ಅಪಘಾತದಲ್ಲಿ ಮೃತಪಟ್ಟ ಲ್ಮದೇವಿ, ಗಂಭಿರವಾಗಿ ಗಾಯಗೊಂಡಿರುವ ಪತಿ ವಿಜಯಕುಮಾರ್​. 
ಬೆಂಗಳೂರು ಗ್ರಾಮಾಂತರ

ಲಾರಿ ಹರಿದು ಪತ್ನಿ ಸಾವು, ಪತಿ ಗಂಭೀರ

> ಮಗಳ ಮದುವೆ ಆಮಂತ್ರಣ ಕೊಡಲು ಹೊರಟ್ಟಿದ್ದಾಗ ದುರಂತ

ನೆಲಮಂಗಲ: ಸಂಬಂಧಿಕರಿಗೆ ಮಗಳ ಮದುವೆಯ ಆಮ್ರಂತ್ರಣ ಕೊಡಲು ದ್ವಿಚಕ್ರವಾಹನದಲ್ಲಿ ಹೊರಟಿದ್ದಾಗ ಮೈಲನಹಳ್ಳಿ ಬಳಿ ಲಾರಿ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಪತಿಯ ಸ್ಥಿತಿ ಚಿಂತಾಜನಕವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಉದ್ದಿಚಿಕ್ಕನಹಳ್ಳಿಯ ಲ್ಮದೇವಮ್ಮ (46) ಮೃತಪಟ್ಟಿದ್ದು, ಅವರ ಪತಿ ವಿಜಯಕುಮಾರ್​ (52) ಅವರ ಒಂದು ಕಾಲು ಸಂಪೂರ್ಣ ನಜ್ಜುಗುಜ್ಜಾಗಿದೆ.

ಆಗಿದ್ದೇನು?: ಶುಕ್ರವಾರ ಬೆಳಗ್ಗೆ 10ಗಂಟೆ ಸುಮಾರಿಗೆ ಸ್ವಗ್ರಾಮದಿಂದ ನೆಲಮಂಗಲ ಕಡೆಗೆ ಬೈಕ್​ನಲ್ಲಿ ದಂಪತಿ ಬರುತ್ತಿದ್ದಾಗ ಹಿಂಬಂದಿಯಿಂದ ಸಿಮೆಂಟ್​ ಲಾರಿ ಡಿಕ್ಕಿ ಹೊಡೆದಿದೆ. ಲಾರಿಯ ಚಕ್ರಗಳು ಲ್ಮದೇವಮ್ಮ ಅವರ ಮೇಲೆ ಹರಿದು, ದೇಹ ಎರಡು ಭಾಗವಾಗಿ ಅಂಗಾಂಗಗಳು ರಸ್ತೆಯಲ್ಲಿ ಛಿದ್ರವಾಗಿ ಬಿದ್ದು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ವಿಜಯಕುಮಾರ್​ ಅವರ ಕಾಲುಗಳು ಸಹ ಲಾರಿ ಚಕ್ರಕ್ಕೆ ಸಿಲುಕಿದ್ದು, ಒಂದು ಕಾಲು ಸಂಪೂರ್ಣ ನಜ್ಜುಗುಜ್ಜಾಗಿ, ಗಂಭೀರ ಗಾಯವಾಗಿದೆ. ಸದ್ಯ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಸಾಂತ್ಯಕ್ಕೆ ಮಗಳ ಮದುವೆ!: ದಂಪತಿಗಿದ್ದ ಇಬ್ಬರು ಹೆಣ್ಣುಮಕ್ಕಳ ಪೈಕಿ ಹಿರಿಯ ಪುತ್ರಿಗೆ ವಿವಾಹ ಮಾಡಿದ್ದರು. ನ.26 ಮತ್ತು 27ರಂದು ಕಿರಿಯ ಪುತ್ರಿ ವಿಹಾಹ ನಿಶ್ವಯವಾಗಿದ್ದು, ಸಂಬಂಧಿಕರಿಗೆ ಲಗ್ನಪತ್ರಿಕೆ ವಿತರಿಸಲು ದಂಪತಿ ನೆಲಮಂಗಲದ ಕಡೆಗೆ ಬರುತ್ತಿದ್ದಾಗ ವಿಧಿ ಆಟವಾಡಿದೆ. ತಾಯಿಯನ್ನು ಕಳೆದುಕೊಂಡಿದ್ದಲ್ಲದೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಪರಿಸ್ಥಿತಿಯಲ್ಲಿರುವ ತಂದೆಯನ್ನು ಕಂಡ ಪುತ್ರಿಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ನೇಹಿತರ ಕಣ್ಣೀರು: ದಾಬಸ್​ಪೇಟೆ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿಜಯ್​ಕುಮಾರ್​, ಒಂದಿಷ್ಟು ವರ್ಷ ಕೆಲಸ ಬಿಟ್ಟಿದ್ದರು. ಮಗಳ ಮದುವೆ ಮಾಡುವ ಇಂಗಿತದೊಂದಿಗೆ ಇತ್ತೀಚೆಗೆ ಮೈಲನಹಳ್ಳಿ ಇಂಡಸ್ಟ್ರೀಸ್​ನಲ್ಲಿ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದರು. ಕಿರಿಯ ಪುತ್ರಿ ವಿವಾಹ ಮಾಡಿ ಜವಾಬ್ದಾರಿ ತೀರಿಸುವ ಬಗ್ಗೆ ಆಗಾಗ ಹೇಳಿಕೊಳ್ಳುತ್ತಿದ್ದ ಎಂದು ವಿಜಯಕುಮಾರ್​ ಸಹೋದ್ಯೋಗಿ, ಸ್ನೇಹಿತರು ಕಣ್ಣೀರಿಟ್ಟರು.

ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಬಳಿಕ ಲಾರಿ ಚಾಲಕ ಹಾಗೂ ನಿರ್ವಾಹಕ ವಾಹನ ಬಿಟ್ಟು ಪರಾರಿಯಾಗಿದ್ದಾರೆ.