voters  
ಬೆಂಗಳೂರು ಗ್ರಾಮಾಂತರ

50 ಸಾವಿರಕ್ಕೂ ಹೆಚ್ಚು ಮತದಾರರಿಗೆ ನೋಟಿಸ್​

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡುವೆ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ನಾಲ್ಕೂ ತಾಲೂಕುಗಳ ಎಸ್​ಐಆರ್​ ಪ್ರಕ್ರಿಯೆ ವೇಳೆ ಸಾಕಷ್ಟು ದೋಷಗಳು ಕಂಡುಬಂದಿದೆ. ಈ ಮಾನದಂಡದಡಿ ಜಿಲ್ಲೆಯ 50 ಸಾವಿರಕ್ಕೂ ಹೆಚ್ಚು ಮತದಾರರಿಗೆ ಜಿಲ್ಲಾಡಳಿತ ನೋಟಿಸ್​ ನೀಡುವ ಪ್ರಕ್ರಿಯೆ ಆರಂಭಿಸಿದೆ.
ಜಿಲ್ಲೆಯಲ್ಲಿ ಎಸ್​ಐ ಆರ್​ ಪ್ರಕ್ರಿಯೆ ಮುನ್ನ ಜಿಲ್ಲೆಯಲ್ಲಿ 2026ರ ಜೂ.16ರ ಮಾಹಿತಿ ಅನ್ವಯ 9,12,913 ಮಂದಿ ಮತದಾರರಿದ್ದಾರೆ. ಆದರೆ ಇದರಲ್ಲಿ 7,96,138 ಗಣತಿ ನಮೂನೆಗಳು ಡಿಜಟಲೀಕರಣವಾಗಿದ್ದು, 1,16,775 ಮಂದಿ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನುಳಿದಂತೆ ಮ್ಯಾಫಿಂಗ್​ ಆಗದ, ಸಾಕಷ್ಟು ದೋಷವಿರುವ 56,369 ಮತದಾರರಿಗೆ ನೋಟಿಸ್​ ನೀಡುವ ಮೂಲಕ ಅಂಥವರಿಗೆ ಮತದಾರರ ಪಟ್ಟಿಯಲ್ಲಿನ ಮಾಹಿತಿ ವ್ಯತ್ಯಾಸದ ಸಮಸ್ಯೆಗಳನ್ನು ತಿಳಿಸಿ, ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಈ ಪ್ರಕ್ರಿಯೆಯೂ ಪ್ರಗತಿಯಲ್ಲಿದ್ದು, ಲೋಪದೋಷ ಸರಿಪಡಿಸುವ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
30 ಸಾವಿರ ಮತದಾರರ ಚೀಟಿಯಲ್ಲಿ ಲೋಪ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ 912913 ಮತದಾರರ ಪೈಕಿ 3,35,846 ಮಂದಿ ಸ್ವಯಂ ಮ್ಯಾಫಿಂಗ್​ ಮಾಡಿಕೊಂಡಿದ್ದರು. ಇನ್ನೂ ಬಿಎಲ್​ಒಗಳ ಮೂಲಕ 4,43,992 ಮಂದಿ ಮತದಾರರ ಮ್ಯಾಫಿಂಗ್​ ಮಾಡಲಾಗಿದೆ. ಹೊಸಕೋಟೆಯಲ್ಲಿ 7813 ಮಂದಿ ಮಾಡಲಾಗಿಲ್ಲ. ದೇವನಹಳ್ಳಿಯಲ್ಲಿ 8764, ದೊಡ್ಡಬಳ್ಳಾಪುರದಲ್ಲಿ 5767, ನೆಲಮಂಗಲದಲ್ಲಿ 7427 ಮಂದಿ ಮ್ಯಾಫಿಂಗ್​ ಬಾಕಿಯಿದ್ದು, 26,299 ಮತದಾರರ ಮ್ಯಾಫಿಂಗ್​ ಜಿಲ್ಲೆಯಲ್ಲಿ ಬಾಕಿಯಿದೆ. ಇನ್ನೂ ವಿಳಾಸ ತಪ್ಪುಗಳು, ಹೆಸರಲ್ಲಿ ದೋಷಗಳು ಸೇರಿ ವಿವಿಧ ಮಾಹಿತಿಯ ದೋಷಗಳಿರುವ 30070 ಮತದಾರರು ಇರುವುದು ಕಂಡು ಬಂದಿದೆ. ಈ ಮೂಲಕ ಮ್ಯಾಫಿಂಗ್​ ಇಲ್ಲದ, ಒಂದಷ್ಟು ತಪ್ಪುಗಳಿರುವ 56,369 ಮತದಾರರ ಚೀಟಿಗಳು ಕಂಡುಬಂದಿದ್ದು, ಇವರಿಗೆ ನೋಟೀಸ್​ ನೀಡಿ, ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಇದಲ್ಲದೇ ಜಿಲ್ಲೆಯಲ್ಲಿ ಶೇ.12.79 ಮತದಾರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಇದರಲ್ಲಿ ಕೆಲ ಮತದಾರರು ಸಾವನಪ್ಪಿದ್ದು, ಕೆಲವರು ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರು ಇದ್ದಾರೆ.
ಸರಿಪಡಿಸಿಕೊಳ್ಳಲು ಅವಕಾಶವಿದೆ:
ಮ್ಯಾಫಿಂಗ್​ ಆಗದಿರುವವರಿಗೆ, ಲೋಪದೋಷ ಇರುವವರಿಗೆ ನೋಟಿಸ್​ ನೀಡಲಾಗುತ್ತದೆ. ನೋಟಿಸ್​ ತಲುಪಿದವರಿಗೆ ಪಡಿಸಿಕೊಳ್ಳಲು 3 ಹಂತದಲ್ಲಿ ಅವಕಾಶ ಸಿಗುತ್ತದೆ. ನೋಟಿಸ್​ ಪಡೆದಿರುವ ಮತದಾರರೇ ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕಿದೆ. ಇದರೊಂದಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆ.23ರವರೆಗೆ ಅವಕಾಶ ಕಲ್ಪಿಸಲಾಗಿದೆ. ನೋಟಿಸನ್ನು ಮತದಾರರು ಹಾಗೂ ಕುಟುಂಬದ ಯಾವುದೇ ಸದಸ್ಯರು ಸ್ವೀಕರಿಸಬಹುದು. ನೋಟಿಸ್​ ಜಾರಿಗೊಳಿಸುವ ವೇಳೆ ಅಗತ್ಯವಿರುವ ದಾಖಲೆಗಳನ್ನು ಸ್ಥಳದಲ್ಲೇ ಸಲ್ಲಿಸಿ ಗಣಕೀಕರಣ ಮಾಡಿಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಮ್ಮೆ ಆ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದವರು ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಬಹುದು. ನಗರ ವ್ಯಾಪ್ತಿಯವರು ಉಪವಿಭಾಗಾಕಾರಿ, ತಾಲೂಕು ಕಚೇರಿ, ನಗರಸಭೆ ಸ್ಥಳಿಯ ಸಂಸ್ಥೆಗಳ ಕಚೇರಿಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶದವರು ಗ್ರಾಮ ಪಂಚಾಯಿತಿಗಳಲ್ಲಿ ಹಾಜರಾಗಲು ಅವಕಾಶ ನೀಡಲಾಗಿದೆ. ನೋಟಿಸ್​ ಪಡೆದ ಮತದಾರರು ಆಧಾರ್​ ಕಾರ್ಡ್​, ಪಾಸ್​ ಪೋರ್ಟ್​, ಜಮೀನು, ಮನೆ ಹಂಚಿಕೆ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರ, ಅರಣ್ಯ ಹಕ್ಕುಪತ್ರ ಸೇರಿ 12 ದಾಖಲೆಗಳಲ್ಲಿ ಯಾವುದಾದರೊಂದನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಮ್ಯಾಫಿಂಗ್​ ಆಗದ, ದೋಷಗಳಿರುವ ವಿವರ
ತಾಲೂಕು ಮತದಾರರ ಚೀಟಿಯ ಸಂಖ್ಯೆಗಳು
ದೊಡ್ಡ್ಡಬಳ್ಳಾಪುರ 14,321
ನೆಲಮಂಗಲ 13987
ದೇವನಹಳ್ಳಿ 14056
ಹೊಸಕೋಟೆ 14005
ಒಟ್ಟು 56,369
)
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಂತೆ ಒಟ್ಟು 796138 ಮತದಾರರಿದ್ದು, ಇದರಲ್ಲಿ 56,369 ಮಂದಿಯ ಮ್ಯಾಫಿಂಗ್​ ಸಮಸ್ಯೆ ಮತ್ತು ಮತದಾರರ ಪಟ್ಟಿಯಲ್ಲಿ ಲೋಪದೋಷಗಳ ಸಮಸ್ಯೆ ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಅಂಥ ಮತದಾರಿಗೆ ನೋಟಿಸ್​ ನೀಡಿ, ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.
> ಡಾ.ಕೆ.ಎನ್​.ಅನುರಾಧಾ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ