Tractor rally 
ಬೆಂಗಳೂರು ಗ್ರಾಮಾಂತರ

ಭೂಸ್ವಾಧೀನ ವಿರೋಧಿಸಿ ಟ್ರ್ಯಾಕ್ಟರ್ ರ‌್ಯಾಲಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿನ ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ, ನಾರನಹಳ್ಳಿ, ದೊಡ್ಡಬೆಳವಂಗಲ ಗ್ರಾಮದಲ್ಲಿ 2,100 ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಉದ್ದೇಶಿತ ಭೂ ಸ್ವಾಧೀನ ಪಡಿಸಿಕೊಳ್ಳಲು ಈಗಾಗಲೇ ಸ್ಥಳ ತನಿಖೆ ಮಾಡಲಾಗಿದೆ ಎಂಬ ಕಾರಣಕ್ಕೆ ಮಂಗಳವಾರ ಬೃಹತ್‌ಪ್ರತಿಭಟನೆಗೆ ವೇದಿಕೆ ಸಿದ್ದವಾಗಿದೆ.
ಈಗಾಗಲೇ ಹಳ್ಳಿಹಳ್ಳಿಗಳಲ್ಲಿ ಸಭೆ ಮಾಡಿ ಜನರನ್ನು ಜಾಗೃತಿ ಮಾಡಿರುವ ಹೋರಾಟ ಸಮಿತಿ ಚಿಕ್ಕಬೆಳವಂಗಲದಿಂದ ದೊಡ್ಡಬೆಳವಂಗಲದವರೆಗೆ ಮೆರವಣಿಗೆ ಮಾಡಿ ಹೋಬಳಿ ಕೇಂದ್ರದಲ್ಲಿ ಹೋರಾಟ ಮಾಡಿ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಇದೀಗ ಹೋರಾಟ ತೀವ್ರಗೊಳಿಸಲು ಮಾ.31ಕ್ಕೆ ತಾಲೂಕು ಕೇಂದ್ರದಲ್ಲಿ ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ಮೂಲಕ ಪ್ರತಿಭಟನೆಗೆ ರೈತರು ತೀರ್ಮಾನಿಸಿದ್ದಾರೆ.
ಭೂಮಿ ರಕ್ಷಣೆಗೆ ಸಜ್ಜು:
ತಾಲೂಕಿನಲ್ಲಿ ಈಗಾಗಲೇ 10 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿಯ ಪ್ರಮಾಣದಲ್ಲಿ ಇಳಿಕೆಯಾಗುತ್ತಲೇ ಇದೆ. ಇತ್ತಿಚೀಗೆ ಟೌನ್‌ಶಿಪ್, ಲಾಜಿಸ್ಟಿಕ್ ಪಾರ್ಕ್ ಸೇರಿದಂತೆ ನಾನಾ ಯೋಜನೆಗಳಿಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡಿದೆ. ಹೀಗೆ ದೊಡ್ಡಬಳ್ಳಾಪುರದಲ್ಲಿ ಮತ್ತೊಂದು ಭೂಸ್ವಾಧೀನದ ಭೀತಿ ಎದುರಾಗಿದೆ. ಇಲ್ಲಿನ ರೈತರು ಭೂಮಿ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದೇವನಹಳ್ಳಿಯ ಚನ್ನರಾಯಪಟ್ಟಣ ರೈತರ ಮಾದರಿಯಲ್ಲಿ ಒಗ್ಗಟ್ಟಿನ ಹೋರಾಟ ರೂಪಿಸಿದ್ದು, ಶತಾಯಗತಯ ಭೂಮಿ ಉಳಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ವಿರೋಧ ಏಕೆ?:
ಕೈಗಾರಿಕೆಗಳ ಅಭಿವೃದ್ಧಿ ಹೆಸರಲ್ಲಿ ಫಲವತ್ತಾದ ಕೃಷಿಭೂಮಿ ಉದ್ದೇಶಿತ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಇದರಂತೆ ದೊಡ್ಡಬೆಳವಂಗಲ ಭಾಗದಲ್ಲಿ ಭೂಸ್ವಾಧೀನಕ್ಕೆ ಗುರುತಿಸಲಾದ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳಾದ ರಾಗಿ, ತೆಂಗು, ಅಡಿಕೆ, ಹೈನುಗಾರಿಕೆ, ಸಮಗ್ರ ಕೃಷಿ ನಡೆಯುತ್ತಿದೆ. ಅರ್ಕಾವತಿ ಮತ್ತು ಕುಮದ್ವತಿ ನದಿ ಪಾತ್ರದ 5ಕ್ಕೂ ಹೆಚ್ಚು ಕೆರೆಗಳು, 50ಕ್ಕೂ ಅಧಿಕ ಕುಂಟೆಗಳು ಇವೆ. ಜತೆಗೆ ಇಲ್ಲಿಂದ 4 ಕಿ.ಮೀ ಅಂತರದಲ್ಲಿಯೇ 5,800 ಎಕರೆ ಕ್ವಿನ್ ಸಿಟಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ನಾವು ಜೀವನ ಮಾಡುವುದು ಹೇಗೆ ಎಂಬುದು ಸ್ಥಳೀಯರ ಪ್ರಶ್ನೆ?
ಸಭೆ ಮೂಲಕ ಜನಜಾಗೃತಿ
ಚನ್ನರಾಯಪಟ್ಟಣ ರೈತರ ಹೋರಾಟ ಸ್ಫೂರ್ತಿಯಾಗಿ ಪಡೆದು, ಹಳ್ಳಿಗಳಲ್ಲಿ ಸಭೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಜಿಲಾ ್ಲಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಟ ಮಾರ್ಗ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೈನುಗಾರಿಕೆಗೆ ಸಮೃದ್ಧವಾಗಿದ್ದು, ಪ್ರತಿ ಗ್ರಾಮದಿಂದ ಸಾವಿರ ಲೀಟರ್ ಹಾಲು ಪ್ರತಿನಿತ್ಯ ಉತ್ಪಾದನೆ ಆಗುತ್ತಿದೆ. ಐದು ಗ್ರಾಮಗಳಿಂದ 300 ಕುಟುಂಬಗಳಿದ್ದು, 12 ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಕುರಿ, ಮೇಕೆ ಸಾಕಾಣಿಕೆ ಸೇರಿದಂತೆ ಕುಕ್ಕುಟೋದ್ಯಮವೂ ಇಲ್ಲಿನ ಜನರ ಜೀವನಾಡಿಯಾಗಿದೆ.
ಈ ಹಿಂದೆ ಶಾಶ್ವತ ನೀರಾವರಿಗೆ ಹೋರಾಟ ಮಾಡಿದಾಗ ಸರ್ಕಾರ ಎತ್ತಿನಹೊಳೆ ಯೋಜನೆ ಜಾರಿ ಮಾಡಿದೆ. ಇದೀಗ ನೀರು ಬರುವ ಮುನ್ನವೇ ರೈತರಿಂದ ಕೃಷಿ ಭೂಮಿಯನ್ನ ಕಸಿದುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡರೆ ಎತ್ತಿನಹೊಳೆ ನೀರು ಬಳಸುವವರು ಯಾರು.? ಭೂ ಸ್ವಾಧೀನ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು.
ಪ್ರಭಾ ಬೆಳವಂಗಲ, ರಾಜ್ಯ ಉಪಾಧ್ಯಕ್ಷೆ, ಪ್ರಾಂತ ರೈತ ಸಂಘ
ಭೂಮಿಯನ್ನು ಮಾರಾಟ ಮಾಡುವುದಿಲ್ಲ. ನಮ್ಮ ಹೋರಾಟದಲ್ಲಿ ಒಗ್ಗಟ್ಟಿದೆ. ಎಷ್ಟೇ ಬೆಲೆ ನೀಡಿದರೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಸತತ ಹೋರಾಟ ಮಾಡಲಾಗುವುದು. ಹೋರಾಟಕ್ಕೆ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವೆಂಕಟರಮಣಯ್ಯ, ಜೆಡಿಎಸ್ ಮುಖಂಡ ಮುನೇಗೌಡ ಬೆಂಬಲ ನೀಡಿದ್ದಾರೆ.
ಡಿ.ಸಿ ಶಶಿಧರ್, ಹೋರಾಟ ಸಮಿತಿ ಮುಖಂಡ.