ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಚಿಂತನೆ
ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಪ್ರಾಥಮಿಕ ಪೂರ್ವ ಶಿಕ್ಷಣ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಅಂಗನವಾಡಿ ಕೇಂದ್ರಗಳಲ್ಲಿ ಇನ್ನು ಮುಂದೆ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಲು ಸಿದ್ದತೆ ನಡೆದಿದೆ.
ಜಿಲ್ಲೆಯಲ್ಲಿ 1277 ಅಂಗನವಾಡಿ ಕೇಂದ್ರಗಳಿದ್ದು ಇದರಲ್ಲಿ 80 ಅಂಗನವಾಡಿಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ.
ಸರ್ಕಾರಿ ಶಾಲೆಗಳ ಉಳಿವಿಗಾಗಿ ಯೋಜನೆ:
ಸಾಮಾನ್ಯವಾಗಿ 1ನೇ ತರಗತಿಗೆ ದಾಖಲಾಗುವ ಮುನ್ನ ಪಾಲಕರು ಮಕ್ಕಳನ್ನು ಎಲ್‌ಕೆಜಿ, ಯುಕೆಜಿಗೆ ದಾಖಲಿಸುತ್ತಾರೆ. ಇವೆಲ್ಲವೂ ಸಾಮಾನ್ಯವಾಗಿ ಖಾಸಗಿ ಶಾಲೆಗಳಾಗಿದ್ದು ಮುಂದಿನ ಶೈಕ್ಷಣಿಕ ವರ್ಷಗಳನ್ನು ಅಲ್ಲಿಯೆ ಮುಂದುವರೆಸುವುದು ಕಂಡುಬರುತ್ತಿದೆ. ಇದರಿಂದ ಅಂಗನವಾಡಿಗಳಲ್ಲಿ ದಾಖಲಾತಿ ಕಡಿಮೆಯಾಗುವುದರ ಜತೆಗೆ ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ದಾಖಲಾತಿ ಕುಸಿಯುತ್ತದೆ. ಈ ನಿಟ್ಟಿನಲ್ಲಿ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ಈ ಯೋಜನೆ ಮಹತ್ವ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭಿಸಲು ಮುಂದಾಗಿದೆ. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆ ಪ್ರಾರಂಭಿಸಲಾಗಿದ್ದು ಆಯ್ದ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಯುತ್ತಿದೆ. ಅಂಗನವಾಡಿಗಳಲ್ಲಿ ಕಲಿಕೆಯ ಪೂರಕ ವಾತಾವರಣವನ್ನು ಮತ್ತಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿಎಸ್‌ಆರ್ ಅನುದಾನ ಹಾಗೂ ದಾನಿಗಳ ಸಹಕಾರದಿಂದ ಜಿಲ್ಲೆಯಲ್ಲಿನ ಅನೇಕ ಅಂಗವಾಡಿಗಳು ಹೈಟೆಕ್ ಆಗುತ್ತಿವೆ ಖಾಸಗಿ ಶಾಲೆಗಳ ಪ್ಲೇಹೋಂ ಮಾದರಿಯಲ್ಲಿ ಸಜ್ಜಾಗುತ್ತಿವೆ ಇವು ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಲು ಸಹಕಾರಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಎಲ್ ಕೆ ಜಿ ಮತ್ತು ಯುಕೆಜಿ ಪಠ್ಯಕ್ರಮದಂತೆ ಬೋಧನೆಗೆ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕ ಅಂಗನವಾಡಿ ನೌಕರರು ಪದವಿ ವ್ಯಾಸಂಗ ಮಾಡಿದ್ದಾರೆ. ಇವರು ವಿಷಯಗಳನ್ನು ಅರ್ಥ ಮಾಡಿಕೊಂಡು ಅದನ್ನು ಮಕ್ಕಳಿಗೆ ಕಲಿಸುವ ಸಾಮರ್ಥ್ಯ ಹೊಂದಿದ್ದಾರೆ.ಈ ಮೂಲಕ ಮಕ್ಕಳ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.
ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿಗಳಲ್ಲಿ ಸಿದ್ಧತೆ ನಡೆಯುತ್ತಿದೆ. ಇದರ ಭಾಗವಾಗಿ ಈಗಾಗಲೇ ಆಯ್ಕೆಯಾಗಿರುವ ಅಂಗನವಾಡಿಗಳಿಗೆ ಟಿವಿಗಳನ್ನು ವಿತರಿಸುವ ಕೆಲಸ ಮಾಡಲಾಗಿದೆ. ಮಕ್ಕಳಿಗೆ ವಿಡಿಯೋ ಮೂಲಕ ಪಠ್ಯಗಳನ್ನು ಸುಲಭವಾಗಿ ಕಲಿಸುವ ಪ್ರಯತ್ನಕ್ಕೆ ಮುಂದಾಗಲಾಗಿದೆ. ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ವಿಧಾನದಿಂದ ಮಕ್ಕಳ ಕಲಿಕೆ ಸುಲಭಗೊಳ್ಳುವ ಜತೆಗೆ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಅನುಕೂಲವಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಈ ತರಗತಿಗಳಿಗೆ ಪೂರಕವಾಗಿ ಪಠ್ಯ ಪುಸ್ತಕಗಳನ್ನು ನೀಡಲಾಗುತ್ತಿದೆ. ಈ ಪಠ್ಯಕ್ರಮ ಆಧರಿಸಿ ಮಕ್ಕಳಿಗೆ ಸಾಕಷ್ಟು ವಿಷಯಗಳನ್ನು ಕಲಿಸಲು ಅವಕಾಶ ನೀಡಲಾಗುತ್ತಿದೆ. ಶಾಲಾ ಪೂರ್ವದಲ್ಲಿ ಪಠ್ಯ ಆಧಾರಿತ ಕಲಿಕೆಯ ಪರಿಚಯ ಮಕ್ಕಳಿಗೆ ಆಗುವುದರಿಂದ ಮುಂದಿನ ಕಲಿಕೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1277 ಅಂಗನವಾಡಿ ಕೇಂದ್ರಗಳಿವೆ.
988 ಸ್ವಂತ ಕಟ್ಟಡಗಳು, 134 ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳು, 4 ಗ್ರಾಮ ಪಂಚಾಯಿತಿ ಕಟ್ಟಡ ಗಳಲ್ಲಿರುವ ಅಂಗನವಾಡಿಗಳು, ಸಮುದಾಯ ಭವನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳು 53, ಶಾಲೆಗಳಲ್ಲಿರುವ ಅಂಗನವಾಡಿಗಳು 94.
ಸರ್ಕಾರದ ಸೂಚನೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 80 ಅಂಗನವಾಡಿಗಳಲ್ಲಿ ಎಲ್ ಕೆ ಜಿ, ಯುಕೆಜಿ ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಾಲೂಕು ಮಟ್ಟದಲ್ಲಿ ಸಿಡಿಪಿಒ ಗಳಿಗೆ ಸೂಚನೆ ನೀಡಲಾಗಿದೆ. ಅಂಗನವಾಡಿಗಳ ಪರಿಶೀಲನೆ ನಡೆಯುತ್ತಿದೆ, ಶಾಲಾ ಪೂರ್ವ ಶಿಕ್ಷಣಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ.
ಮುದ್ದಣ್ಣ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ