Vastu's walk towards the village 
ಬೆಂಗಳೂರು ಗ್ರಾಮಾಂತರ

ತಂತ್ರಜ್ಞಾನದೊಂದಿಗೆ ವಾಸ್ತುಶಾಸ್ತ್ರವೂ ಇರಲಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಾಸ್ತು ಶಾಸ್ತ್ರವೆಂದರೆ ಕೇವಲ ಕಲ್ಲು, ಮಣ್ಣುಗಳ ಕುರಿತಾದ ವಿಷಯವಲ್ಲ. ಅದೊಂದು ಅದ್ಭುತ ವಿಜ್ಞಾನ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಎಲ್ಜಿ ಮಹಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಪೀಳಿಗೆ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಿ. ಜತೆಗೆ ನಮ್ಮ ಸನಾತನ ವಾಸ್ತುಶಾಸ್ತ್ರದ ಬಗ್ಗೆಯೂ ಅರಿಯುವಂತಾಗಲಿ. ವಾಸ್ತು ಎಂದರೆ ಅದೊಂದು ಧನಾತ್ಮಕ ಶಕ್ತಿ. ಇದರ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಪ್ರಯತ್ನವಾಗಿ ಪೂತಮಾನಸ ಜ್ಯೋತಿಷ್ಯಾಲಯ ಈ ವಿನೂತನ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಭಾರತ ಹಳ್ಳಿಗಳ ದೇಶ, ದೇಶದ ಬೆನ್ನೆಲುಬು ರೈತ. ಹಳ್ಳಿಗಳು ಸಮೃದ್ಧವಾಗಿದ್ದರೆ ದೇಶ ಸುಭಿಕ್ಷವಾಗಿರುತ್ತದೆ. ಈ ನಿಟ್ಟಿನಲ್ಲಿ ವಾಸ್ತುಶಾಸ್ತ್ರ ಸಮಯೋಚಿತವಾಗಿದೆ. ಯೋಗ, ಆಯುರ್ವೇದದ ವಿಷಯದಲ್ಲಿ ಜಗತ್ತು ಭಾರತವನ್ನು ತಿರುಗಿ ನೋಡುವಂತಾಗಿದೆ. ಜಗತ್ತಿನ ಹಲವು ದೇಶಗಳು ಇವನ್ನು ಸ್ವೀಕರಿಸಿವೆ. ಇದೇ ರೀತಿ ವಾಸ್ತುಶಾಸ್ತ್ರವನ್ನು ಗಂಭೀರವಾಗಿ ಗಮನಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರೂ ವಾಸ್ತುಶಾಸ್ತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಅದರ ಮೇಲೆ ನಂಬಿಕೆ ಇಟ್ಟಿದ್ದಾರೆ. ಸೂರ್ಯನ ಮೊದಲ ಕಿರಣ ಮನೆಯನ್ನು ಹೇಗೆ ಪ್ರವೇಶಿಸಬೇಕು. ಮನೆಯಲ್ಲಿ ಗಾಳಿಯ ಸಂಚಾರ ಹೇಗಿರಬೇಕು, ಇತ್ಯಾದಿ ಮಹತ್ವದ ವಿಚಾರಗಳನ್ನು ಹಿಂದೆಯೇ ಋಷಿಮುನಿಗಳು ಉಲ್ಲೇಖಿಸಿದ್ದರು. ಅದರ ಆಧಾರದ ಮೇಲೆ ವಾಸ್ತುಶಾಸ್ತ್ರ ನಿಂತಿದೆ ಎಂದು ಹೇಳಿದರು.
ಜ್ಯೋತಿಷ್ಯ ತಾಯಿ, ವಾಸ್ತು ಮಗು:
ಕಾರೇಪುರದ ಪೂತಮಾನಸ ಜ್ಯೋತಿಷ್ಯಾಲಯದ ವ್ಯವಸ್ಥಾಪಕ ಡಾ.ಕೆ.ಗಿರೀಶ್ ಮಾತನಾಡಿ, ಜ್ಯೋತಿಷ್ಯ ಶಾಸ್ತ್ರ ತಾಯಿ ಇದ್ದಂತೆ, ವಾಸ್ತು ಅದರ ಮಗುವಿನಂತೆ. ತಾಯಿ ಹಾಗೂ ಮಗುವಿನ ಸಂಬಂಧಕ್ಕೆ ಎಷ್ಟು ಮಹತ್ವವಿದೆಯೋ ಅದೇ ರೀತಿ ಜ್ಯೋತಿಷ್ಯ ಹಾಗೂ ವಾಸ್ತುವಿನ ಸಂಬಂಧ ಮಹತ್ವದ್ದಾಗಿದೆ. ಮನೆಯ ವಾಸ್ತು ಸರಿಯಾಗಿದ್ದರೆ ಆರೋಗ್ಯ, ಯಶಸ್ಸು, ನೆಮ್ಮದಿ ನೆಲೆಸಿರುತ್ತದೆ. ವಾಸ್ತುಶಾಸ್ತ್ರ ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ. ಸೂಕ್ತವಾಗಿ ವಾಸ್ತುವನ್ನು ಅಳವಡಿಸಿಕೊಂಡರೆ ಯಶಸ್ಸು ಒಲಿಯುತ್ತದೆ ಎಂದರು.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಸ್ತುಶಾಸ್ತ್ರಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಅರಿವಿನ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಜನರ ಒಳಿತಿಗಾಗಿ ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ ಎಂಬ ವಿನೂತನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಚಿಂತೆಗಳ ಹೊರೆಯಿಲ್ಲದ ಬದುಕು:
ರಾಜ್ಯ ಜ್ಯೋತಿಷ್ಯರ ಹಾಗೂ ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಜೇಂದ್ರಬಾಬು ಮಾತನಾಡಿ, ವಾಸ್ತು ಶಾಸ್ತ್ರ ನಿಯಮ ಅನುಸರಿಸಿದರೆ, ಮಾನವರು ನೆಮ್ಮದಿಯಿಂದ, ಆರೋಗ್ಯದಿಂದ, ಚಿಂತೆಗಳ ಹೊರೆ ಇಲ್ಲದೆ ಬದುಕಬಹುದು ಎಂದು ತಿಳಿಸಿದರು. ವಾಸ್ತುಶಾಸ್ತ್ರದಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆಯಾಗಿ ಜಗತ್ತಿನ ಮೇಲೆ ಪರಿಣಾಮ ಬೀರುವುದಲ್ಲದೆ, ಹೊಸ ಮಾರ್ಗ ತೆರೆಯುತ್ತದೆ ಎಂದು ತಿಳಿಸಿದರು. ವಾಸ್ ಎಂದರೆ ಸಂಸ್ಕೃತದಲ್ಲಿ ವಾಸ, ಅಸ್ತು ಎಂದರೆ ಶಕ್ತಿ ಕೊಡುವುದು ಎಂದರ್ಥ. ವಾಸ್ತು ಎಂದರೆ ಸುಖ-ಶಾಂತಿ-ಆರೋಗ್ಯದಿಂದ ಜೀವನ ನಡೆಸುವುದು ಎಂಬರ್ಥ ಕೊಡುತ್ತದೆ ಎಂದರು.
ವಾಸ್ತುವಿನಿಂದ ಸಕಾರಾತ್ಮಕ ಶಕ್ತಿ:
ವಾಸ್ತುವಿಗೆ ತನ್ನದ ಆದ ವಿಶೇಷವಿದೆ. ಯಾವ ಮನೆಯಲ್ಲಿ ವಾಸ್ತು ಸಮರ್ಪಕವಾಗಿರುತ್ತದೋ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಎಂದು ವಾಸ್ತು ತಜ್ಞ ಡಾ.ಅರುಳಾಲನ್ ತಿಳಿಸಿದರು. ವಾಸ್ತುವಿಗೆ ಪ್ರಾಚೀನ ಇತಿಹಾಸವಿದೆ. ಈ ಹಿಂದಿನ ಪುರಾತನ ದೇವಾಲಯಗಳ ಈಶಾನ್ಯ ದಿಕ್ಕಿನಲ್ಲಿ ಕಲ್ಯಾಣಿ ಇರುತ್ತಿತ್ತು. ಹಾಗೇ ಗ್ರಾಮಗಳ ಈಶಾನ್ಯ ದಿಕ್ಕಿನಲ್ಲಿಯೇ ಕೆರೆ-ಕುಂಟೆ ಕಾಣಬಹುದಾಗಿತ್ತು. ಇದು ಗ್ರಾಮದ ಸುಭಿಕ್ಷತೆಯ ಸಂಕೇತವಾಗಿತ್ತು. ಅದೇ ರೀತಿ ನಾವು ನಮ್ಮ ಮನೆ ನಿರ್ಮಾಣದಲ್ಲಿ ಈಶಾನ್ಯದಲ್ಲಿಯೆ ನೀರಿನ ಸಂಪ್ ನಿರ್ಮಾಣ ಮಾಡುವುದು ಔಚಿತ್ಯಪೂರ್ಣವಾಗಿದೆ ಎಂದು ಸಲಹೆ ನೀಡಿದರು.
ನೆನಪಿನಾರ್ಥ ಕಾರ್ಯಕ್ರಮ:
ದೊಡ್ಡಬೆಳವಂಗಲ ಹೋಬಳಿ ಕಾರೇಪುರದಲ್ಲಿನ ಪೂತಮಾನಸ ಜ್ಯೋತಿಷ್ಯಾಲಯ ವ್ಯವಸ್ಥಾಪಕ ಡಾ.ಕೆ.ಗಿರೀಶ್ ಸಾರಥ್ಯದಲ್ಲಿ ಸುಕನ್ಯಾ ಮತ್ತು ಜ್ಯೋತಿಷಿ ಕೃಷ್ಣಮೂರ್ತಿ ಸವಿನೆನಪಿಗಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಜ್ಯೋತಿಷ್ಯರ ಹಾಗೂ ಜ್ಯೋತಿಷ್ಯ ಭೋದನಾ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಗಜೇಂದ್ರಬಾಬು,
ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಟಿ.ವೆಂಕಟರಮಣಯ್ಯ, ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಕೆಐಎಂಎಸ್ ಮಾಜಿ ಅಧ್ಯಕ್ಷ ಮುನೇಗೌಡ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ, ಜ್ಯೋತಿಷಿಗಳಾದ ದಿನೇಶ್ ಗುರೂಜಿ, ಡಾ.ಹರೀದಾಸ್, ಡಾ.ಅನಂತ ರಾಘವನ್, ಕುಮಾರ್ ವಶಿಷ್ಟ ಮತ್ತಿತರರು ಇದ್ದರು.
ಯೋಜನೆಗಳು ನೆಮ್ಮದಿ ತಂದಿವೆ:
ನನ್ನ ಅಧಿಕಾರಾವಧಿಯಲ್ಲಿ ರೈತರ ಒಳಿತಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೆ. ಪ್ರಮುಖವಾಗಿ ನೀರಾವರಿ ಯೋಜನೆಗಳು, ಹೆಣ್ಣುಮಕ್ಕಳ ಸ್ವಾಭಿಮಾನದ ಬದುಕಿಗಾಗಿ ರೂಪಿಸಿದ ಭಾಗ್ಯಲಕ್ಷ್ಮಿ ಬಾಂಡ್ ನನಗೆ ನೆಮ್ಮದಿ ನೀಡಿದೆ. ಯಾವುದೇ ಸರ್ಕಾರ ಬರಲಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಬೇಕು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಯಡಿಯೂರಪ್ಪ ಹೇಳಿದರು. ಹಳ್ಳಿಗಳ ಒಳಿತಿಗಾಗಿ, ರೈತಾಪಿ ಜನರ ಅಭ್ಯುದಯಕ್ಕಾಗಿ ಇಂಥ ಕಾರ್ಯಕ್ರಮಗಳು ಅವಶ್ಯವೆನಿಸಿವೆ ಎಂದರು.