ಚಿಕ್ಕಬಳ್ಳಾಪುರದ ನಂದಿಕ್ರಾಸ್ ಸಮೀಪದ ಚರಂಡಿ ಸ್ಲ್ಯಾಬುಗಳು ಕಿತ್ತು ಬಂದಿರುವುದು
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿನ ಅರ್ಧಂಬರ್ಧ ಕೆಲಸವು ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ.
ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಮಾರ್ಗದಲ್ಲಿನ ಹೆದ್ದಾರಿಯ ನಂದಿ ಕ್ರಾಸ್ ಸೇತುವೆ ಸಮೀಪದ ಸರ್ವೀಸ್ ರಸ್ತೆಯ ಮಧ್ಯೆ ಅಳವಡಿಸಿರುವ ಚರಂಡಿಗಳ ಸ್ಲ್ಯಾಬ್ ಗಳನ್ನು ಸ್ವಚ್ಛತೆ ಹಾಗೂ ಕಾಮಗಾರಿ ನಿರ್ವಹಣೆಗಾಗಿ ತೆಗೆದಿದ್ದು ಹಾಗೆಯೇ ಪೂರ್ಣಗೊಳಿಸದೇ ಬಿಡಲಾಗಿದೆ. ಕಿರಿದಾದ ರಸ್ತೆಯಲ್ಲಿ ಸಾಗುವ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೆ, ಇಲ್ಲಿ ಸದಾ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುವುದರಿಂದ ಸಂಚರಿಸಲು ಸಾಧ್ಯವಾಗುತ್ತಿಲ್ಲ. ವಾಹನಗಳು ಗುಂಡಿಗೆ ಬೀಳುತ್ತಿದ್ದು ಅಪಘಾತಗಳು ಸಂಭವಿಸಿ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ಕೆಲಸವನ್ನು ತ್ವರಿತಗತಿಯಲ್ಲಿ ಮುಗಿಸಬೇಕು. ಆದರೆ, ಅಸುರಕ್ಷತೆ, ಪ್ರಾಣ ಹಾನಿ ಹಾಗೂ ಅಪಘಾತಗಳ ಸಂಭವಿಸುವ ಸಾಧ್ಯತೆಯ ಅರಿವಿದ್ದರೂ ಅರ್ಧದಲ್ಲಿಯೇ ಬಿಡಲಾಗಿದೆ. ಮೊದಲ ದಿನ ಸ್ಲ್ಯಾಬುಗಳನ್ನು ತೆಗೆದ ಕಾರ್ಮಿಕರು ಮತ್ತೆ ವಾಪಸ್ ಬಂದಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಕಾಮಗಾರಿ ಮುಗಿದಿದೆ ಎನ್ನುತ್ತಿದ್ದಾರೆ. ಸ್ಥಳೀಯ ಸಿಬ್ಬಂದಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸುತ್ತಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.