ವಿಜಯಪುರ : ಕಂದಾಯ ಇಲಾಖೆ ಅಧಿಕಾರಿಗಳು ಹೋಬಳಿಯ, ಕೊಂಡೇನಹಳ್ಳಿ ಸ.ನಂ.1ರಲ್ಲಿ 3 ಎಕರೆ 30 ಗುಂಟೆ ಭೂಮಿಯನ್ನು ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಪುರಸಭೆಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಉಪತಹಸೀಲ್ದಾರ್ ಮೋಹನ್ ಕುಮಾರ್, ಜಿಲ್ಲಾಧಿಕಾರಿಗಳ ಆದೇಶದಂತೆ 3 ಎಕರೆ 30 ಗುಂಟೆ ಭೂಮಿಯನ್ನು ವಿಜಯಪುರ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮಂಜೂರು ಮಾಡಿ, ನಕ್ಷೆ ಹಾಗೂ ಪಹಣಿ ತಯಾರಿಸಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಅವರಿಗೆ ಹಸ್ತಾಂತರಿಸಲಾಗಿದೆ. ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ರೈತರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಪಟ್ಟಣದ 23 ವಾರ್ಡ್ಗಳಲ್ಲಿನ ಘನತ್ಯಾಜ್ಯವನ್ನು ಇಲ್ಲಿ ಕಾಂಪೋಸ್ಟ್ ಗೊಬ್ಬರವನ್ನಾಗಿ ತಯಾರಿಸಲು ಘಟಕ ಸ್ಥಾಪನೆಯಾಗಲಿದ್ದು, ಈ ಘಟಕದಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ. ಎಲ್ಲ ಪ್ರಕ್ರಿಯೆಗಳು ವೈಜ್ಞಾನಿಕವಾಗಿ ನಡೆಯಲಿರುವುದರಿಂದ ವಾಸನೆ ಮುಕ್ತವಾಗಿ ಗೊಬ್ಬರ ತಯಾರಿಕೆಯಾಗಲಿದೆ. ಈ ಗೊಬ್ಬರವನ್ನು ರೈತರು, ತಮ್ಮ ತೋಟಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಹೊನ್ನೇಶ್, ಗ್ರಾಮ ಆಡಳಿತಾಧಿಕಾರಿ ಜೀವನ್ ಕುಮಾರ್, ಪುರಸಭೆ ಪರಿಸರ ಇಂಜಿನಿಯರ್ ಶೇಖರ್ ರೆಡ್ಡಿ, ಆರೋಗ್ಯ ನಿರೀಕ್ಷಕಿ ಲಾವಣ್ಯಾ, ಭೂಮಾಪಕರು ಇದ್ದರು.