Tomb of the Avati Nadaprabhu
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಕಾರಹಳ್ಳಿ ಹೊರವಲಯದಲ್ಲಿ ಆವತಿ ನಾಡಪ್ರಭುಗಳ ಕಾಲಕ್ಕೆ ಸೇರಿದ್ದು ಎನ್ನಲಾದ ಸಮಾಧಿಯೊಂದನ್ನು ಇತಿಹಾಸ ತಜ್ಞರು ಇತ್ತೀಚಿಗೆ ಸಂಶೋಧನೆ ಮಾಡಿದ್ದಾರೆ. ಅರಳು ಮಲ್ಲಿಗೆ ಗ್ರಾಮದಲ್ಲಿನ ತಾಮ್ರ ಶಾಸನವೊಂದರಲ್ಲಿ ಉಲ್ಲೇಖವಾಗಿರುವ ಹಾವಳೀ ಬೈರೇಗೌಡ ಕಾರೇಹಳ್ಳಿ ನಿವಾಸೇನ ಎಂಬ ಬರಹ ಇದು ಆವತಿ ನಾಡಪ್ರಭುಗಳ ಆಳ್ವಿಕೆ ಕಾಲದ್ದು ಎಂಬುದನ್ನು ಸೂಚಿಸುತ್ತದೆ ಎನ್ನಲಾಗಿದೆ.
ಹಲವು ಶಾಸನಗಳು, ಮಾಸ್ತಿಗಲ್ಲು-ವೀರಗಲ್ಲುಗಳು, ಕೋಟೆ-ಕೊತ್ತಲಗಳು ಸೇರಿ ನಾಡಿನ ಅನೇಕ ಪೂರ್ವಿಕರ ಇತಿಹಾಸವನ್ನು ಅಡಗಿಸಿಟ್ಟುಕೊಂಡಿರುವ ಗ್ರಾಮಾಂತರ ಜಿಲ್ಲೆಗೆ ಆವತಿ ನಾಡಪ್ರಭುಗಳ ಸಮಾಧಿಯ ಸಂಶೋಧನೆ ಮತ್ತೊಂದು ಗರಿಮೆ ಮೂಡಿಸಿದೆ.
ಕ್ರಿ,ಶ 15ರಿಂದ 18ನೇ ಶತಮಾನದವರೆಗೆ ಆಳ್ವಿಕೆಗೆ ಒಳಪಟ್ಟಿದ್ದ ಹಲವು ಪ್ರಾಂತ್ಯಗಳ ರಾಜವಂಶಸ್ಥರ ಸಾಲಿನಲ್ಲಿ ಆವತಿ ನಾಡ ಪ್ರಭುಗಳು ಒಬ್ಬರಾಗಿದ್ದು, ಆವತಿ ನಾಡಪ್ರಭುಗಳ ಮೂಲದ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾ ಯಗಳಿದ್ದರೂ, ಅವರು ಪ್ರಾರಂಭದಲ್ಲಿ ಆವತಿ ಹಾಗೂ ಪಕ್ಕದ ಕಾರೇಹಳ್ಳಿಗಳಲ್ಲಿ ನೆಲೆಸಿದ್ದರು ಎಂಬುದಕ್ಕೆ ಸಾಕಷ್ಟು ಆಧಾರ ದೊರೆತಿದೆ ಎನ್ನುತ್ತಾರೆ ಇತಿಹಾಸ ಸಂಶೋಧಕರು.
ಇತಿಹಾಸ ಸಂಶೋಧಕ ದೊಡ್ಡಬಳ್ಳಾಪುರ ಡಾ.ಎಸ್.ವೆಂಕಟೇಶ್ ಮತ್ತು ದೇವನಹಳ್ಳಿಯ ಬಿ.ಜಿ.ಗುರುಸಿದ್ದಯ್ಯ ಇತ್ತೀಚಿಗೆ ಕಾರಹಳ್ಳಿಗೆ ಭೇಟಿ ನೀಡಿದಾಗ ಅವತಿ ನಾಡಪ್ರಭುಗಳ ಕಾಲದ ಸಮಾಧಿ ಮಂಟಪವನ್ನು ಗುರುತಿಸಿದ್ದಾರೆ. ಇದರ ಸಂಶೋಧನೆಗಿಳಿದಾಗ ಪ್ರಾಥಮಿಕವಾಗಿ ಇದು ಆವತಿ ನಾಡಪ್ರಭುಗಳ ಕಾಲದ್ದು ಎಂದು ಊಹಿಸಲಾಗಿದೆ.
ಸಮಾಧಿಯನ್ನು ಚೌಕಾಕಾರದ ವೇದಿಕೆ ಮೇಲೆ ನಿರ್ಮಿಸಲಾಗಿದೆ. ವೇದಿಕೆಯ ನಾಲ್ಕೂ ಮೂಲೆಗಳಲ್ಲಿ 8 ಅಡಿ ಎತ್ತರದ ಕಂಬಗಳಿದ್ದು ಅದರ ಮೇಲೆ ನಕ್ಷತ್ರಾಕಾರದ ಛಾವಣಿ ನಿರ್ಮಿಸಲಾಗಿದೆ. ಇಲ್ಲಿನ ಚತು ರ್ಮೂಲೆಯ ಕಂಬಗಳ ಮೇಲೆ ಬಸವ (ನಂದಿ), ಮದಗಜ, ಪುಷ್ಪ ವಿನ್ಯಾಸ, ರಾಜನಂತಿರುವ ವ್ಯಕ್ತಿ, ರಾಜಪರಿವಾರದ ಮಹಿಳೆ ಮೊದಲಾದ ಶಿಲ್ಪಗಳನ್ನು ಗುರುತಿಸಬಹುದು. ಮಂಟಪದ ಸುತ್ತಲೂ ನಾಲ್ಕೂ ದಿಕ್ಕಿನಲ್ಲಿ ಎರಡೆರಡು ಆನೆಗಳಿವೆ. ಈ ಮಂಟಪದ ವಿನ್ಯಾಸ, ಅವುಗಳ ಮೇಲಿನ ಶಿಲ್ಪ ಮತ್ತು ಅಲ್ಲಿನ ಜಾಗ ಆವತಿ ನಾಡಪ್ರಭುಗಳ ಸಾಲಿನ ಸಮಾಧಿ ಎಂಬುದನ್ನು ಸೂಚಿಸುತ್ತದೆ ಆದರೆ ಯಾವ ದೊರೆಯ ಸಮಾಧಿ ಎಂದು ನಿಖರವಾಗಿ ಹೇಳಲು ಆಧಾರಗಳು ದೊರೆತಿಲ್ಲ ಎನ್ನಲಾಗಿದೆ.
ದೇವನಹಳ್ಳಿ ತಾಲೂಕು ಕಾರಹಳ್ಳಿಯಲ್ಲಿ ಆವತಿ ನಾಡಪ್ರಭುಗಳ ಸಮಾಧಿಯನ್ನು ಗುರುತಿಸಲಾಗಿದೆ,
ಇದರ ವಿನ್ಯಾಸ ಹಾಗೂ ರಚನೆಯಿಂದ ಇದು ಆವತಿ ನಾಡಪ್ರಭುಗಳಲ್ಲಿ ಒಬ್ಬರ ಸಮಾಧಿ ಎಂಬುದಾಗಿ ಗುರುತಿಸಬಹುದಾಗಿದೆ. ಹಲವು ಇತಿಹಾಸವ್ನ ಒಡಲಿನಲ್ಲಿಟ್ಟುಕೊಂಡಿರುವ ದೇವನಹಳ್ಳಿಯಲ್ಲಿ ಮತ್ತೊಂದು ಇತಿಹಾಸದ ಕುರುಹು ಪರಿಚಯವಾದಂತಾಗಿದೆ.
ಬಿಟ್ಟಸಂದ್ರ ಗುರುಸಿದ್ದಯ್ಯ ಇತಿಹಾಸ ಸಂಶೋಧಕ, ದೇವನಹಳ್ಳಿ