ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಮುಂಗಾರು ಅವಧಿಯಲ್ಲಿಯೇ ಈ ಭಾರಿ ಜಿಲ್ಲೆಯಲ್ಲಿ ತೀವ್ರ ಮಳೆಕೊರತೆ ಎದುರಾಗಿರುವುದು, ಮಳೆ ನೀರು ಕೊಯ್ಲು ಅಳವಡಿಕೆಯಲ್ಲಿ ನಿರಾಸಕ್ತಿ, ಕೊಳವೆಬಾವಿ ಮರುಪೂರಣಕ್ಕೆ ಮೀನಮೇಷ ಸೇರಿ ಅನೇಕ ಕಾರಣಗಳಿಂದ ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟದಲ್ಲಿ ಕುಸಿಯುತ್ತಿದ್ದು ಮುಂದಿನ ದಿನಗಳಲ್ಲಿ ಕುಡಿವ ನೀರಿಗೂ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲೂ ಮಳೆಯ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಜತೆಗೆ ಬಳಕೆಯ ನೀರಿಗೂ ಸಮಸ್ಯೆ ಎದುರಾಗುವ ಭೀತಿ ಆವರಿಸಿದೆ. ಕಳೆದೆರಡು ವರ್ಷ ಉತ್ತಮ ಮಳೆಯಿಂದಾಗಿ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಸುಧಾರಿಸಿತ್ತು. ಆದರೆ ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲದೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುವ ಭೀತಿ ಕಂಡುಬರುತ್ತಿದೆ.
ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಸೂಚನೆ:
ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುವ ಲಕ್ಷಣದ ಹಿನ್ನೆಲೆಯಲ್ಲಿ ಸ್ಥಳಿಯ ಆಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಜಿಲ್ಲೆಯ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಯ ವ್ಯಾಪ್ತಿಗಳಲ್ಲಿನ ವಾರ್ಡ್ಳಲ್ಲಿನ ಕೊಳವೆ ಬಾವಿಗಳ ನೀರಿನ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ, ನೀರಿನ ಲಭ್ಯತೆ ಕುರಿತು ನಿಗಾ ವಹಿಸಲಾಗುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿ ಅಂತರ್ಜಲ ಮರುಪೂರಣಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಕೊಳವೆ ಬಾವಿಗಳ ನೀರಿನ ಮಟ್ಟ ಇಳಿಕೆಯಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಗಮನಿಸುತ್ತಿದ್ದಾರೆ. ಮುಂದಿನ 3 ತಿಂಗಳ ಅವಧಿಯಲ್ಲಿ ನೀರಿನ ಸರಬರಾಜಿನಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸುವಂತೆ ಜಿಲ್ಲಾಡಳಿತ ಸ್ಥಳಿಯ ಆಡಳಿತಗಳಿಗೆ ಸೂಚನೆ ರವಾನಿಸಿದೆ.
ಜಿಲ್ಲೆಯಲ್ಲಿ ಜೂನ್ 1ರಿಂದ ಆಗಸ್ಟ್ 3ನೇ ವಾರದವರೆಗೂ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ ಹೊರತು ಕೆರೆ, ಜಲಾಶಯಗಳು ತುಂಬುವ ಮಟ್ಟಿಗೆ ಮಳೆಯಾಗಿಲ್ಲ. ಜೂ,1 ರಿಂದ ಆ.3ನೇ ವಾರದವರೆಗೂ ದೊಡ್ಡಬಳ್ಳಾಪುರದಲ್ಲಿ ಶೇ.19, ದೇವನಹಳ್ಳಿಯಲ್ಲಿ ಶೇ.17, ಹೊಸಕೋಟೆಯಲ್ಲಿ ಶೇ.23, ನೆಲಮಂಗಲದಲ್ಲಿ ಶೇ.34 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಗ್ರಾಮೀಣ ಭಾಗಗಳಿಗೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಗೆ ಜಕ್ಕಲು ಮಡಗು ಜಲಾಶಯದ ನೀರಿನಿಂದ ಮುಂದಿನ ಕೆಲವು ತಿಂಗಳವರೆಗೆ ಕುಡಿಯುವ ನೀರು ಪೂರೈಕೆ ಆಗುತ್ತದೆ. ಇದನ್ನು ಬಿಟ್ಟರೆ ಬಹುತೇಕ ನಗರ ಪ್ರದೇಶಗಳು ಕೊಳವೆ ಬಾವಿಗಳನ್ನೇ ಅವಲಂಬಿಸಿದೆ.
ಜಿಲ್ಲೆಯ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯನ್ನು ಪರಿಶೀಲಿಸಲು ಆಯಾ ಸ್ಥಳಿಯ ಆಡಳಿತಗಳ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳ ನೀರಿನ ಮಟ್ಟಗಳನ್ನು ಪರಿಶೀಲಿಸಿ, ಎಷ್ಟು ಪ್ರಮಾಣದಲ್ಲಿ ನೀರಿನ ಲಭ್ಯವಾಗಲಿದೆ ಎಂದು ತಿಳಿಯಲು ಜಿಲ್ಲಾಡಳಿತ ಸೂಚನೆ ನೀಡಿದೆ. ಮುಂದಿನ 3 ತಿಂಗಳು ಎಚ್ಚರಿಕೆ ಅವಧಿಯಾಗಿದ್ದು ಈ ವೇಳೆಯಲ್ಲಿ ನೀರಿನ ಕೊರತೆ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುವುದು ಸೇರಿ ನೀರಿನ ಲಭ್ಯತೆಗಳ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಈ ಬಗ್ಗೆ ಜಿಲ್ಲಾ ನಗರಾಭಿವೃದ್ದಿ ಕೋಶವೂ ಅಗತ್ಯ ಸಿದ್ದತೆಗೆ ಕ್ರಮವಹಿಸಲು ತಿಳಿಸಿದ್ದು, ಆರ್ಒ ಪ್ಲಾಂಟ್ಗಳ ನಿರ್ವಹಣೆ ಬಗ್ಗೆಯ ಗಮನ ಕೇಂದ್ರಿಕರಿಸಲಾಗುತ್ತಿದೆ.
ಕೊಳವೆ ಬಾವಿಗಳ ನೀರಿನ ಮಟ್ಟವನ್ನು ನಿಯಮಿತ ಪರಿಶೀಲಿಸುವುದು, ಕುಡಿಯುವ ನೀರಿನ ಮೂಲಗಳ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡುವುದು. ಕೊಳವೆಬಾವಿಗಳ ಮೋಟಾರ್ ಹಾಗೂ ಪೈಪ್ಲೈನ್ಗಳ ದುರಸ್ತಿ ಕಾರ್ಯ ನಡೆಸುವುದು,ಅಗತ್ಯವಿದ್ದಲ್ಲಿ ಪರ್ಯಾಯ ನೀರಿನ ಮೂಲ ಗುರುತಿಸುವುದು, ತುರ್ತು ಪರಿಸ್ಥಿತಿಗೆ ಟ್ಯಾಂಕರ್ ವ್ಯವಸ್ಥೆ ಸಿದ್ಧವಾಗಿಡುವುದು, ನೀರಿನ ಸೋರಿಕೆ ಮತ್ತು ಅನಗತ್ಯ ಬಳಕೆಗೆ ಕಡಿವಾಣ ಹಾಕುವುದು ಜತೆಗೆ ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಮುಂಜಾಗ್ರತೆ ವಹಿಸುವುದು ಅಧಿಕಾರಿಗಳ ಮುಂದಿನ ಕ್ರಮವಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆಯಾಗಿದೆ, ಆಗಸ್ಟ್ ಮುಗಿಯುತ್ತಾ ಬಂದರೂ ವಾಡಿಕೆ ಮಳೆಯೂ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ. ಸ್ಥಳಿಯ ಆಡಳಿತಗಳು ಕುಡಿವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವಂತೆ ಸೂಚನೆ ನೀಡಲಾಗಿದೆ. ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಪರಿಶೀಲನೆ, ಪರ್ಯಾಯ ಮಾರ್ಗ ಸೇರಿ ಅಗತ್ಯಕ್ರಮಕ್ಕೆ ಸೂಚನೆ ನೀಡಲಾಗಿದೆ.
ರಮೇಶ್, ಯೋಜನಾ ನಿರ್ದೇಶಕ, ನಗರಾಭಿವೃದ್ಧಿ ಕೋಶ, ಬೆಂ.ಗ್ರಾಮಾಂತರ.