ವಿಜಯಪುರ : ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳೆಯರು ಸಬಲ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಕಾಳಜಿ ಸೇರಿ ಕುಟುಂಬದ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ದಿನೇಶ್ ಕುಮಾರ್ ಹೇಳಿದರು.
ಹೋಬಳಿಯ ಮಂಡಿಬೆಲೆ ಡೇರಿಯಲ್ಲಿ ಆಯೋಜಿಸಿದ್ದ ಧನಲಕ್ಷಿ$್ಮ ಜ್ಞಾನವಿಕಾಸ ಕೇಂದ್ರದ 5ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಹಿಳೆಯರನ್ನು ಸ್ವಾವಲಂಬಿ ಹಾಗೂ ಸಬಲರನ್ನಾಗಿಸುವ ಉದ್ದೇಶದಿಂದ ಸ್ತ್ರೀ ಸ್ವಸಹಾಯ ಸಂಘಗಳ ಮೂಲಕ ಹಲವು ಸ್ವಉದ್ಯೋಗ ಯೋಜನೆ ರೂಪಿಸಲಾಗಿದೆ. ಹೈನುಗಾರಿಕೆ, ಟೇಲರಿಂಗ್, ಬ್ಯೂಟಿಷಿಯನ್ ಸೇರಿ ವಿವಿಧ ಸ್ವಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಮಹಿಳೆಯರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ. ಸ್ವಸಹಾಯ ಸಂಘಗಳ ಸದಸ್ಯರಾಗುವುದರಿಂದ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ಕುಟುಂಬ ನಿರ್ವಹಣೆ, ಆರೋಗ್ಯ, ಮಕ್ಕಳ ಶಿಕ್ಷಣ ಸೇರಿ ಹಲವು ವಿಷಯಗಳ ಕುರಿತು ಅರಿವು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಧನಲಕ್ಷಿ$್ಮ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಹಿಂದೆ ಮಹಿಳೆಯರು ಮನೆಯ ಕೆಲಸಕ್ಕೆ ಸೀಮಿತರಾಗಿದ್ದರು. ಆದರೆ ಸ್ವಸಹಾಯ ಸಂಘಗಳಿಗೆ ಸೇರಿದ ನಂತರ ನಾಲ್ಕು ಜನರೊಂದಿಗೆ ಬೆರೆಯುವುದು, ಆತ್ಮವಿಶ್ವಾಸದಿಂದ ಮಾತನಾಡುವುದು, ವಿವಿಧ ವೇದಿಕೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಹಾಗೂ ಬ್ಯಾಂಕ್ ವ್ಯವಹಾರಗಳನ್ನು ಸ್ವತಂತ್ರವಾಗಿ ನಿರ್ವಹಿಸುವುದನ್ನು ಕಲಿತಿದ್ದೇವೆ ಎಂದು ಹೇಳಿದರು.
ಜ್ಞಾನವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಉಪಯುಕ್ತ ಹಾಗೂ ಜೀವನೋಪಯೋಗಿ ಮಾಹಿತಿ ನೀಡಲಾಗುತ್ತಿದ್ದು, ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನಂತೆ ಜ್ಞಾನವಿಕಾಸ ಕೇಂದ್ರಗಳ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರಾಗುವ ಮೂಲಕ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ದಿನೇಶ್ ಕುಮಾರ್ ಕರೆ ನೀಡಿದರು. ಮೇಲ್ವಿಚಾರಕ ಉಮೇಶ್, ಕೇಂದ್ರದ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಬ್ಬಂದಿ ಇದ್ದರು.