ಅಪರ ಜಿಲ್ಲಾಧಿಕಾರಿ ಸೈಯದ್ ಆಯಿಶಾ ಸಲಹೆ 
ಬೆಂಗಳೂರು ಗ್ರಾಮಾಂತರ

ವಿಪತ್ತು ತಡೆಗೆ ಮುಂಜಾಗ್ರತೆ ಅಗತ್ಯ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಾರ್ಖಾನೆಗಳಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ರಾಸಾಯನಿಕ ಸೋರಿಕೆ ವಿಪತ್ತನ್ನು ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮಗಳ ಮೂಲಕ ತಡೆಯಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸೈಯದ್ ಆಯಿಶಾ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ಓಬೆದೆನಹಳ್ಳಿ ಕೈಗಾರಿಕಾ ಪ್ರದೇಶದ ಅಜೆಕ್ಸ್ ಕಂಪನಿ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಕೈಗಾರಿಕಾ ಇಲಾಖೆ ಹಾಗೂ ಅಜೆಕ್ಸ್ ಕಂಪನಿ ಸಹಯೋಗದಲ್ಲಿ ರಾಸಾಯನಿಕ ಸೋರಿಕೆ ನಿರ್ವಹಣೆ ದಿನ-2025 ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಕೈಗಾರಿಕೆಗಳು ಅಥವಾ ಕಾರ್ಖಾನೆಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳು ಎದುರಿಸಲು ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅರಿವು ಮೂಡಿಸುವ ಜತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಇದರ ತೆಗೆ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿಪತ್ತುಗಳ ಬಗ್ಗೆ ಕಾಲಕಾಲಕ್ಕೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಇದರಿಂದ ವಿಪತ್ತುಗಳ ಸಮಯದಲ್ಲಿ ಪ್ರಾಣಹಾನಿಯಂತ ದುರಂತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಆಗಾಗ ಜಾಗೃತಿ ಕಾರ್ಯಕ್ರಮಗಳು ಬೇಕು:
ಕೈಗಾರಿಕೆಗಳು ವಿಪತ್ತು ನಿರ್ವಹಣೆಗಾಗಿ ಆಗಾಗ ಅಣುಕು ಪ್ರದರ್ಶನ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಇದರಿಂದ ರಾಸಾಯನಿಕ ಸೋರಿಕೆ ಸೇರಿ ಇನ್ನಿತರ ವಿಪತ್ತುಗಳು ಸಂಭವಿಸಿದಾಗ ಕಾರ್ಮಿಕರು, ಸಾರ್ವಜನಿಕರು ಹೇಗೆ ಸನ್ನದ್ಧರಾಗಬೇಕು, ಮುಂಜಾಗ್ರತೆ ಕ್ರಮ ಹೇಗೆ ಕೈಗೊಳ್ಳಬೇಕು ಎಂಬ ಅರಿವು ಬರುತ್ತದೆ ಎಂದು ಎಡಿಸಿ ತಿಳಿಸಿದರು. ಯಾವುದೇ ಒಂದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಸಹಕಾರ, ಸಮಯ, ಅಧಿಕಾರಿಗಳ ಸ್ಪಂದನೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್, ಅಗ್ನಿ ಶಾಮಕ ದಳ ಹಾಗೂ ಸಂಬಂಧಿಸಿದ ಇಲಾಖೆಗಳು ಮತ್ತು ಕೈಗಾರಿಕೆಗಳ ಸುರಕ್ಷಿತ ಕ್ರಮಗಳು ಹೊಣೆ ಹೊತ್ತವರು ವಿಪತ್ತುಗಳನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು. ಸಾರ್ವಜನಿಕರು ಕೂಡ ವಿಪತ್ತುಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಸುರಕ್ಷತೆಗೆ ಒತ್ತು ನೀಡಬೇಕು:
ಕಾರ್ಯಗಾರದಲ್ಲಿ ಕೈಗಾರಿಕೆಗಳ ಹೆಚ್ಚುವರಿ ನಿರ್ದೇಶಕ ಕೆ.ಜಿ.ನಂಜಪ್ಪ ಮಾತನಾಡಿ, ಕಾರ್ಖಾನೆಗಳು ಅಗತ್ಯ ಮುಂಜಾಗ್ರತೆ ಇರದೇ ಅಧಿಕ ಪ್ರಮಾಣದ ರಾಸಾಯನಿಕ ಸಂಗ್ರಹ ಮಾಡಬಾರದು. ಕಂಪನಿಗಳು ತಮ್ಮ ಆದಾಯದಲ್ಲಿ ಬಹುಪಾಲು ಸುರಕ್ಷತೆಗೆ ಒತ್ತು ನೀಡಬೇಕು ಎಂದರು.
ಇಪಿಎ್ಒ ಸದುಪಯೋಗ ಮಾಡಿಕೊಳ್ಳಿ:
ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಆರೋಗ್ಯ ಹಾಗೂ ಭವಿಷ್ಯ ನಿಧಿ ದೃಷ್ಟಿಯಿಂದ ತಪ್ಪದೇ ಇಪಿಎ್ಒ ಖಾತೆ ತೆರೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಪಿಎ್ಒ ಯಲಹಂಕ ಪ್ರಾದೇಶಿಕ ಆಯುಕ್ಷೆ ಸ್ವಾಗತ ರೈ ತಿಳಿಸಿದರು. ಕಾರ್ಮಿಕರಿಲ್ಲದೆ ಕೈಗಾರಿಕೆಗಳ ಅಭಿವೃದ್ಧಿ ಸಾಧ್ಯವಿಲ್ಲ ಅದೇ ರೀತಿ ಕಾರ್ಮಿಕರ ಆರೋಗ್ಯವೂ ಬಹಳ ಮುಖ್ಯ ಈ ನಿಟ್ಟಿನಲ್ಲಿ ಕಂಪನಿಗಳು ಕಾರ್ಮಿಕರ ಆರೋಗ್ಯ ಹಾಗೂ ಭವಿಷ್ಯ ನಿಧಿಯ ಬಗ್ಗೆ ಒತ್ತು ನೀಡಬೇಕು ಎಂದರು.