ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಯಾವುದೇ ನದಿಮೂಲಗಳಿಲ್ಲದ ಕೇವಲ ಕೊಳವೆಬಾವಿಗಳ ಆಶ್ರಿತ ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿವ ನೀರು ಎಷ್ಟು ಯೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಕೊಳವೆಬಾವಿಗಳಲ್ಲಿ ವಿವಿಧ ಹಂತದಲ್ಲಿ ಗುಣಮಟ್ಟ ಪರೀಕ್ಷೆ ಆರಂಭಿಸಲಾಗಿದೆ.
ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಅಭಿಯಾನದ ಮಾದರಿಯಲ್ಲಿ ಪಂಚಾಯಿತಿ ಮಟ್ಟದಿಂದ ನೀರಿನ ತಪಾಸಣೆ ಆರಂಭಿಸಿದ್ದು, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಪ್ರತಿ ಶುದ್ಧ ನೀರಿನ ಘಟಕಗಳಲ್ಲಿನ ನೀರಿನ ತಪಾಸಣೆಗೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 13,700 ಕಡೆಗಳಲ್ಲಿ ಸ್ಯಾಂಪಲ್ ಟೆಸ್ಟ್ ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತಿದೆ, ಪೂರ್ವ ಮುಂಗಾರು ಮತ್ತು ಮುಂಗಾರು ನಂತರದ ಅವಧಿಯಲ್ಲೂ ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ಬೇರೆ ಬೇರೆ ಕಡೆ ಪ್ರಯತ್ನಿಸಲಾಗುತ್ತಿದೆ ಆಯ್ದ ಭಾಗಗಳಲ್ಲಿ ಸ್ಯಾಂಪಲ್ ಪಡೆದು ಅದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ಎಲ್ಲ ಕಡೆಗಳಲ್ಲಿ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಮುಂದಾಗಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಳೆದು ಕೆಲವು ವರ್ಷಗಳಿಂದ ವಾಡಿಕೆಯಷ್ಟು ಮಳೆಯಾಗುತ್ತಿದ್ದು ಕೆರೆಕಟ್ಟೆಗಳು ತುಂಬಿ ಅಂತರ್ಜಲ ಮಟ್ಟ ಸುಧಾರಿಸಿದ್ದರೂ, ಬೇಸಿಗೆ ಆರಂಭಕ್ಕೆ ಮೊದಲೇ ಜಲಮೂಲಗಳು ಒತ್ತಿ ಹೋಗುತ್ತವೆ, ಇವುಗಳನ್ನೇ ಅವಲಂಬಿಸಿರುವ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿನ ಕೊರತೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಅಂತರ್ಜಲ ಮಟ್ಟ ಸುಧಾರಣೆಯೂ ಈ ಕಾರ್ಯಕ್ರಮದಡಿ ಸೇರಿಸಲಾಗಿದ್ದು, ಜಲಮೂಲಗಳ ರಕ್ಷಣೆ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.
ಆರ್‌ಒ ಪ್ಲಾಂಟ್‌ಗಳ ಮೇಲೆ ನಿಗಾ:
ಜಿಲ್ಲೆಯಲ್ಲಿ ಬಹುತೇಕ ಶುದ್ಧ ಕುಡಿವ ನೀರಿನ ಘಟಕಗಳಿಂದಲೇ ಜನರು ಕುಡಿವ ನೀರು ಬಳಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ನಿರ್ವಹಣೆ ಕೊರತೆ ಎದುರಾಗಿದೆ ಎಂಬ ಆರೋಪ ಕೇಳಿಬರುತ್ತಿದೆ, ಕಾಲಕಾಲಕ್ಕೆ ಸರ್ವಿಸ್ ಮಾಡಿಸದ ಹಿನ್ನೆಲೆಯಲ್ಲಿ ನೀರಿನ ಶುದ್ಧತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲೆಯಲ್ಲಿನ ಪ್ರತಿ ಶುದ್ಧ ಕುಡಿವ ನೀರಿನ ಘಟಕಗಳ ಮೇಲೆ ನಿಗಾ ವಹಿಸುವಂತೆ ಸ್ಥಳೀಯ ಆಡಳಿತದ ಸಿಬ್ಬಂದಿಗೆ ಸೂಚನೆ ನೀಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯಾ ಪಂಚಾಯಿತಿಗೆ ಜವಾಬ್ದಾರಿ ವಹಿಸಿದ್ದು ಎಲ್ಲಿಯಾದರೂ ದೋಷ ಕಂಡುಬಂದರೆ ತಕ್ಷಣ ಮಾಹಿತಿ ನೀಡಿ ಸರಿಪಡಿಸುವ ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಟ್ಯಾಂಕರ್‌ಗಳ ಗುಣಮಟ್ಟ ಪರೀಕ್ಷೆ:
ಬೇಸಿಗೆಯಲ್ಲಿ ಸಾಮಾನ್ಯವಾಗಿ ತಲೆದೋರುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಖಾಸಗಿ ಟ್ಯಾಂಕರ್ ಮೊರೆ ಹೋಗುವುದು ಸಹಜ. ಆದರೆ ಈ ಟ್ಯಾಂಕರ್‌ಗಳಲ್ಲಿನ ನೀರು ಬಳಕೆಗೆ ಅಥವಾ ಕುಡಿಯಲು ಯೋಗ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಸಾಕಷ್ಟು ಟ್ಯಾಂಕರ್‌ಗಳಲ್ಲಿ ನೀರು ಶೇಖರಿಸಲು ಬೇಕಾದ ಮಾನದಂಡ ಬಳಕೆ ಮಾಡುವುದಿಲ್ಲ. ಇಪಿಎ್ ಕೋಟಿಂಗ್ ಇಲ್ಲದ ವಾಹನಗಳಲ್ಲಿ ನೀರು ಪೂರೈಸಿದರೆ ಅದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಈ ಹಿನ್ನೆಲೆಯಲ್ಲಿ ನೀರು ಪೂರೈಸುವ ಟ್ಯಾಂಕರ್‌ಗಳ ತಪಾಸಣೆ ಅತ್ಯಗತ್ಯ ಎಂದು ಜಿಲ್ಲಾಡಳಿತ ತಾಕೀತು ಮಾಡಿದೆ.
ಬೆಂಗಳೂರು ಗ್ರಾಮಂತರ ಜಿಲ್ಲಾ ವ್ಯಾಪ್ತಿಯಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು, ಕೊಳವೆಬಾವಿಗಳು ಸೇರಿ ವಿವಿಧ ಹಂತಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇದರ ಬಗ್ಗೆ ಗಮನ ಹರಿಸಲಾಗಿದೆ. 13700 ಕಡೆಗಳಲ್ಲಿ ಸ್ಯಾಂಪಲ್ ಟೆಸ್ಟ್‌ಗೆ ಕ್ರಮಕೈಗೊಳ್ಳಲಾಗಿದೆ.
ಶ್ರೀಕಾಂತ್, ಕಾರ್ಯ ಪಾಲಕ ಅಭಿಯಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂ.ಗ್ರಾಮಾಂತರ