Wire fencing mandatory for agricultural ponds 
ಬೆಂಗಳೂರು ಗ್ರಾಮಾಂತರ

ಕೃಷಿ ಹೊಂಡಗಳಿಗೆ ತಂತಿ ಬೇಲಿ ಕಡ್ಡಾಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೃಷಿ ಹೊಂಡಗಳಲ್ಲಿ ಆಕಸ್ಮಿಕ ಸಾವುಗಳನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕಡ್ಡಾಯವಾಗಿ ಕೃಷಿ ಹೊಂಡಗಳಿಗೆ ತಂತಿ ಬೇಲಿ ಅಳವಡಿಸಿ ಜತೆಗೆ ಎಚ್ಚರಿಕೆಯ ಸೂಚನಾ ಫಲಕ ಪ್ರದರ್ಶಿಸಬೇಕು ಎಂದು ಜಿಲ್ಲೆಯ ರೈತರಿಗೆ ಜಂಟಿ ಕೃಷಿ ನಿರ್ದೇಶಕಿ ಬಿ.ಜಿ.ಕಲಾವತಿ ಸೂಚನೆ ನೀಡಿದ್ದಾರೆ.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದ ಕೃಷಿ ಇಲಾಖೆ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಕೃಷಿ ಹೊಂಡಗಳ ಸುರಕ್ಷತೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಕೃಷಿಕರಿಗೆ ನೀರಿನ ಆಸರೆಯಾಗಿರುವ ಕೃಷಿ ಹೊಂಡಗಳು ಅನೇಕ ಸಂದರ್ಭಗಳಲ್ಲಿ ಜೀವಹಾನಿಗೆ ಕಾರಣವಾಗುತ್ತಿದೆ. ಅದರಲ್ಲೂ ಅನೇಕ ಸಂದರ್ಭಗಳಲ್ಲಿ ಕೃಷಿ ಹೊಂಡಗಳಲ್ಲಿ ಈಜಲು ಹೋಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಿವೆ. ಕೃಷಿ ಹೊಂಡಗಳನ್ನು ಈಜುಕೊಳಗಳಾಗಿ ಬಳಸಬೇಡಿ ಎಂಬುದು ಜಿಲ್ಲಾಡಳಿತದ ಮನವಿಯಾಗಿದೆ ಎಂದು ಕಲಾವತಿ ತಿಳಿಸಿದರು. ಜಿಲ್ಲೆಯ ಬಹುತೇಕ ಪ್ರದೇಶಗಳು ಮಳೆಯಾಶ್ರಿತವಾಗಿದ್ದು, ಮಳೆ ಕೊರತೆಯ ಸಂದರ್ಭಗಳಲ್ಲಿ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರು ಬೆಳೆಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ರೈತರಿಗೆ ಉತ್ತಮ ಬೆಳೆ ಉತ್ಪಾದನೆಗೆ ನೆರವಾಗುವ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ, ಕ್ಷೇತ್ರ ಬದು, ಪಾಲಿಥೀನ್ ಹೊದಿಕೆ, ತಂತಿ ಬೇಲಿ, ಪಂಪ್‌ಸೆಟ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ ಇವುಗಳನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಹಾಯಧನ ಸೌಲಭ್ಯವಿದೆ:
ಕೃಷಿ ಭಾಗ್ಯ ಯೋಜನೆಯಡಿ ರೈತರು ಸ್ವತಃ ಕೃಷಿ ಹೊಂಡ ಮತ್ತು ಕ್ಷೇತ್ರ ಬದು ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಿಸುವ ಕುರಿತು ದೃಢೀಕರಣ ಪತ್ರವನ್ನು ನೀಡಿದ ಮೇಲೆ, ಒಟ್ಟು ಸಹಾಯಧನದ ಶೇ. 75 ಮೊತ್ತವನ್ನು ಮೊದಲ ಕಂತಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ತಂತಿ ಬೇಲಿ ಅಳವಡಿಸಿದ ನಂತರ ಸಾಮಾನ್ಯ ವರ್ಗದ ರೈತರಿಗೆ ತಂತಿ ಬೇಲಿ ವೆಚ್ಚದ ಶೇ. 40 ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರಿಗೆ ಶೇ,50 ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್‌ಖಾತೆಗೆ ಜಮೆ ಮಾಡಲಾಗುತ್ತದೆ. ಸೂಚನಾ ಫಲಕ ಅಳವಡಿಸಲು 2 ಸಾವಿರ ರೂ.ಸಹಾಯಧನ ನೀಡಲಾಗುತ್ತದೆ. ಇದರೊಂದಿಗೆ ಪ್ಯಾಕೇಜ್ನ ಎಲ್ಲಾ ಘಟಕಗಳನ್ನು ಅಳವಡಿಸಿಕೊಂಡ ನಂತರ ಉಳಿದಿರುವ ಶೇ. 25ರ ಸಹಾಯಧನ ಕೂಡ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಇಲಾಖೆಗೆ ಭೇಟಿ ನೀಡಿ ರೈತರು ಲಭ್ಯವಿರುವ ಸಹಾಯಧನದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸುರಕ್ಷಿತ ಕೃಷಿಗೆ ಕೈಜೋಡಿಸಿ:
ಸರ್ಕಾರ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಇದರಲ್ಲಿ ಕೃಷಿಹೊಂಡ ಯೋಜನೆಯೂ ಮಹತ್ವದ್ದಾಗಿದೆ. ಈ ಯೋಜನೆಯ ಸದ್ಭಳಕೆಯಾಗಬೇಕು, ಕೃಷಿಹೊಂಡಗಳು ಯಾವುದೇ ಕಾರಣಕ್ಕೂ ಜೀವಹಾನಿಗಳಿಗೆ ಕಾರಣವಾಗಬಾರದು ಈ ನಿಟ್ಟಿನಲ್ಲಿ ರೈತರು ಮುಂಜಾಗ್ರತೆ ವಹಿಸಬೇಕು. ಕೃಷಿ ಇಲಾಖೆಯ ಮಾರ್ಗಸೂಚನೆಗಳನ್ನು ಪಾಲಿಸಬೇಕು ಈ ಮೂಲಕ ಸುರಕ್ಷಿತ ಕೃಷಿಗೆ ಕೈಜೋಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಕಲಾವತಿ ಮನವಿ ಮಾಡಿದ್ದಾರೆ.
ಮಕ್ಕಳ ಮೇಲೆ ನಿಗಾ ಇಡಿ:
ಸಾಮಾನ್ಯವಾಗಿ ಬೇಸಿಗೆ ರಜೆ ವೇಳೆ ಮಕ್ಕಳು ಕೃಷಿಹೊಂಡಗಳತ್ತ ಈಜಲು ಹೋಗುವುದು ಹೆಚ್ಚಿರುತ್ತದೆ, ನಗರ ಪಟ್ಟಣ ಪ್ರದೇಶಗಳಿಂದ ಹಳ್ಳಿಗಳಿಗೆ ಆಗಮಿಸುವ ಮಕ್ಕಳು ಇನ್ನಿತರ ಮಕ್ಕಳ ಜತೆ ಸೇರಿ ಪಾಲಕರ ಕಣ್ತಪ್ಪಿಸಿ ಕೃಷಿಹೊಂಡಗಳತ್ತ ದಾವಿಸುತ್ತಾರೆ. ಆದ್ದರಿಂದ ಈ ಬಗ್ಗೆ ಪಾಲಕರು ಮುಂಜಾಗ್ರತೆ ವಹಿಸಬೇಕು. ಕೃಷಿ ಹೊಂಡಗಳ ಅಪಾಯದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.