಳು, ತರಕಾರಿ ಸಿಪ್ಪೆಗಳು ಮತ್ತು ಅಡುಗೆ ತ್ಯಾಜ್ಯ ಹಸಿ ತ್ಯಾಜ್ಯವಾಗಿ, ಕಾಗದ, ಪ್ಲಾಸ್ಟಿಕ್, ಲೋಹ ಮತ್ತು ಗಾಜು ಮತ್ತಿತರ ವಸ್ತುಗಳು ಒಣ ತ್ಯಾಜ್ಯವಾಗಿ
ಡೈಪರ್‌ಗಳು ಮತ್ತು ನೈರ್ಮಲ್ಯ ನ್ಯಾಪ್‌ಕಿನ್‌ಗಳನ್ನು ನೈರ್ಮಲ್ಯ ತ್ಯಾಜ್ಯವಾಗಿ ವಿಶೇಷ ಆರೈಕೆ ತ್ಯಾಜ್ಯವಾಗಿ ವಿಂಗಡಿಸಲಾಗಿದೆ ಎಂದು ಮಾಹಿತಿ ನೀಡಿದರು. ತ್ಯಾಜ್ಯ ನಿರ್ವಹಣಾ ಮಾನದಂಡಗಳನ್ನು ಪಾಲಿಸದ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಸಂಸ್ಥೆಗಳು ಪರಿಸರ ದಂಡ ಪಾವತಿಸಬೇಕು. ದೊಡ್ಡ ವಸತಿ ಸಂಕೀರ್ಣಗಳು, ವಿಶ್ವವಿದ್ಯಾಲಯಗಳು, ಮಾಲ್‌ಗಳು ಮತ್ತು ಸರ್ಕಾರಿ ಕಟ್ಟಡಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಇದ್ದು, ಅವರು ಉತ್ಪಾದಿಸುವ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ಸಂಸ್ಕರಿಸಬೇಕು ಎಂದು ತಿಳಿಸಿದರು.
ಆಪತ್ತು ಖಚಿತ:
ಸಂಪನ್ಮೂಲ ವ್ಯಕ್ತಿ ಸಂಚಾರಿ ಸಂಪತ್ ಮಾತನಾಡಿ, ಪರಿಸರ ಮಾಲಿನ್ಯ ತಪ್ಪಿಸಲು ಘನತ್ಯಾಜ್ಯ ನಿರ್ವಹಣೆ ನಿಯಮಪಾಲನೆ ಅತ್ಯವಶ್ಯಕವಾಗಿದೆ. ಕಸ ನಿರ್ವಹಣೆ ಸಮರ್ಪಕವಾಗಿ ನಿರ್ವಹಣೆ ಮಾಡದಿದಿದ್ದರೆ ಸಮಾಜಕ್ಕೆ ಆಪತ್ತು ಖಚಿತ ಎಂದು ಹೇಳಿದರು. ನಾವೆಲ್ಲರೂ ದಿನಂಪ್ರತಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.ಇದರಿಂದ ಮಣ್ಣಿನ ಸವಕಳಿ ಕುಂಠಿತವಾಗಲು ಕಾರಣವಾಗಲಿದೆ. ಸಾರ್ವಜನಿಕರು ನಾಲ್ಕು ವಿಧದಲ್ಲಿ ಕಸವನ್ನು ವಿಂಗಡಣೆ ಮಾಡುವುದರಿಂದ ಪಂಚಾಯತಿಗಳಿಗೆ ತ್ಯಾಜ್ಯ ನಿರ್ವಹಣೆಗೆ ತುಂಬಾ ಸಹಕಾರಿಯಾಗುತ್ತದೆ ಎಂದರು. ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಪರಿಸರ ಮತ್ತು ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ. ನಗರ ಘನತ್ಯಾಜ್ಯವು ಮನೆಯ ತ್ಯಾಜ್ಯವನ್ನು ಮಾತ್ರವಲ್ಲದೆ ಅಪಾಯಕಾರಿ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯ ಇತ್ಯಾದಿಗಳನ್ನು ಸಹ ಒಳಗೊಂಡಿದೆ ಎಂಬ ಅಂಶದಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಹೀಗಾಗಿ ತ್ಯಾಜ್ಯವನ್ನು ಕಡಿಮೆ ಮಾಡಿ ಪರಿಸರವನ್ನು ಉಳಿಸಿ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.