War lockdown 
ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ವಾರ್ ಲಾಕ್‌ಡೌನ್!

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಕರೊನಾ ಕಾಲಘಟ್ಟದಲ್ಲಿ ನಿರ್ಮಾಣವಾಗಿದ್ದ ಲಾಕ್‌ಡೌನ್ ಪರಿಸ್ಥಿತಿ ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ಈ ಹಿಂದೆ ಸರ್ಕಾರ ಕರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಅಧಿಕೃತವಾಗಿ ಲಾಕ್‌ಡೌನ್ ೋಷಿಸಿತ್ತು. ಆದರೆ ಕೊಲ್ಲಿ ಯುದ್ದದ ಪರಿಣಾಮ ಜಿಲ್ಲೆಯಲ್ಲಿ ಪ್ರಸ್ತುತ ಅನಧಿಕೃತ ಲಾಕ್‌ಡೌನ್ ಸನ್ನಿವೇಶ ನಿರ್ಮಾಣವಾಗಿದೆ.
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಕೊರತೆ ದಿನೆ ದಿನೇ ಬಿಗಡಾಯಿಸಿದ್ದು ಕಳೆದ ಎರಡು ದಿನದಿಂದ ಗಣನೀಯ ಕೊರತೆ ಎದುರಾಗಿದೆ. ಇಲ್ಲಿವರೆಗೆ ನಾನಾ ಕಸರತ್ತು ನಡೆಸಿ ಗ್ಯಾಸ್ ಸಿಲಿಂಡರ್ ಹೊಂಚಿಕೊಳ್ಳುತ್ತಿದ್ದ ಹೋಟೆಲ್, ಬೇಕರಿ ಮತ್ತಿತರ ವಾಣಿಜ್ಯ ಚಟುವಟಿಕೆ ಮಳಿಗೆಗಳ ಮಾಲೀಕರು ಕಳೆದೆರಡು ದಿನದಿಂದ ಗ್ಯಾಸ್ ಸಿಲಿಂಡರ್ ಪಡೆಯುವಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಈಗಾಗಲೇ ಹೋಟೆಲ್‌ಗಳಲ್ಲಿ ಕೆಲವೇ ತಿನಿಸುಗಳಿಗಷ್ಟೇ ನಿತ್ಯದ ವ್ಯವಹಾರ ಸೀಮಿತಗೊಂಡಿತ್ತು. ಆದರೆ ಇದೀಗ ಸಂಪೂರ್ಣ ಬಂದ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಬಹುತೇಕ ಹೋಟೆಲ್‌ಗಳು ಬಂದ್ ಆಗುತ್ತಿವೆ.
ಜನಜಂಗುಳಿಯೇ ಇಲ್ಲ:
ಸಾಮಾನ್ಯವಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳ ಹೃದಯಭಾಗದಲ್ಲಿನ ಹೋಟೆಲ್, ಬೇಕರಿ ಮತ್ತಿತತರ ಸಾರ್ವಜನಿಕ ಸ್ಥಳಗಳಲ್ಲಿ ಜನಜಂಗುಳಿ ಕಂಡುಬರುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ಸಾರ್ವಜನಿಕ ಸ್ಥಳಗಳು ಬಣಗುಡುತ್ತಿದ್ದು ಲಾಕ್‌ಡೌನ್‌ನಂಥ ಸನ್ನಿವೇಶ ನಿರ್ಮಾಣವಾಗಿದೆ. ಮುಂಜಾನೆ ಹಾಗೂ ಸಂಜೆ ವೇಳೆ ಸಾಮಾನ್ಯವಾಗಿ ಕಾಫಿ, ಟೀ ಪಾನೀಯಗಳನ್ನು ಸೇವಿಸಲು ಹೋಟೆಲ್ ಬೇಕರಿಗಳ ಮುಂದೆ ಜನಸಾಗರವೇ ನೆರೆಯುತ್ತಿತ್ತು. ಇದೀಗ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಇದೆಲ್ಲಕ್ಕೂ ಬ್ರೇಕ್ ಬಿದ್ದಿದೆ.
ಆಟೋಗಳ ಸಂಚಾರ ಸ್ಥಗಿತ:
ಆಟೋಗಳಿಗೆ ಬಳಸುವ ಎಲ್‌ಪಿಸಿ ಗ್ಯಾಸ್ ತೀವ್ರ ಕೊರತೆಯಿಂದಾಗಿ ಆಟೋಗಳ ಸಂಚಾರ ಬಹುತೇಕ ಸ್ಥಗಿತಗೊಂಡಿವೆ, ಆಟೋ ಸ್ಟಾಂಡ್‌ಗಳ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದ ಆಟೋಗಳು ಅದೃಶ್ಯವಾಗಿವೆ. ಆಟೋಗಳಿಗಾಗಿ ಕಾಯುತ್ತಿದ್ದ ಗ್ರಾಹಕರ ಸಂಖ್ಯೆಯೂ ಕರಗಿದೆ. ಪರಿಣಾಮವಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳು ಬಿಕೋ ಎನ್ನುವಂತ ಸನ್ನಿವೇಶ ಕಾಣಿಸಿಕೊಂಡಿದೆ.
ಗ್ರಾಮೀಣ ಪ್ರದೇಶಗಳಿಗೆ ತೆರಳಲು ಹರಸಾಹಸ:
ಸಾಮಾನ್ಯವಾಗಿ ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳಿಗೆ ಇಂದಿಗೂ ಸರ್ಕಾರಿ ಸಾರಿಗೆ ವ್ಯವಸ್ಥೆ ಅವ್ಯವಸ್ಥೆಯಾಗಿಯೇ ಉಳಿದಿದೆ. ಬಸ್‌ಗಳಿಗಿಂತ ಖಾಸಗಿ ಆಟೋಗಳ ಅವಲಂಬಿತರೇ ಹೆಚ್ಚಿದ್ದಾರೆ. ಗ್ರಾಮೀಣ ಭಾಗಗಳಿಂ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಹೋಗಿಬರುವ ಜನರು ಆಟೋಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಆಟೋಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಜನರ ದಿನಿತ್ಯದ ವ್ಯವಹಾರವೂ ಮುಂದಕ್ಕೆ ಹೋಗುತ್ತಿದೆ. ಇದರಿಂದಾಗಿ ಜನರ ಓಡಾಟ ವಹಿವಾಟಿಗೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಬೀದಿಗೆ ಬಿದ್ದ ವ್ಯಾಪಾರಿಗಳು:
ಜಿಲ್ಲೆಯಲ್ಲಿ ಸಾಕಷ್ಟು ಬೀದಿ ಬದಿ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ, ಈಗಾಗಲೇ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಬಹುತೇಕ ಬೀದಿ ಬದಿ ಹೋಟೆಲ್‌ನವರು ಸೌದೆ ಒಲೆ ಮೊರೆ ಹೋಗಿದ್ದರು. ಹಲವರು ದುಪ್ಟಟ್ಟು ದರ ನೀಡಿ ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸುವ ಸಾಹಸ ಮಾಡುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ ಅವುಗಳಿಗೂ ತೀವ್ರ ತೊಂದರೆ ಎದುರಾಗಿದ್ದು, ಬೀದಿ ಬದಿ ವ್ಯಾಪಾರಿಗಳು ವ್ಯಾಪಾರವನ್ನೇ ಬಂದ್ ಮಾಡುವಂತಾಗಿದೆ. ಇದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಬೀದಿ ಬದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜನಸಾಗರ ಕಣ್ಮರೆಯಾಗಿ ಲಾಕ್‌ಡೌನ್‌ನಂತ ಸನ್ನಿವೇಶ ಕಂಡುಬರುತ್ತಿದೆ.
25 ದಿನಕ್ಕೆ ನಗರದಲ್ಲಿ 45 ದಿನಕ್ಕೆ ಗ್ರಾಮೀಣ ಪ್ರದೇಶಗಳಿಗೆ ಎಲ್‌ಪಿಜಿ ಪೂರೈಕೆಯಾಗಲಿದೆ, ಎಲ್‌ಪಿಜಿ ಕೊರತೆ ಬಗ್ಗೆ ಸಭೆ ನಡೆಸಲಿದ್ದೇನೆ. ವದಂತಿಗಳಿಗೆ ಕಿವಿಗೊಡಬಾರದು, ಖಾಸಗಿಯಲ್ಲಿ ಹೆಚ್ಚಿನ ದರ ಕೇಳಿದರೆ ಕ್ರಮಕೈಗೊಳ್ಳಲಾಗುವುದು, ಚುನಾವಣೆಗಳು ನಡೆಯುತ್ತಿರುವುದರಿಂದ ಸಭೆ ನಡೆಸಲು ಆಗಿಲ್ಲ. ಯುದ್ಧ ನಿಲ್ಲುವವರೆಗೆ ಸಮಸ್ಯೆ ಎದುರಿಸಬೇಕಾಗುತ್ತದೆ.
ಕೆ.ಎಚ್.ಮುನಿಯಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಇಷ್ಟು ದಿನ ಹೇಗೋ ಮಾಡಿ ಗ್ಯಾಸ್ ಸಿಲಿಂಡರ್‌ಗಳನ್ನು ಹೊಂಚಿಕೊಳ್ಳುತ್ತಿದ್ದೇವು, ದುಬಾರಿ ಹಣ ತೆತ್ತು ಸಿಲಿಂಡರ್ ಪಡೆದಿದ್ದೇವು. ಆದರೆ ಈಗ ಅದೂ ಸಿಗುತ್ತಿಲ್ಲ, ಗೃಹ ಬಳಕೆ ಸಿಲಿಂಡರ್ ಬಳಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ, ಸೌದೆ ಕೊಳ್ಳಲು ದುಬಾರಿ ಹಣ ತೆರಬೇಕಾಗಿದೆ, ಇದರಿಂದ ಅನಿವಾರ್ಯವಾಗಿ ಹೋಟೆಲ್‌ಗಳನ್ನು ಮುಚ್ಚಬೇಕಾಗಿದೆ.
ಚೇತನ್, ಬೀದಿ ಬದಿ ವ್ಯಾಪಾರಿ ದೇವನಹಳ್ಳಿ