ಪೂರ್ವಭಾವಿ 
ಬೆಂಗಳೂರು ಗ್ರಾಮಾಂತರ

15ರಂದು ಏಕತಾ ಪಾದಯಾತ್ರೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ ಪ್ರಯುಕ್ತ ನ.15ರಂದು ಜಿಲ್ಲಾ ಮಟ್ಟದಲ್ಲಿ ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ಏಕತಾ ದಿನ ಸರ್ದಾರ್-150 ಏಕತಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.
ದೇವನಹಳ್ಳಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಆಯೋಜನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದೇಶದ ಒಗ್ಗೂಡುಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪಟೇಲ್ ಅವರು ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರು. ಅವರ 150 ಜನ್ಮ ದಿನದ ಅಂಗವಾಗಿ ಸರ್ದಾರ್ 150 ಪಾದಯಾತ್ರೆ ಆಯೋಜಿಸಲಾಗಿದೆ ದೊಡ್ಡಬಳ್ಳಾಪುರದ ಐಬಿ ಸರ್ಕಲ್ ನಿಂದ ಕೊಂಗಾಡಿಯಪ್ಪ ಕಾಲೇಜುವರೆಗೆ ಏಕತಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ರಾಷ್ಟ್ರೀಯ ನಾಯಕರ ಸ್ಮರಣಾರ್ಥ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ಏಕತೆ ಮನೋಭಾವ ಬಲಪಡಿಸಲು ಏಕತಾ ಪಾದಯಾತ್ರೆ ವಿನ್ಯಾಸಗೊಳಿಸಲಾಗಿದೆ. ಇದು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಬಲಪಡಿಸುತ್ತದೆ ಭಾರತದ ರಾಷ್ಟ್ರೀಯ ನಾಯಕರ ಕೊಡುಗೆಗಳಿಗೆ ಗೌರವ ಸಲ್ಲಿಸುತ್ತದೆ ಎಂದರು.
ಯುವಜನರಲ್ಲಿ ಏಕತೆ:
ರಾಷ್ಟ್ರವ್ಯಾಪಿ ಭಾರತದ ಯುವಜನರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಮನೋಭಾವ ಜಾಗೃತಗೊಳಿಸುವ ಗುರಿ ಹೊಂದಿದೆ ಮತ್ತು ಛಿದ್ರಗೊಂಡ ಭಾರತವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿದ ನಾಯಕನ ಪರಂಪರೆಯನ್ನು ಗೌರವಿಸುತ್ತದೆ. ಈ ಅಭಿಯಾನದ ಮೂಲಕ, ಯುವಜನರು ತಮ್ಮ ದೈನಂದಿನ ಜೀವನದಲ್ಲಿ ಏಕ್ ಭಾರತ್, ಆತ್ಮ ನಿರ್ಭರ ಭಾರತದ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಎಂದು ಡಿಸಿ ತಿಳಿಸಿದರು.
ಯುವ ಜನತೆಗೆ ಸ್ಪರ್ಧೆ:
ಮೈ-ಭಾರತ್ ಪೋರ್ಟಲ್‌ನಲ್ಲಿ ಡಿಜಿಟಲ್ ಅಭಿಯಾನದ ಮೂಲಕ 15-29 ವರ್ಷ ವಯೋಮಿತಿ ಹೊಂದಿರುವ ಯುವಜನರಿಗಾಗಿ ಸಾಮಾಜಿಕ ಮಾಧ್ಯಮ ರೀಲ್ ಸ್ಪರ್ಧೆ, ಪ್ರಬಂಧ ಬರೆಯುವ ಸ್ಪರ್ಧೆ ಮತ್ತು ಸರ್ದಾರ್ 150 ಯುವ ನಾಯಕರ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ, 150 ವಿಜೇತರು ರಾಷ್ಟ್ರೀಯ ಪಾದಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿಗಾಗಿ ಮೈ ಭಾರತ್‌ಪೋರ್ಟಲ್ ಭೇಟಿ ಮಾಡಬಹುದು ಎಂದು ಡಿಸಿ ತಿಳಿಸಿದರು.
ವಿವಿಧ ಕಾರ್ಯಕ್ರಮಗಳು:
ಕಾರ್ಯಕ್ರಮದ ದಿನದಂದು ಪಾದಯಾತ್ರೆಯಲ್ಲಿ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಭಾಗವಹಿಸವವರಿಗೆ ಟಿ-ಶ್‌ರ್ಟ್, ಪ್ರಮಾಣ ಪತ್ರ ಹಾಗೂ ಲಘುಉಪಹಾರ ವ್ಯವಸ್ಥೆ ಆಯೋಜಿಸಲಾಗುತ್ತದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವಚ್ಛತಾ ಶ್ರಮದಾನ, ಹೆಲ್ತ್ ಕ್ಯಾಂಪ್, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವೇದಿಕೆ ಕಾರ್ಯಕ್ರಮ ಇರಲಿದೆ ಎಂದರು. ಜಿಲ್ಲೆಯ ಯುವಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಏಕತಾ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಿನ ಮನೋಭಾವ ಪ್ರದರ್ಶಿಸಿ ಸರ್ದಾರ್ ಪಟೇಲ್ ಅವರ ಏಕತಾ ಭಾರತದ ದೃಷ್ಟಿಕೋನವನ್ನು ನಾವೆಲ್ಲರೂ ಗೌರವಿಸೋಣ ಎಂದು ಹೇಳಿದರು.
ಅಧಿಕಾರಿಗಳಿಗೆ ಸೂಚನೆ:
ಕಾಲೇಜು ವಿದ್ಯಾರ್ಥಿಗಳಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜೀವನಾಧಾರಿತ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರೀಲ್ ಸ್ಪರ್ಧೆಗಳನ್ನು ಕಾಲೇಜುಗಳಲ್ಲಿ ಆಯೋಜಿಸಿ ಆ ದಿನ ಪ್ರಶಸ್ತಿ ನೀಡಲು ಕ್ರಮವಹಿಸಿ. ಪಾದಯಾತ್ರೆಗೆ 500 ವಿದ್ಯಾರ್ಥಿಗಳು ಸೇರಿಸಬೇಕು. ಭಾಗವಹಿಸುವವರಿಗೆ ಲಘು ಉಪಹಾರ, ಕುಡಿಯುವ ನೀರು ವ್ಯವಸ್ಥೆ ಮಾಡಿ, ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.