War hits poultry industry 
ಬೆಂಗಳೂರು ಗ್ರಾಮಾಂತರ

ಕುಕ್ಕುಟೋದ್ಯಮಕ್ಕೆ ಯುದ್ಧದ ಪೆಟ್ಟು

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ಕಳೆದೊಂದು ವಾರದಿಂದ ಕೋಳಿ ಮಾಂಸ ಹಾಗೂ ಮೊಟ್ಟೆ ವಹಿವಾಟಿನಲ್ಲಿ ಭಾರಿ ಕುಸಿದ ಕಂಡಿದೆ.
ಅದರಲ್ಲೂ ರಾಜ್ಯದಲ್ಲೇ ಅತೀ ಹೆಚ್ಚು ಕುಕ್ಕುಟೋದ್ಯಮವಿರುವ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ ಜಿಲ್ಲಾ ವ್ಯಾಪ್ತಿಯ ಕೋಳಿ ಸಾಕಣೆ ರೈತರು ತೀವ್ರ ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಅರಬ್ ದೇಶಗಳು ಸೇರಿ ಹೊರ ರಾಷ್ಟ್ರಗಳಿಗೆ ರಪ್ತಾಗುತ್ತಿದ್ದ ಭಾರಿ ಪ್ರಮಾಣದ ವಹಿವಾಟಿನ ಮೇಲೆ ಯುದ್ಧದ ಕಾರ್ಮೋಡ ಕವಿದಿದ್ದು, ರಪ್ತು ವಹಿವಾಟಿಗೆ ಭಾರಿ ಪೆಟ್ಟು ಬಿದ್ದಿದೆ.
ಸಗಟು ದರದಲ್ಲಿ ಭಾರಿ ಇಳಿಕೆ:
ಕೆಲವು ತಿಂಗಳ ಹಿಂದಷ್ಟೇ 7 ರೂಪಾಯಿಯಿಂದ 7.30 ರವರೆಗೆ ಏರಿಕೆ ಕಂಡಿದ್ದ ಮೊಟ್ಟೆಯೊಂದರ ದರ ವಾರದಿಂದೀಚೆಗೆ ಏಕಾಏಕಿ 5 ರೂಪಾಯಿಗೆ ಕುಸಿದಿದೆ. ಅದರಲ್ಲೂ ಸಗಟು ದರದಲ್ಲಿ 100 ಮೊಟ್ಟೆ ಖರೀದಿಸಿದರೆ 4.30 ರೂ. ಹಾಗೆಯೇ 500 ಮೊಟ್ಟೆ ಖರೀದಿಸಿದರೆ 4 ರೂಪಾಯಿಗೆ ಬಿಕರಿಯಾಗುತ್ತಿದೆ. ಅದೇ ರೀತಿ ಕೋಳಿ ಮಾಂಸದ ದರದಲ್ಲೂ ಭಾರಿ ಇಳಿಕೆ ಕಂಡಿದೆ. ಕಳೆದೊಂದು ತಿಂಗಳ ಹಿಂದೆ ಕೆಜಿಗೆ 130 ರೂಪಾಯಿ ದರವಿದ್ದ ಕೋಳಿ ಮಾಂಸ ಇದೀಗ 104 ರೂಪಾಯಿಗೆ ಕುಸಿದಿದೆ. ಇದರಿಂದ ಕೋಳಿ ಸಾಗಣೆ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯದಲ್ಲಿ ಸುಮಾರು 40 ಸಾವಿರ ಕೋಳಿ ಾರಂಗಳಿದ್ದು, ಪ್ರತಿನಿತ್ಯ 50 ಲಕ್ಷದಷ್ಟು ಮೊಟ್ಟೆಗಳ ವಹಿವಾಟು ನಡೆಯುತ್ತದೆ, ಅದೇ ರೀತಿ ವಾರಕ್ಕೆ 50 ಲಕ್ಷದಷ್ಟು ಕೋಳಿಮರಿಗಳ ಮಾರಾಟ ನಡೆಯುತ್ತದೆ. ಆದರೆ ಕೊಲ್ಲಿ ಯುದ್ಧದ ಪರಿಣಾಮವಾಗಿ ರಪ್ತು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಗ್ಯಾಸ್ ಟ್ರಬಲ್‌ನಿಂದ ಬಂದ್:
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಕೊರತೆಯಿಂದಾಗಿ ರಾಜ್ಯದಲ್ಲಿ ಬಹುತೇಕ ಹೋಟೆಲ್‌ಗಳಲ್ಲಿ ವ್ಯಾಪಾರ ವಹಿವಾಟು ಗಣನೀಯವಾಗಿ ತಗ್ಗಿದೆ. ಅದರಲ್ಲೂ ಮಾಂಸಹಾರಿ ಹೋಟೆಲ್‌ಗಳಲ್ಲಿ ಕೆಲವೊಂದು ಆಯ್ದ ತಿಂಡಿಗಳನ್ನು ಹೊರತುಪಡಿಸಿ ನಿತ್ಯದ ಮೆನುಗಳು ಸಿಗುತ್ತಿಲ್ಲ. ತರಹೇವಾರಿ ಆಹಾರಗಳನ್ನು ತಯಾರಿಸುತ್ತಿದ್ದ ಹೋಟೆಲ್‌ಗಳಲ್ಲಿ ಸೀಮಿತ ಆಹಾರಗಳನ್ನಷ್ಟೇ ತಯಾರಿಸುತ್ತಿರುವುದರಿಂದ ಕೋಳಿ ಹಾಗೂ ಮೊಟ್ಟೆಗೆ ಬೇಡಿಕೆ ಕುಸಿದಿದೆ. ಇದೇ ರೀತಿ ಪ್ರಮುಖವಾಗಿ ಬೇಕರಿ ತಿನಿಸುಗಳಲ್ಲಿ ಬಳಸುವ ಮೊಟ್ಟೆಗಳಿಗೆ ಬೇಡಿಕೆ ಕುಸಿದಿದೆ. ಗ್ಯಾಸ್ ಕೊರತೆಯಿಂದಾಗಿ ಬೇಕರಿಗಳಲ್ಲೂ ತಹರೇವಾರಿ ತಿನಿಸುಗಳ ತಯಾರಿಕೆಗೆ ಕಡಿವಾಣ ಹಾಕಿದ್ದು, ಮೊಟ್ಟೆ ಖರೀದಿಗೆ ಮುಂದಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕೊಲ್ಲಿ ಯುದ್ಧ ಅಂತ್ಯಕಾಣಬೇಕು ಎಂದಿನಂತೆ ಮಾಂಸಹಾರಿ ಹೋಟೆಲ್‌ಗಳು ಕಾರ್ಯನಿರ್ವಹಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೋಳಿ ಸಾಗಣೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.
ಬಿಸಿಲ ತಾಪಕ್ಕೆ ಸಾವು:
ಕೊಲ್ಲಿ ಯುದ್ಧದಿಂದಾಗಿ ಕೋಳಿ ಸಾಕಣೆದಾರರ ಮೇಲೆ ನೇರ ದುಷ್ಪರಿಣಾಮ ಬೀರಿದ್ದರೆ, ದಿನೆ ದಿನೇ ಏರುತ್ತಿರುವ ಬಿಸಿಲ ತಾಪಮಾನವೂ ಕೋಳಿ ಸಾಕಣೆದಾರರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಬಿಸಿಲ ತಾಪದಿಂದಾಗಿ ಾರಂಗಳಲ್ಲಿ ಕೋಳಿಗಳ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಕೋಳಿಗಳನ್ನು ಜತನದಿಂದ ಸಾಕಣೆ ಮಾಡುವುದು ಕೋಳಿ ಸಾಕಣೆ ರೈತರಿಗೆ ಸವಾಲಿನ ಕೆಲಸವಾಗಿದೆ.
ಮಧ್ಯಪ್ರಾಜ್ಯ ಯುದ್ಧ ಕುಕ್ಕುಟೋಮದ್ಯದ ಮೇಲೆ ನೇರ ದುಷ್ಪರಿಣಾಮ ಬೀರಿದೆ. ಕಳೆದೊಂದು ವಾರದಿಂದ ಕೋಳಿ ಹಾಗೂ ಮೊಟ್ಟೆ ರಪ್ತಿನ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಕೋಳಿ ಸಾಕಣೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಬ್ ಸೇರಿ ಹೊರರಾಷ್ಟ್ರಗಳ ರಪ್ತು ವಹಿವಾಟು ಗಣನೀಯವಾಗಿ ಕುಸಿದ ಕಂಡಿದೆ, ಮಾಂಸಹಾರಿ ಹೋಟೆಲ್ ಹಾಗೂ ಬೇಕರಿಗಳಲ್ಲೂ ಬೇಡಿಕೆ ಇಲ್ಲದಂತಾಗಿದೆ.
ನಂಜುಡಪ್ಪ, ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ
ಕೊಲ್ಲಿ ಯುದ್ಧ ಕೊನೆಗೊಂಡು ಯಥಾಸ್ಥಿತಿ ಮರಳದಿದ್ದರೆ ಕುಕ್ಕುಟೋದ್ಯಮ ಚೇತರಿಸಿಕೊಳ್ಳಲಾರದಷ್ಟು ಅಧಃಪತನ ಕಾಣಲಿದೆ, ಈಗಾಗಲೇ ಎಲ್ಲೆಡೆ ಬೇಡಿಕೆ ಕುಸಿದಿದ್ದು, ಅತೀ ಕಡಿಮೆ ದರದಲ್ಲೇ ಕೋಳಿ ಹಾಗೂ ಮಾಂಸ ಮಾರಾಟ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದಾಗಿ ಸ್ಥಳೀಯವಾಗಿಯೂ ಹೋಟೆಲ್ ಉದ್ಯಮಗಳಲ್ಲಿ ಬೇಡಿಕೆ ತಗ್ಗಿದ್ದು ಪರಿಸ್ಥಿತಿ ಬಿಗಡಾಯಿಸಿದೆ.
ಕೃಷ್ಣಪ್ಪ, ಕೋಳಿ ಸಾಕಣೆ ರೈತ ಕೋಲಾರ