ನ್ಯಾಯಾಧೀಶರ ಶೈಲ ಭೀಮಸೇನ ಭಾಗಡಿ ಕರೆ 
ಬೆಂಗಳೂರು ಗ್ರಾಮಾಂತರ

ಪ್ರಜಾಪ್ರಭುತ್ವ ದ ಉಳಿವಿಗಾಗಿ ಮತದಾನ ಮಾಡಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮತದಾನ ಮಾಡುವಾಗ ಪ್ರತಿ ಅಭ್ಯರ್ಥಿಗಳು ಪ್ರಜ್ಞಾವಂತರಾಗಿ, ನಿರ್ಭೀತರಾಗಿ, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಪ್ರಜಾಪ್ರಭುತ್ವದ ಉಳಿವಿಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸದಸ್ಯ ಕಾರ್ಯದರ್ಶಿ ಶೈಲ ಭೀಮಸೇನ ಭಾಗಡಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ 2026 ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದ ಜನರು 90 ವರ್ಷವಾದರೂ ಮತಚಲಾಯಿಸುತ್ತಿದ್ದರು. ಈಗ ಮತದಾನ ಮಾಡುವ ದಿನವನ್ನು ಮೋಜು ಮಾಡುವ ದಿನವನ್ನಾಗಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮತದಾನ ದಿನ ಸಿಗುವ ರಜೆಯನ್ನು ಇಂದಿನ ಯುವಪೀಳಿಗೆ ಪ್ರವಾಸಗಳಿಗೆ ಹೋಗಲು ಬಳಸಿಕೊಳ್ಳುತ್ತಿದ್ದಾರೆ. ಮತದಾನದ ಮಹತ್ವವನ್ನು ಅರಿಯದಾಗಿದ್ದಾರೆ. ಇಂಥವರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು. ಅಭ್ಯರ್ಥಿಗಳು ಮತದಾನ ಮಾಡಲು 18 ವರ್ಷ ಪೂರೈಸಬೇಕೆಂಬ ಹಿನ್ನೆಲೆಯ ಕಾರಣ ಅವರಿಗೆ ಪ್ರಬುದ್ದತೆ ಬಂದಿರುತ್ತದೆ ಈ ಹಿನ್ನೆಲೆಯಲ್ಲಿ ಮತದಾನದ ವಯಸ್ಸನ್ನು 18 ಕ್ಕೆ ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು.
ವಂಚಿತರಾಗಬಾರದು:
ನಮ್ಮ ಒಂದು ಮತದಿಂದ ದೇಶಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿ ಇದೆ ಯಾರೂ ಮತ ಚಲಾಯಿಸದೆ ಅತ್ಯಮೂಲ್ಯವಾದ ಹಕ್ಕಿನಿಂದ ವಂಚಿತರಾಗಬಾರದು ಎಂದು ಭಾಗಡಿ ತಿಳಿಸಿದರು. ಪ್ರಜಾಭುತ್ವವು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳ ಆಧಾರದ ಮೇಲೆ ನಡೆಯುತ್ತದೆ.ಯಾರಿಗೂ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅಧಿಕಾರವಿಲ್ಲ ಎಂದರು.ಭಾರತದ ಪೌರತ್ವ ತ್ಯಜಿಸಿ ಅನ್ಯ ದೇಶದ ಪೌರತ್ವ ಪಡೆದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಆಮಿಷ ಒಡ್ಡಿ ಅಪರಾಧವೆಸಗಿಸಿದ ನಾಗರೀಕರಿಗೆ, ಜೈಲಿನ ಖೈದಿಗಳಿಗೆ ಮತದಾನದ ಹಕ್ಕನ್ನು ನಮ್ಮ ಸಂವಿಧಾನವು ನೀಡಿಲ್ಲ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಕರ್ತವ್ಯಗಳ ಕುರಿತು ತಿಳಿಸಿದೆ. ಮತದಾನ ಮೂಲಭೂತ ಹಕ್ಕುಗಳಲ್ಲಿ ಬರುವುದಿಲ್ಲ. ಕಾನೂನಾತ್ಮಕವಾಗಿ ನೀಡಿದ ಹಕ್ಕಾಗಿದ್ದು ಅರ್ಹತೆ ಇದ್ದರೆ ಮತದಾನ ಮಾಡಬಹುದು ಎಂದರು. ಪ್ರತಿನಿಧಿಗಳನ್ನು ಮತದಾನ ಮಾಡಿ ಆಯ್ಕೆ ಮಾಡಲಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಪ್ರತಿನಿಧಿಯು ಸಮಸ್ಯೆಗಳನ್ನು ಪರಿಹಾರ ಮಾಡುವ ಕುರಿತು ಭರವಸೆ ನೀಡಬಹುದು. ಆಸೆಆಮಿಷ ಒಡ್ಡಲು ಸಾಧ್ಯವಿಲ್ಲ. ಈ ದಿನದ ಉದ್ದೇಶ ಮತದಾನ ಬಗ್ಗೆ ತಿಳುವಳಿಕೆ, ಜಾಗೃತಿಯನ್ನು ಸಮಾಜ ಹಾಗೂ ಕುಟುಂಬಕ್ಕೆ ನೀಡಬೇಕು ಎಂದರು.
ಸದೃಢ ಪ್ರಜಾಪ್ರಭುತ್ವಕ್ಕೆ ಮತದಾನ:
ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾತನಾಡಿ ಮತದಾನವನ್ನು ನಿರ್ಭಿತಿಯಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.ಚುನಾವಣಾ ಆಯೋಗವು 1950 ಜ.25ರಂದು ಸ್ಥಾಪನೆಯಾಯಿತು. 2011 ರಿಂದ ಪ್ರತಿ ವರ್ಷ ಜ.25 ಅನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ.ಶಾಲಾ ಮಕ್ಕಳು ತಮ್ಮ ಪೋಷಕರು ಹಾಗೂ ಸುತ್ತಮುತ್ತಲಿನ ಜನರಲ್ಲಿ ಮತ ಚಲಾಯಿಸುವ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು. ಎಲ್ಲ ಪ್ರಜೆಗಳಿಗೆ ಮತದಾನ ಹಕ್ಕು ಮಾತ್ರವಲ್ಲ, ಅದು ಜವಾಬ್ದಾರಿ. ಜಿಲ್ಲೆಯಲ್ಲಿನ 18 ವರ್ಷ ತುಂಬಿದ ಪ್ರಜೆಗಳು ಮತದಾರರಾಗಿ ನೋಂದಣಿ ಮಾಡಿಸಿಕೊಂಡು ಮತದಾನ ಮಾಡಬೇಕು ಎಂದರು.