workshop 
ಬೆಂಗಳೂರು ಗ್ರಾಮಾಂತರ

ಯುವ ಸಮೂಹಕ್ಕೆ ಜಾಗೃತಿ ಮೂಡಿಸಬೇಕು

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿ ಆಗಿದ್ದು, ಯುವ ಸಮೂಹಕ್ಕೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.
ದೇವನಹಳ್ಳಿ ಪಟ್ಟಣದ ಬೊಮ್ಮವಾರ ಗ್ರಾಮದಲ್ಲಿರುವ ಗಾಂಧೀಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತು ನಿಯಂತ್ರಣ ಕುರಿತು ಅರಿವು, ಮಾಸ್ಟರ್ ತರಬೇತಿದಾರರಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು,ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವತಿಯಿಂದ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಅತೀಮುಖ್ಯವಾಗಿದೆ. ಜತೆಗೆ ಯುವಸಮುದಾಯಕ್ಕೆ ಅರಿವು ಹೆಚ್ಚಬೇಕಿದೆ ಜತೆಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಎಲ್ಲಿಯಾದರೂ ಮಾದಕ ವಸ್ತುಗಳ ಮಾರಾಟ ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು. ಮಾಹಿತಿ ನೀಡಿದವರ ಹೆಸರು ಗೌಪ್ಯವಿಡಲಾಗುವುದು ಆದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೆ ಮಾಹಿತಿ ನೀಡಬೇಕು ಜತೆಗೆ ಎಲ್ಲಿಯಾದರೂ ಮಾದಕ ವಸ್ತುಗಳ ಸೇವನೆ ಕಂಡುಬಂದರೂ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸಮಾಜದ ಪಿಡುಗಾಗಿ ಪರಿಣಮಿಸಿದೆ:
ಮಾದಕ ವ್ಯಸನವು ಸಮಾಜದ ಒಂದು ಪಿಡುಗಾಗಿ ಪರಿಣಮಿಸಿದೆ. ಪಾಲಕರು ತಮ್ಮ ಮಕ್ಕಳ ಚಲನವಲನ ಬಗ್ಗೆ ನಿತ್ಯ ಮತ್ತು ಗಮನಹರಿಸಬೇಕು, ಶಿಕ್ಷಕರು ಕೂಡ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಸಾಕಷ್ಟು ಯುವಕ ಯುವತಿಯರು ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಾರೆ. ಹಾಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಕುರಿತು ತಿಳುವಳಿಕೆ ಮೂಡಿಸುವುದು, ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಹಾಗಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ನೀವು ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತಹ ಕೆಲಸ ಮಾಡಿ, ಮಾದಕ ವ್ಯಸನ ಮುಕ್ತ ಸಮಾಜಕ್ಕೆ ನಾವೆಲ್ಲರೂ ಕೈ ಜೋಡಿಸಿ ಕೆಲಸ ಮಾಡಬೇಕು ಎಂದರು.
ಮಾದಕ ವಸ್ತು ನಿರ್ಮೂಲನೆಗೆ ಯುದ್ದ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ ತರಬೇತಿಗೆ ಶಿಕ್ಷಕರನ್ನು ಆಯ್ಕೆ ಮಾಡಿರುವ ಉದ್ದೇಶ ಶಿಕ್ಷಕರು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು. ಯುವ ಸಮೂಹವನ್ನು ಮಾದಕ ವ್ಯಸನದಿಂದ ದೂರ ಇಡಬೇಕು. ಮಾದಕ ವಸ್ತುಗಳ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಇದು ಒಂದು ಯುದ್ಧವೆಂದರೆ ತಪ್ಪಾಗಲಾರದು, ಪ್ರತಿ ವಿದ್ಯಾರ್ಥಿಗೆ ಅರಿವು ತಲುಪಬೇಕು. ಡ್ರಗ್ಸ್ ಮುಕ್ತ ಜಿಲ್ಲೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು. ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಉಪನ್ಯಾಸಕರಿಂದ ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಾಟ, ಬಳಕೆ ಕುರಿತು ಶಾಲಾ ಕಾಲೇಜಿನ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ. ಈ ಮೇಲ್ವಿಚಾರಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ, ಕಾಲೇಜುಗಳಲ್ಲಿ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಿದ್ದು ಮಾದಕ ವಸ್ತುಗಳ ನಿಯಂತ್ರಣಕ್ಕೆ ಸಹಕಾರಿ ಆಗಲಿದೆ ಎಂದರು.