ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ತೋಟಗಾರಿಕೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ತೋಟಗಾರಿಕೆ ಪ್ರವಾಸೋದ್ಯಮ ಯೋಜನೆಯಡಿ 35 ಎಕರೆ ವಿಸ್ತೀರ್ಣದ ಮನಮೋಹಕ ಉದ್ಯಾನವನ ಮೈದಳೆದಿದ್ದು, ಜಿಲ್ಲೆಯ ಪ್ರವಾಸಿತಾಣಗಳ ಪಟ್ಟಿಗೆ ಮತ್ತೊಂದು ವಿಶೇಷತೆ ಸೇರ್ಪಡೆಯಾದಂತಾಗಿದೆ.
ನೆಲಮಂಗಲ ತಾಲೂಕು ತಿಪ್ಪಗೊಂಡನಹಳ್ಳಿಯಲ್ಲಿ ಈ ವಿಶೇಷ ಪಾರ್ಕ್ ಗಮನ ಸೆಳೆಯುತ್ತಿದ್ದುಮ ಜಿಲ್ಲೆಯ ಪ್ರವಾಸಿರ ಮನಸೂರೆಗೊಳ್ಳುವ ಅದ್ಬುತ ತಾಣವಾಗಿ ಪ್ರಚಲಿತಕ್ಕೆ ಬರುತ್ತಿದೆ. ಅಚ್ಚ ಹಸಿರಿನಿಂದ ಕೂಡಿರುವ ಅದ್ಬುತವಾದ ಈ ಪ್ರದೇಶವನ್ನು ಸಸ್ಯ ಜೀವ ವೈವಿಧ್ಯತೆ ಹಾಗೂ ವಿಶೇಷ ತೋಟಗಾರಿಕೆ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಸ್ಥಳವು ಬೆಂಗಳೂರು ನಗರದಿಂದ 35 ಕಿ.ಮೀ ದೂರದಲ್ಲಿದೆ, ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿಯಲ್ಲಿನ ದಕ್ಷಿಣ ಕಾಶಿ ಶಿವಗಂಗೆಗೆ ಸಮೀಪದಲ್ಲೇ ಈ ಉದ್ಯಾನವನ ಕೈಬೀಸಿ ಕರೆಯುತ್ತಿದೆ. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಶಿವಗಂಗೆಯತ್ತ ದೌಡಾಯಿಸುವ ಸಾವಿರಾರು ಚಾರಣಪ್ರಿಯರಿಗೆ ಇದೊಂದು ವಿಶೇಷ ಅನುಭವ ಕಲ್ಪಿಸುವ ತಾಣವಾಗಿ ರೂಪುಪಡೆದುಕೊಂಡಿದೆ.
ಪ್ರವಾಸಿಗರಿಗೆ ನೈಜ ತೋಟಗಾರಿಕೆ ಅನುಭವ ನೀಡುವುದು ಈ ಸ್ಥಳದ ಪ್ರಮುಖ ವಿಶೇಷತೆಯಾಗಿದೆ. ಹಲವು ಬಗೆಯ ಅಲಂಕಾರಿಕ ಹೂ ಕುಂಡಗಳನ್ನು ಸಿದ್ಧಪಡಿಸುವುದು, ಸಸಿಗಳನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ಖುದ್ದು ತೋಟಗಾರಿಕೆ ಇಲಾಖೆ ಸಿಬ್ಬಂದಿ ತರಬೇತಿ ನೀಡಲಾಗುತ್ತದೆ. ಎರೆಹುಳು ಗೊಬ್ಬರವನ್ನು ತಯಾರಿಸುವ ವಿಧಾನ, ಜೇನು ಸಾಕಾಣಿಕೆ ಮಾಡುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಲಾಗುತ್ತದೆ. ತೋಟಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಬೆಂಗಳೂರಿನಂತ ಮಹಾನಗರಗಳಲ್ಲಿ ಸಾಮಾನ್ಯವಾಗಿ ಕಾಣುವ ತಾರಸಿ ತೋಟಗಳ ನಿರ್ಮಾಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಇಲ್ಲಿ ಗುಣಮಟ್ಟದ ಕಸಿ ಮಾಡಿದ ಸಸಿಗಳು ಸೇರಿ ವಿವಿಧ ಬಗೆಯ ಸಸಿಗಳ ಮಾರಾಟ ಮಳಿಗೆಗಳು ಕಂಡುಬರಲಿವೆ.
ತಿಪ್ಪಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ 200 ಕ್ಕೂ ಹೆಚ್ಚಿನ ಔಷಧೀಯ ಸಸಿಗಳನ್ನು ಕಾಣಬಹುದಾಗಿದೆ, ಮನೆಗಳಲ್ಲಿನ ಆವರಣಗಳಲ್ಲಿ ಕುಂಡಗಳಲ್ಲಿ ಬೆಳೆಸಬಹುದಾದ ಬಹುವಿಧದ ಔಷಧೀಯ ಸಸಿಗಳು ಕಂಡುಬರುತ್ತಿವೆ. ಇವುಗಳನ್ನು ರಿಯಾಯತಿ ದರದಲ್ಲಿ ತೋಟಗಾರಿಕೆ ಇಲಾಖೆ ನೀಡಲಿದೆ. ಜತೆಗೆ ಇವುಗಳನ್ನು ಬೆಳೆಸುವ ವಿಧಾನದ ಬಗ್ಗೆ ತಿಳಿಸುವುದರ ಜತೆಗೆ ಈ ಸಸಿಗಳಿಂದಾಗವ ಉಪಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ.
ತೋಟಗಾರಿಕಾ ಕ್ಷೇತ್ರದಲ್ಲಿ ಬಹಳ ಬೇಡಿಕೆ ಇರುವ ಪ್ರಮುಖ ಹಣ್ಣಿನ ಗಿಡಗಳು ಲಭ್ಯವಿದ್ದು, ಹತ್ತು ಹಲವು ಬಗೆಯ ಹಣ್ಣಿನ ಸಸಿಗಳ ಸೊಬಗನ್ನು ಕಾಣಬಹುದಾಗಿದೆ. ಸಪೋಟ ತೋಟ ಮತ್ತು ವಿವಿಧ ಬಗೆಯ ಹಣ್ಣಿನ ತೋಟಗಳಿವೆ. ಸಣ್ಣ ಸಣ್ಣ ತೋಟಗಳಾಗಿ ರೂಪುಗೊಳಿಸಿದ್ದು ಹಣ್ಣಿನ ತೋಟಗಳ ಬಗ್ಗೆ ಆಸಕ್ತಿ ಇರುವವರು ಇಲ್ಲಿನಿಂದ ಮಾಹಿತಿ ಪಡೆಯಬಹುದಾಗಿದೆ.
ಹಸಿನಿಂದ ಕಂಗೊಳಿಸುತ್ತಿರುವ ಸುಂದರವಾದ ಉದ್ಯಾನವನದಲ್ಲಿ ಯುವಕರಿಗೆ ಸಾಹಸ ಕ್ರೀಡೆ ಮತ್ತು ಮಕ್ಕಳಿಗೆ ಒಳಾಂಗಣ ಆಟದ ಸ್ಥಳವನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಶಿವಗಂಗೆಗೆ ಭೇಟಿ ನೀಡುವ ಪ್ರವಾಸಿಗರು ಈ ಉದ್ಯಾನಕ್ಕೆ ದಾವಿಸಿ ವಿಶ್ರಮಿಸಬಹುದಾಗಿದೆ. ಮಕ್ಕಳ ಪ್ಲೆಗ್ರೌಂಡ್‌ನಲ್ಲಿ ಹಲವು ಆಟಿಕೆ ಪರಿಕರಗಳನ್ನು ಅಳವಡಿಸಿದ್ದು ಪಾಲಕರ ಜತೆಗೆ ಬರುವ ಮಕ್ಕಳಿಗೆ ಬಹಳ ಖುಷಿ ಒದಗಿಸಲಿದೆ. ಇದರ ಜತೆಗೆ ಈ ಉದ್ಯಾನವನದಲ್ಲಿ ಅಡುಗೆ ಮನೆ ಹಾಗೂ ತಾರಸಿ ವನವನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಉಪಹಾರ, ಊಟದ ವ್ಯವಸ್ಥೆಯೂ ಇರಲಿದೆ ಎಂಬುದು ಅಧಿಕಾರಿಗಳ ಮಾಹಿತಿಯಾಗಿದೆ. ಇದರ ಜತೆಗೆ ನಿಸರ್ಗದ ನಡುವೆ ಸೈಕ್ಲಿಂಗ್ ಮಾಡಲು ಹಾಗೂ ನೈಸರ್ಗಿಕ ನಡಿಗೆಗೆ ಪ್ರತ್ಯೇಕ ಪಥ ಮಾಡಲು ವಿಶೇಷ ಸ್ಥಳಾವಕಾಶ ಒದಗಿಸಲಾಗಿದೆ.
ತೋಟಗಾರಿಕೆ ಪ್ರವಾಸೋದ್ಯಮ ಯೋಜನೆಯಡಿ 35 ಎಕರೆ ವಿಸ್ತೀರ್ಣದಲ್ಲಿ ಆಕರ್ಷಣೀಯ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಹಾಗೂ ಆಧುನಿಕ ತೋಟಗಾರಿಕೆ ಬಗ್ಗೆ ಅರಿವು ಮೂಡಿಸುವುದು ಮತ್ತು ಗಿಡಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹಾಗೇ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುವುದರಿಂದ ಶೈಕ್ಷಣಿಕವಾಗಿ ಅನುಕೂಲವಾಗುತ್ತದೆ, ಪ್ರವಾಸಿಗರಿಗೆ ಇದೊಂದು ವಿಶೇಷ ಅನುಭವನ ನೀಡಲಿದೆ.
ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬೆಂ.ಗ್ರಾಮಾಂತರ