ಚಿರತೆ ದಾಳಿಯೂ 
ಬೆಂಗಳೂರು ಗ್ರಾಮಾಂತರ

ಕುರಿಗಳ ಸಾವಿನ ಹಿಂದೆ ಅನುಮಾನದ ಹುತ್ತ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ತಾಲೂಕಿನ ಸೂಲಿಬೆಲೆ ಹೋಬಳಿ ಅತ್ತಿಬೆಲೆ ಗ್ರಾಮದಲ್ಲಿ ಸರಣಿಯಂತೆ 15ಕ್ಕೂ ಹೆಚ್ಚು ಕುರಿಗಳು ಅಪರಿಚಿತ ಪ್ರಾಣಿಗಳ ದಾಳಿಗೆ ಅಸುನೀಗಿದ್ದು ಗ್ರಾಮಸ್ಥರಲ್ಲಿ ಅತಂಕ ಸೃಷ್ಟಿಸಿದೆ.
ಕಳೆದ 15 ದಿನಗಳಿಂದ ಹೊಸಕೋಟೆ ತಾಲೂಕು ವ್ಯಾಪ್ತಿಯ ಕಂಬಳಿಪುರ, ಬೇಗೂರು, ಡಿ.ಶೆಟ್ಟಹಳ್ಳಿ ಬಳಿ ಚಿರತೆಗಳು ಓಡಾಡುತ್ತಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಡುವೆಯೇ ಈ ಪ್ರಕರಣ ನಡೆದಿರುವುದು ಮತ್ತಷ್ಟು ಗುಮಾನಿಗೆ ಎಡೆಮಾಡಿದೆ.
ನಾಯಿಗಳ ದಾಳಿ ಶಂಕೆ?
ಮೇಲ್ನೋಟಕ್ಕೆ ಬೀದಿ ನಾಯಿಗಳ ದಾಳಿಯಿಂದ ಕುರಿಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಹೊಸಕೋಟೆ ಅರಣ್ಯಾಧಿಕಾರಿಗಳು ಪರಿಶೀಲನೆ ವೇಳೆ ಇದು ಚಿರತೆ ದಾಳಿಯಾಗಿರಲು ಸಾಧ್ಯವಿಲ್ಲ. ಬೀದಿನಾಯಿಗಳು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಆದರೆ ಗ್ರಾಮಸ್ಥರು ಈ ಭಾಗದಲ್ಲಿ ಚಿರತೆಗಳು ಓಡಾಡುತ್ತಿವೆ ನಾವು ಕಂಡಂತೆ ಈ ಭಾಗದಲ್ಲಿ ಕುರಿಗಳ ಮೇಲೆ ದಾಳಿ ನಡೆಸುವಷ್ಟು ಬೀದಿನಾಯಿಗಳು ಇಲ್ಲ. ಇದು ಚಿರತೆಯದ್ದೇ ಕೃತ್ಯ ಎಂದು ವಾದಿಸುತ್ತಿದ್ದಾರೆ. ಕೆಲವೆ ದಿನಗಳ ಹಿಂದೆ ಇದೇ ರೀತಿ ಪ್ರಕರಣವಾದಾಗಲು ಅರಣ್ಯ ಇಲಾಖೆ ಅಧಿಕಾರಿಗಳು ನಾಯಿಗಳ ದಾಳಿ ಎಂದು ನಿರ್ಲಕ್ಷ್ಯ ಮಾಡಿದ್ದಾರೆ ಇಂಥಹದ್ದೆ ಪ್ರಕರಣ ಮರುಕಳಿಸಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ, ಪ್ರಕರಣ ಕಗ್ಗಂಟಾಗಿದ್ದು, ಯಾವ ಪ್ರಾಣಿ ದಾಳಿಯಿಂದ ಕೃತ್ಯ ನಡೆದಿದೆ ಎಂಬುದರ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
ದೊಡ್ಡನಲ್ಲಾಳ ಬಳಿ ಕಾರ್ಯಾಚರಣೆ:
ಇತ್ತೀಚಿಗೆ ದೊಡ್ಡನಳ್ಳಾಳ ಬಳಿ ಚಿರತೆಯೊಂದು ನಾಯಿಯನ್ನು ಬೇಟೆಯಾಡಲು ಹವಣಿಸಿದ್ದ ಮಾಹಿತಿ ಪಡೆದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮೇಕೆಯೊಂದನ್ನು ಬೋನಿನಲ್ಲಿ ಇಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಆದರೆ ಚಿರತೆ ಸುಳಿವಿಲ್ಲದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಮರಣೋತ್ತರ ಪರೀಕ್ಷೆ ಬಳಿಕ ವರದಿ:
ಚಿರತೆಗಳು ಸಾಮಾನ್ಯವಾಗಿ ದಾಳಿ ಮಾಡಿ ಪ್ರಾಣಿಗಳನ್ನು ಕಚ್ಚಿ ದೂರಕ್ಕೆ ಕೊಂಡೋಯ್ಯುತ್ತವೆ ಆದರೆ ಇಲ್ಲಿನ ಪ್ರಕರಣದಲ್ಲಿ ಸತ್ತ ಎಲ್ಲ ಕುರಿಗಳು ಅಲ್ಲೆ ಇವೆ ಅಲ್ಲದೆ ಈ ಭಾಗದಲ್ಲಿ ಬೆಟ್ಟಗುಡ್ಡದ ವಾತಾವರಣವಿಲ್ಲ ಆದ್ದರಿಂದ ಈ ಭಾಗದಲ್ಲಿ ಚಿರತೆಗಳು ಬರಲು ಸಾಧ್ಯವಿಲ್ಲ ಎನ್ನವುದು ಅರಣ್ಯ ಇಲಾಖೆಯ ಸ್ಪಷ್ಟಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕುರಿಗಳ ಕಳೆಬರಗಳ ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರಿಗಳಿಗೆ ಪರಿಹಾರ:
ಕುರಿಗಳು ಸಾವನ್ನಪ್ಪಿರುವ ವಿಷಯ ತಿಳಿದ ಜಿಲ್ಲಾ ಪಶುಪಾಲನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುರಿ ಮತ್ತು ಉಣ್ಣೆ ನಿಗಮಕ್ಕೆ ವರದಿ ಕಳುಹಿಸಲಿದ್ದು ಕುರಿಗಳಿಗೆ ತಲಾ 7500 ರೂಪಾಯಿ ಕುರಿಮರಿಗಳಿಗೆ 5 ಸಾವಿರ ರೂ. ಪರಿಹಾರ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಹೊಸಕೋಟೆ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪಶುವೈದ್ಯರು ಪರೀಕ್ಷೆ ನಡೆಸಿ ವರದಿ ನೀಡಲಿದ್ದಾರೆ. ಆ ಬಳಿಕ ಇದು ಬೀದಿನಾಯಿಗಳ ಕೃತ್ಯವೋ ಅಥವಾ ಚಿರತೆ ದಾಳಿಯೋ ಎಂಬುದು ಖಚಿತವಾಗಲಿದೆ ಜತೆಗೆ ಇಲಾಖೆ ವತಿಯಿಂದಲೂ ಸ್ಥಳೀಯ ಸಿಸಿ ಕ್ಯಾಮರಾಗಳ ಪರಿಶೀಲನೆ ಮತ್ತಿತರ ತನಿಖೆ ನಡೆಸಲಾಗುತ್ತಿದೆ.
ಸಂತೋಷ್, ಡಿಸಿಎ್ ಬೆಂಗಳೂರು ಗ್ರಾಮಾಂತರ