Surveillance on unauthorized homestays
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಇತ್ತೀಚಿಗೆ ಕೊಡಗು ವ್ಯಾಪ್ತಿಯ ಹೋಂಸ್ಟೇವೊಂದರಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ಬಳಿಕ ಅಲರ್ಟ್ ಆಗಿರುವ ಗ್ರಾಮಾಂತರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಜಿಲ್ಲೆಯಲ್ಲಿ ಯಾವುದೇ ಅಧಿಕೃತ ಅನುಮೋದನೆ ಅಥವಾ ಪರವಾನಿಗೆ ಪಡೆಯದೆ ಇರುವ ಹೋಂಸ್ಟೇಗಳು ಅನಧಿಕೃತ ಚಟುವಟಿಕೆಗಳನ್ನು ಕೂಡಲೇ ಸ್ಥಗಿತಗೊಳಿಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಹಾಯಕ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಜಿಲ್ಲೆಯಲ್ಲಿನ ಹೋಂಸ್ಟೇಗಳ ತಪಾಸಣೆಗೆ ಮುಂದಾಗಿರುವ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅನಧಿಕೃತ ಎಂಬುದು ಕಂಡುಬಂದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.
ರಾಜ್ಯ ರಾಜಧಾನಿಯ ಗಡಿ ಹಂಚಿಕೊಂಡಿರುವ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸದಾಗಿ ಹೋಂಸ್ಟೇಗಳು ಹುಟ್ಟಿಕೊಳ್ಳುತ್ತಿವೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಬಳಿಕ ದೇವನಹಳ್ಳಿ ವ್ಯಾಪ್ತಿಯಲ್ಲಿ ಹೋಂಸ್ಟೇಗಳ ಅಬ್ಬರ ಕಂಡುಬರುತ್ತಿದೆ. ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಬೆಂಗಳೂರು ಸೇರಿ ನೆರೆ ಜಿಲ್ಲೆಗಳು ಹಾಗೂ ಹೊರ ರಾಜ್ಯದಿಂದಲೂ ಪ್ರವಾಸಿಗರು ಬರುತ್ತಿದ್ದರು ಇವರಿಗೆ ಹೋಂಸ್ಟೇಗಳು ಹೆಚ್ಚು ಆಪ್ತವೆನಿಸುತ್ತಿವೆ. ರೆಸಾರ್ಟ್‌ಗಳಿಗೆ ಹೋಲಿಸಿದರೆ ಹೋಂಸ್ಟೇಗಳು ಪ್ರವಾಸಿಗರಿಗೆ ದುಬಾರಿಯಲ್ಲ ಎನಿಸಿರುವುದು, ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ ಎಂಬ ಕಾರಣಕ್ಕೆ ಪ್ರವಾಸಿಗರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ರೆಸಾರ್ಟ್‌ಗಳಿಗೆ ಹೋಲಿಸಿದರೆ ಹೋಂಸ್ಟೇಗಳಲ್ಲಿ ಭದ್ರತೆ ಬಗ್ಗೆ ಖಾತ್ರಿ ಇಲ್ಲದಂತ ವಾತಾವರಣ ಇರುತ್ತದೆ. ಭದ್ರತಾ ಸಿಬ್ಬಂದಿ, ಸಿಸಿ ಟಿವಿ ಕ್ಯಾಮರಾ ಸೇರಿ ಅಗತ್ಯ ಭದ್ರತಾ ಸಿದ್ದತೆ ಇಲ್ಲದಿರುವುದು ಕಂಡುಬರುತ್ತಿದೆ. ಜತೆಗೆ ಹೋಂಸ್ಟೇ ನಡೆಸುತ್ತಿರುವ ಬಗ್ಗೆ ಪೊಲೀಸರಿಗಾಗಲಿ ಅಥವಾ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗಾಗಲಿ ಮಾಹಿತಿಯೇ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಆಗಮಿಸಿದ ವೇಳೆ ಅಹಿತಕರ ಘಟನೆ ನಡೆದರೆ ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತಿದೆ ಅಲ್ಲದೆ ಇಂಥ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂಬುದು ಪ್ರವಾಸೋದ್ಯಮ ಇಲಾಖೆಯ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಹೋಂಸ್ಟೇಗಳ ಬಗ್ಗೆ ಖುದ್ಧು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಪೊಲೀಸರಿಗೆ ಮನವಿ ಸಲ್ಲಿಸಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಆಯಾ ತಾಲೂಕು ವ್ಯಾಪ್ತಿಯಲ್ಲಿನ ಹೋಂಸ್ಟೇಗಳ ಮೇಲೆ ನಿಗಾ ಇರಿಸಿದ್ದು, ತಪಾಸಣೆ ಆರಂಭಿಸಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅನೇಕ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಪ್ರವಾಸಿಗರ ಸುರಕ್ಷತೆ. ಗುಣಮಟ್ಟದ ಸೇವೆ. ಕಾನೂನುಬದ್ಧ ನಿರ್ವಹಣೆ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಅಧಿನಿಯಮ-2015 ರನ್ವಯ ಕಡ್ಡಾಯವಾಗಿ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೋಂದಣಿ ಪತ್ರವನ್ನು ಪಡೆಯದೇ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇ ಮಾಲೀಕರು ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಅಧಿಕೃತವಾಗಿ ನೋಂದಣಿ ಪತ್ರವನ್ನು ವಡೆದ ನಂತರ ಹೊಂಸ್ಟೇಯನ್ನು ನಡೆಸಬೇಕು ಎಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಪ್ರವಾಸಿಗರ ಭದ್ರತಾ ದೃಷ್ಟಿಯಿಂದ ಹಾಗೂ ಗುಣಮಟ್ಟದ ಸೇವೆ. ಕಾನೂನುಬದ್ಧ ನಿರ್ವಹಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳ ಮೇಲೆ ಇಲಾಖೆ ನಿಗಾ ವಹಿಸಲಿದೆ. ಹೋಂಸ್ಟೇ ಮಾಲೀಕರು ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಅಧಿಕೃತವಾಗಿ ನೋಂದಣಿ ಪತ್ರವನ್ನು ವಡೆದ ನಂತರ ಹೊಂಸ್ಟೇಯನ್ನು ನಡೆಸಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ.
ಪ್ರೀತಿ, ಉಪನಿರ್ದೇಶಕಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ