ಸ್‌ಟಾವೇರ್‌ನಲ್ಲಿ ತೋರಿಸಿದರೆ ಬದಲಾವಣೆ ಸಾಧ್ಯವಿಲ್ಲ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿದಾರರು ಎಂಬ ಕಾರಣಕ್ಕೆ 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದೆ. ಇನ್ನು ಉಳಿದವರ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಪಿ.ಎಚ್.ಪೂಜಾರ್ ಅವರ ಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಯಲ್ಲೂ ಇದೇ ರೀತಿ ತೋರಿಸುತ್ತಿರುವುದರಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ, ಇದರಲ್ಲಿ ಸರ್ಕಾರ ಅಥವಾ ನಮ್ಮ ಇಲಾಖೆಯ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿದ್ದು, ಕೆಲವು ಫಲಾನುಭವಿಗಳು ಕೆಲವೊಂದು ವ್ಯವಹಾರ ನಡೆಸುವಾಗ ಜಿಎಸ್‌ಟಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀಗಾಗಿಯೇ ನಿರ್ಮಿಸಲಾಗಿರುವ ಸಾಫ್ಟ್ ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಗೃಹಲಕ್ಷ್ಮೀ ಯೋಜನೆ ನಿರಂತರ ಪ್ರಕ್ರಿಯೆ, ಈಗಾಗಲೇ ಆದಾಯ ತೆರಿಗೆ ಜಿಎಸ್‌ಟಿ ಕೌನ್ಸಿಲ್ ಗಮನಕ್ಕೂ ತರಲಾಗಿದೆ ಎಂದರು.
ದಾಖಲೆ ತೋರಿಸಿದರೂ ಹಣ ಬರುತ್ತಿಲ್ಲ:
ಗೃಹಲಕ್ಷ್ಮೀ ಯೋಜನೆಯಿಂದ ಕೈಬಿಡಲಾದ ಹಲವು ಲಾನುಭವಿಗಳು ಸರಿಯಾದ ದಾಖಲೆ ತೋರಿಸಿದರೂ ಹಣ ನೀಡುತ್ತಿಲ್ಲ. ಇದರಿಂದ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎನಿಸುತ್ತದೆ ಎಂದು ಪೂಜಾರ್ ಮರುಪ್ರಶ್ನಿಸಿದರು. ಈಗಲೂ ಇದಕ್ಕೆ ಅವಕಾಶವಿದೆ ಗೃಹಲಕ್ಷ್ಮಿ ಯೋಜನೆಗೆ ಲಾಗಿನ್ ಆಗಬಹುದು. ಇದು ನಿರಂತರ ಪ್ರತಿಕ್ರಿಯೆ ಸಾಧ್ಯವಾದಷ್ಟು ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಲಾನುಭವಿಗಳಿಗೆ ಹಣ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಸಚಿವರು ಪುನರುಚ್ಚರಿಸಿದರು.