teachers-day 
ಬೆಂಗಳೂರು ಗ್ರಾಮಾಂತರ

ವ್ಯಕ್ತಿಯ ಪರಿಪೂರ್ಣತೆಗೆ ಗುರು ಅವಶ್ಯ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಯಾವುದೇ ವ್ಯಕ್ತಿ ಪರಿಪೂರ್ಣತೆ ಹೊಂದಲು ಗುರುಗಳ ಮಾರ್ಗದರ್ಶನ ಅವಶ್ಯವಾಗಿದೆ, ಅಂಗೈನಲ್ಲೇ ಎಲ್ಲವನ್ನೂ ಅರಿಯುವ ಅವಿಷ್ಕಾರಗಳಿದ್ದರೂ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಗುರುವಿನ ಅವಶ್ಯಕತೆ ಇದ್ದೇ ಇರುತ್ತದೆ ಎಂದು ಶಿವಗಂಗೆ ಕ್ಷೇತ್ರ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನೆಲಮಂಗಲ ತಾಲೂಕು ತ್ಯಾಮಗೊಂಡ್ಲುವಿನಲ್ಲಿರುವ ಜ್ಞಾನಧಾಮ ಸಮೂಹ ಸಂಸ್ಥೆಗಳ ಆವರಣದಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಆಶೀರ್ವಚನ ನೀಡಿದರು. ಜಗತ್ತು ವೇಗವಾಗಿ ಚಲಿಸುತ್ತಿದೆ ಜೆನ್​ ಜೀ, ಅಲ್ಪಾ ಜಮಾನವಿದೆ, ಅತ್ಯಾಧುನಿಕ ಉಪಕರಣಗಳ ಅವಿಷ್ಕಾರವಾಗುತ್ತಿದೆ, ಇಷ್ಟೆಲ್ಲ ಇದ್ದರೂ ಇದರ ಹಿಂದೆ ಗುರು ಇದ್ದೇ ಇರಬೇಕು, ಆಧುನಿಕ ಉಪಕರಣಗಳು ವ್ಯಕ್ತಿಗೆ ಮಾಹಿತಿ ನೀಡಬಹುದೇ ಹೊರತು ಸಂಸ್ಕಾರ ನೀಡಲು ಸಾಧ್ಯವಿಲ್ಲ. ವಿದ್ಯಾರ್ಥಿಯಲ್ಲಿನ ಪ್ರತಿಭೆಗೆ ಜೀವಂತಿಕೆ ನೀಡುವುದು ಗುರುಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ವಿಚಾರದೊಂದಿಗೆ ವಿವೇಕ ತುಂಬಬೇಕಿದೆ:
ಇಂದಿನ ಶಿಕ್ಷಕರ ಮುಂದೆ ಸಾಕಷ್ಟು ಸವಾಲುಗಳಿವೆ, ವಿದ್ಯಾರ್ಥಿಗಳು ಶೇ.100 ಅಂಕ ಪಡೆದರೆ ಮಾತ್ರ ಅದರ ಶ್ರೇಯಸ್ಸು ಶಿಕ್ಷಕರಿಗೆ ದಕ್ಕುತ್ತದೆ ಎಂಬಂತ ಪರಿಸ್ಥಿತಿ ಇದೆ. ಇದಕ್ಕಾಗಿ ಶಿಕ್ಷಕರು ವಯಕ್ತಿಕ ಬದುಕನ್ನು ಬದಿಗೊತ್ತಿ ದುಡಿಯುವಂತಾಗಿದೆ ಎಂದ ಶ್ರೀಗಳು, ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಚಾರದೊಂದಿಗೆ ವಿವೇಕ ತುಂಬುವ ಕೆಲಸ ಮಾಡಬೇಕು. ಮಕ್ಕಳಲ್ಲಿನ ಚೇತನವನ್ನು ಜಾಗೃತಗೊಳಿಸಬೇಕಿದೆ ಮುಖ್ಯವಾಗಿ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಶಿಕ್ಷಕರು ಹೆಚ್ಚೆಚ್ಚು ಶ್ರಮಿಸಬೇಕಿದೆ ಎಂದು ತಿಳಿಸಿದರು.
ಅದೃಶ್ಯ ಶಕ್ತಿಯೇ ಗುರು:
ನಾವು ಮಾಡುವ ಕೆಲಸಗಳು, ನಡೆದುಕೊಳ್ಳುವ ರೀತಿ ಬದುಕುವ ಬದುಕು ಇವೆಲ್ಲವೂ ಹುಟ್ಟಿನಿಂದಲೇ ಬರುವುದಿಲ್ಲ. ಇವುಗಳ ಹಿಂದೆ ಅದೃಶ್ಯ ಶಕ್ತಿ ಕೆಲಸ ಮಾಡುತ್ತದೆ, ನಮ್ಮನ್ನು ತಿದ್ದೀತಿಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಆ ಅದೃಶ್ಯ ಶಕ್ತಿಯೇ ಗುರುವಾಗಿರುತ್ತಾನೆ ಎಂದು ಜ್ಞಾನಧಾಮ ಸಮೂಹ ಸಂಸ್ಥೆಯ ಶಿವಕುಮಾರ್​ ಹೇಳಿದರು. ಗುರುವಿಲ್ಲದೆ ಯಾವುದೇ ಸಾಧನೆ ಸಾಧ್ಯವಾಗುವುದಿಲ್ಲ. ಸಣ್ಣ ಕಿಡಿಯನ್ನು ಜ್ವಾಲಾಮುಖಿಯನ್ನಾಗಿಸುವ ಶಕ್ತಿ ಗುರುವಿಗೆ ಇರುತ್ತದೆ, ಅಂಧಾರಕಾರವನ್ನು ನಾಶ ಮಾಡುವ ಶಿಕ್ಷಕರೇ ಗುರುಗಳಾಗಿರುತ್ತಾರೆ ಎಂದು ಹೇಳಿದರು. ಗುರುವಿಲ್ಲದೆ ಯಾವುದೇ ಸಾಮ್ರಾಜ್ಯವನ್ನು ನಾವು ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ಛತ್ರಪತಿ ಶಿವಾಜಿ, ಚಂದ್ರಗುಪ್ತ ಮೌರ್ಯ ಮತ್ತಿತರ ಸಾಮ್ರಾಟರ ಹಿಂದೆ ಪ್ರಬಲ ಗುರುಗಳಿದ್ದರು ಎಂಬುದನ್ನು ಸ್ಮರಿಸಬೇಕಿದೆ ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸಬಾರದು, ಅದರೊಂದಿಗೆ ಜ್ಞಾನದ ಭಂಡಾರವನ್ನು ತುಂಬಬೇಕು. ಕಲ್ಲುಗಳನ್ನು ಹೇಗೆ ಶಿಲೆಯಾಗಿ ರೂಪಿಸಬಹುದೋ ಹಾಗೆಯೇ ವಿದ್ಯಾರ್ಥಿಗಳಲ್ಲಿ ಸಂಸತಿ, ಸಂಸ್ಕಾರವನ್ನು ತುಂಬಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಶಕ್ತಿ ಗುರುಗಳಿಗಿದೆ ಎಂದು ಹೇಳಿದರು.
ಸರ್ಕಾರದಿಂದ ತಾರತಮ್ಯ ಧೋರಣೆ:
ಖಾಸಗಿ ಶಾಲೆಗಳನ್ನು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರನ್ನು ಸರ್ಕಾರ ತಾರತಮ್ಯದಿಂದ ಕಾಣುತ್ತಿದೆ. ಖಾಸಗಿ ಶಾಲೆಗಳಿಗೆ ಸರ್ಕಾರ ಕವಡೆ ಕಿಮ್ಮತ್ತೂ ನೀಡುತ್ತಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದ್ದಿ ಸುರೇಶ್​ ಬೇಸರ ವ್ಯಕ್ತಪಡಿಸಿದರು. ಶಿಕ್ಷಕರ ದಿನಾಚರಣೆಯಲ್ಲಿ ಸರ್ಕಾರ ಕೇವಲ ಸರ್ಕಾರಿ ಶಾಲೆ ಶಿಕ್ಷಕರನ್ನು ಗೌರವಿಸುತ್ತದೆ, ಸರ್ಕಾರಿ ಶಾಲೆ ಮಕ್ಕಳಿಗೆ ವಿವಿಧ ಬಗೆಯಲ್ಲಿ ಪ್ರೋತ್ಸಾಹ, ಸತ್ಕಾರ ನೀಡುತ್ತದೆ, ಇಂಥ ವಿಷಯಗಳಲ್ಲಿ ಖಾಸಗಿ ಶಾಲೆಗಳನ್ನು ಹೊರಗಿಟ್ಟು ನೋಡುತ್ತದೆ ಇದಕ್ಕೆ ಎದೆಗುಂದಬೇಕಿಲ್ಲ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಖಾಸಗಿ ಶಾಲೆಗಳ ಒಕ್ಕೂಟದಿಂದ ಸತ್ಕಾರ, ಪ್ರೋತ್ಸಾಹ ನೀಡುವಲ್ಲಿ ನಾವೆಲ್ಲ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು. ಸರ್ಕಾರ ಮಕ್ಕಳಿಗೆ ಬಿಟ್ಟಿ ಭಾಗ್ಯ ನೀಡಿದರೂ ಗುಣಮಟ್ಟದ ಶಿಕ್ಷಣ ಅವಶ್ಯ ಎಂಬುದು ಪಾಲಕರಿಗೆ ತಿಳಿದಿದೆ. ನಾವೆಲ್ಲ ಒಗ್ಗಟ್ಟಿನಿಂದ ಶ್ರಮಿಸಬೇಕು. ಉತ್ತಮ ಲಿತಾಂಶದೊಂದಿಗೆ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ನಾವೆಲ್ಲ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು. ಸೆಪ್ಟೆಂಬರ್​ ತಿಂಗಳು ಕಳೆಯುತ್ತಾ ಬಂದರೂ ಖಾಸಗಿ ಶಾಲೆಗಳಿಗೆ ಸಮರ್ಪಕವಾಗಿ ಪಠ್ಯಪುಸ್ತಕ ನೀಡಲು ಸರ್ಕಾರ ಹೆಣಗಾಡಿಸುತ್ತದೆ. ಆದರೆ ಮಾರ್ಚ್​ನಲ್ಲಿಯೇ ಪಠ್ಯಪುಸ್ತಕಳಿಗೆ ಹಣ ಕಟ್ಟಿಸಿಕೊಳ್ಳುತ್ತದೆ ಇಂಥ ತಾರತಮ್ಯ ನೀತಿ ಬಿಡಬೇಕು ಎಂದು ಒತ್ತಿ ಹೇಳಿದರು.
ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳು ಸಾಕಷ್ಟು ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಸರ್ಕಾರದ ಮೀಸಲಾತಿ ನಿಯಮದ ಚಿಂತನೆ ಸರ್ಕಾರಿ ಶಾಲೆಗಳ ವಿಷಯದಲ್ಲಿ ಉತ್ತಮ ನಿರ್ಧಾರವಾದರೂ ಇದು ಖಾಸಗಿ ಶಾಲೆಗಳ ಮೇಲೆ ಪರಿಣಾಮ ಬೀರಲಿದೆ. ಖಾಸಗಿ ಶಾಲೆಗಳನ್ನು ನಡೆಸುವುದು ಸುಲಭದ ಮಾತಲ್ಲ, ಈ ನಿಟ್ಟಿನಲ್ಲಿ ಶಿಕ್ಷಕರು ಶಿಕ್ಷಣದ ಸಂಸ್ಥೆಯ ಬೆನ್ನಿಗೆ ನಿಲ್ಲಬೇಕಿದೆ. ಅದೇ ರೀತಿ ವಿದ್ಯಾರ್ಥಿ&ಶಿಕ್ಷಕರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಬೇಕಿದೆ.
> ಕೆ.ಎನ್​.ಚನ್ನೇಗೌಡ, ಸಂಪಾದಕ ವಿಜಯವಾಣಿ
ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನ
ಜ್ಞಾನಧಾಮ ಸಮೂಹ ಸಂಸ್ಥೆ ಆವರಣದಲ್ಲಿ ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾಕೃಷ್ಣ ಸ್ಮರಣಾರ್ಥ ನೆಲಮಂಗಲ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ವಿವಿಧ ಶಾಲೆಗಳ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು. ಜ್ಞಾನತಪಸ್ವಿ, ಜ್ಞಾನಗುರು ಹಾಗೂ ಜ್ಞಾನಸಾರಥಿ ಹೆಸರಿನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಜ್ಞಾನಧಾಮ ಶಾಲೆ ವಿದ್ಯಾರ್ಥಿಗಳು ವಿವಿಧ ನೃತ್ಯರೂಪಕಗಳ ಮೂಲಕ ಗುರುವಂದನೆ ಸಲ್ಲಿಸಿದರು.