ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಹಲಸಿನ ಹಣ್ಣಿಗೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ತೂಬಗೆರೆ ಹಲಸಿಗೆ ಹೊರರಾಜ್ಯದಲ್ಲೂ ಬೇಡಿಕೆ ಇದೆ. ತೂಬಗೆರೆಯ ಕೆಂಪುತೊಳೆ ಹಲಸು ತನ್ನದೇ ರುಚಿ ಹಾಗೂ ಘಮದಿಂದ ಗ್ರಾಹಕರನ್ನು ಸೆಳೆಯುತ್ತದೆ.
ದೊಡ್ಡಬಳ್ಳಾಪುರ ನಗರದಿಂದ ಸುಮಾರು 12 ಕಿ.ಮೀ ಸಾಗಿದರೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಾಗುವ ಮಾರ್ಗಮಧ್ಯೆದಲ್ಲಿ ತೂಬಗೆರೆ ಎದುರುಗೊಳ್ಳುತ್ತದೆ, ಬೇಸಿಗೆಯಲ್ಲಿ ತೂಬಗೆರೆ ಹಲಸಿನ ಸಲು ಮಾರುಕಟ್ಟೆಗೆ ರವಾನೆಯಾಗಲು ಸಿದ್ದಗೊಳ್ಳುತ್ತವೆ. ಇಲ್ಲಿನ ಕೆಂಪುತೊಳೆಯ ಹಲಸಿಗೆ ಜನ ಬಾಯಿಚಪ್ಪರಿಸುತ್ತಾರೆ. ನೆರೆಯ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗದ ಜನ ತೂಬಗೆರೆ ಹಲಸು ಕೊಳ್ಳಲು ದೊಡ್ಡಬಳ್ಳಾಪುರಕ್ಕೆ ಆಗಮಿಸುವುದು ಕಂಡುಬರುತ್ತದೆ. ಅಲ್ಲದೇ ಮಂಗಳೂರು, ಚಿಕ್ಕಮಗಳೂರು, ಕುಂದಾಪುರ, ಉಡುಪಿ, ಮತ್ತು ಮೈಸೂರು ಭಾಗಗಳಲ್ಲೂ ಡಿಮಾಂಡ್ ಇದೆ. ಇತ್ತೀಚಿನ ವರ್ಷಗಳಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಗಳಿಗೂ ತೂಬಗೆರೆ ಹಲಸು ರಪ್ತಾಗುತ್ತಿರುವುದು ಇದರ ವಿಶೇಷತೆ ಸಾಕ್ಷಿಯಾಗಿದೆ.
ತೂಬಗೆರೆಯಲ್ಲಿ ವಿಶೇಷ ಮರಗಳು:
ತೂಬಗೆರೆ ಹೋಬಳಿಯಲ್ಲಿ ತೂಬಗೆರೆ ಗ್ರಾಮ ಸೇರಿ ಸುತ್ತ ಮುತ್ತಲಿನಲ್ಲಿ ಗ್ರಾಮಗಳಲ್ಲಿ ಈ ವಿಶೇಷ ಹಲಸಿನ ಮರಗಳಿವೆ. ಅದರಲ್ಲೂ ‘ಕಾಚ್ಚಹಳ್ಳಿ ಗ್ರಾಮ’ದಲ್ಲಿನ ಕೆಂಪು ತೊಳೆಯ ಹಲಸಿನ ಹಣ್ಣು ಗಮನ ಸೆಳೆಯುತ್ತಿದೆ. ಮರದ ಬುಡದಿಂದಲೇ ಆರಂಭವಾಗಿ ಇಡೀ ಮರವನ್ನೇ ಆವರಿಸಿಕೊಂಡು ಬೆಳೆಯುವ ಹಲಸಿನ ಹಣ್ಣಿನ ಗೊಂಚಲನ್ನು ನೋಡುವುದೇ ಸೋಗಸು ಎಂಬಂತಿರುತ್ತದೆ. ಇಲ್ಲಿನ ಮರಗಳಲ್ಲಿ ಹಳದಿ ಬಣ್ಣದ ತೊಳೆಯ ಹಲಸು, ಕೆಂಪು ಬಣ್ಣದ ಹಲಸು, ಹೆಬ್ಬಲಸು ಸೇರಿ ವಿಧದ ಬಣ್ಣ ರುಚಿಯ ಹಲಸಿನ ಹಣ್ಣುಗಳು ಕಂಡುಬರುವುದು ವಿಶೇಷ. ಚಂದ್ರಹಲಸು, ಬಿಳಿಹಲಸು, ನೀರುತೊಳೆ, ಬಿಳಿ, ಹಳದಿ ತೊಳೆಹಣ್ಣು ಹೀಗೆ ವಿವಿಧ ಹೆಸರುಗಳ ಹಣ್ಣುಗಳು ಕಂಡು ಬರುತ್ತಿವೆ.
ತೂಬಗೆರೆ ಹಲಸು ಬೆಳೆಗಾರರ ಸಂಘದಿಂದ ಪ್ರತಿ ವರ್ಷ ಹಲಸಿನ ಮೇಳ ಆಯೋಜಿಸಲಾಗುತ್ತಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದರ ಜತೆಗೆ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ದೇವನಹಳ್ಳಿ ಭಾಗದಲ್ಲಿ ಹಲಸಿನ ಮೇಳ ನಡೆಸುತ್ತಾ ಬಂದಿರುವುದರಿಂದ ಬೆಳೆಗಾರರು ಆರ್ಥಿಕವಾಗಿ ಲಾಭಗಳಿಸಲು ಕಾರಣವಾಗಿದೆ. ಕಳೆದ ಬಾರಿ ಘಾಟಿಯಲ್ಲಿ ನಡೆದ ಮಾಂಗಲ್ಯಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿಯೂ ತೂಬಗೆರೆ ಹಲಸಿನ ವ್ಯಾಪಾರ ಭರ್ಜರಿಯಾಗಿತ್ತು.
ಹಲಸಿನ ಹಣ್ಣಿನಲ್ಲಿ ಔಷಧೀಯ ಅಂಶಗಳನ್ನು ಒಳಗೊಂಡಿದೆ. ಅಧಿಕ ಪ್ರಮಾಣದಲ್ಲಿ ವಿಟಮಿನ್ ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್, ಕ್ಯಾಲ್ಸಿಯಮ್, ಪೊಟಾಶಿಯಮ್ ಅಂಶಗಳು ಹಣ್ಣಿನಲ್ಲಿ ಅಡಕವಾಗಿರುತ್ತದೆ ಎನ್ನಲಾಗಿದೆ.
ರಾಜ್ಯದಲ್ಲೇ ತೂಬಗೆರೆ ಹಲಸಿಗೆ ವಿಶೇಷ ಬೇಡಿಕೆ ಇದೆ, ಇಲ್ಲಿನ ತಳಿಯ ಹಲಸಿನ ಬಣ್ಣ ಹಾಗೂ ವಿಶೇಷ ರುಚಿ ಬೇರೆ ಕಡೆ ಕಾಣಲು ಸಾಧ್ಯವಿಲ್ಲ. ಪ್ರಸ್ತುತ ಹಲಸಿನ ಸುಗ್ಗಿಯಾಗಿದ್ದು, ಈ ಬಾರಿ ಉತ್ತಮ ಸಲು ಕಂಡುಬಂದಿದೆ. ಬೆಳೆಗಾರರೇ ಸೇರಿ ಮೇಳ ಆಯೋಜಿಸುತ್ತೇವೆ ಇದರೊಂದಿಗೆ ತೋಟಗಾರಿಕೆ ಇಲಾಖೆಯೂ ಮೇಳ ಆಯೋಜಿಸುವ ಭರವಸೆ ನೀಡಿರುವುದು ಸಂತಸ ತಂದಿದೆ.
ತೂಬಗೆರೆ ಹಲಸಿಗೆ ವಿಶೇಷತೆ ಇದೆ, ಸಾಮಾನ್ಯವಾಗಿ ರಾಜ್ಯದ ಎಲ್ಲ ಕಡೆಗಳಿಗೂ ಇಲ್ಲಿಂದ ಹಲಸು ಸರಬರಾಜು ಆಗುತ್ತದೆ. ಪ್ರತಿ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ
ನಡೆಯುವ ಹಲಸು ಮತ್ತು ಮಾವಿನ ಮೇಳದಲ್ಲಿ ಈ ಭಾಗದ ಹಲಸು ಬೆಳೆಗಾರರು
ಭಾಗವಹಿಸಿ ಹಣ್ಣುಗಳ ಮಾರಾಟ ಮಾಡುತ್ತಾರೆ.