sunstrock 
ಬೆಂಗಳೂರು ಗ್ರಾಮಾಂತರ

ನೀರಿನ ಅಂಶ ಕಡಿಮೆಯಾದರೆ ಸನ್‌ಸ್ಟ್ರೋಕ್

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಿಸಿಲಿನ ತಾಪಮಾನ ತೀವ್ರತರವಾಗಿದ್ದು ರಾಜ್ಯದ ಕೆಲವಡೆ ಸನ್‌ಸ್ಟ್ರೋಕ್ ಸುದ್ದಿ ಹರಿದಾಡುತ್ತಿರುವುದರಿಂದ ಜಿಲ್ಲೆಯಲ್ಲಿಯೂ ಈ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಕೆಲವು ದಿನಗಳಿಂದ ಜಿಲ್ಲೆಯ ಹಲವೆಡೆ ಮಳೆಯಾಗಿರುವುದರಿಂದ ಸಾಮಾನ್ಯವಾಗಿ ಉಷ್ಣಾಂಶ ತಗ್ಗಿದ್ದರೂ ಮಧ್ಯಾಹ್ನದ ವೇಳೆ ತೀವ್ರ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ 36 ಡಿಗ್ರಿ ಸೆಲ್ಪಿಯಸ್‌ನಿಂದ 38 ರವರೆಗೆ ಹೆಚ್ಚುತ್ತಿರುವುದು ಸನ್‌ಸ್ಟೋಕ್ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳು ಕಳೆಯುವವರೆಗೆ ಸಾರ್ವಜನಿಕರು ಸನ್‌ಸ್ಟ್ರೋಕ್‌ನ ಅಪಾಯದಿಂದ ರಕ್ಷಣೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಲಕ್ಕಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ಹೆಚ್ಚು ನೀರು ಕುಡಿಯಬೇಕು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಇದರಿಂದ ಸನ್‌ಸ್ಟ್ರೋಕ್‌ನ ಆತಂಕದಿಂದ ದೂರ ಇರಬಹುದು ಎಂಬುದು ಅರೋಗ್ಯ ಇಲಾಖೆಯ ಪ್ರಮುಖ ಟಿಪ್ಸ್ ಆಗಿದೆ.
ಆತಂಕಗೊಳ್ಳದೆ ವೈದ್ಯರನ್ನು ಭೇಟಿ ಮಾಡಿ:
ಬಿಸಿ ಗಾಳಿ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದಲ್ಲಿ ಸೂರ್ಯಘಾತ ಉಂಟಾಗುವ (ಸನ್‌ಸ್ಟ್ರೋಕ್ ) ಸಾಧ್ಯತೆ ಅಧಿಕವಾಗಿರುತ್ತದೆ. ಮೂರ್ಚೆ ಹೋಗುವುದು, ಸ್ನಾಯು ಸೆಳೆತ, ರೋಗಗ್ರಸ್ತವಾಗುವಿಕೆ, ತಲೆನೋವು ಹೆಚ್ಚಾಗಿ ಬೆವರುವುದು, ಬಲಹೀನತೆ, ತಲೆ ತಿರುಗುವಿಕೆ, ಗೊಂದಲಮಯ ಈ ರೀತಿಯಲ್ಲಿ ವರ್ತಿಸುವುದು. ತ್ವರಿತ ಉಸಿರಾಟ, ಹೃದಯ ಬಡಿತ, ವಾಕರಿಕೆ, ವಾಂತಿ, ಎದ್ದೇಳಲು ಕಷ್ಟಪಡುವುದು, ದೇಹದ ಉಷ್ಣತೆ ಏರುವುದು ಮತ್ತಿತರ ಲಕ್ಷಣಗಳು ಕಾಣಿಸಿಕೊಂಡು ನಂತರದಲ್ಲಿ ಸನ್‌ಸ್ಟ್ರೋಕ್ ಆಗುವ ಅಪಾಯವಿರುತ್ತದೆ. ಇದರಲ್ಲಿ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಇಂಥ ಸಂದರ್ಭದಲ್ಲಿ ಆತಂಕಗೊಳ್ಳದೆ ಅಂಬುಲೆನ್ಸ್ ಸಹಾಯ ಪಡೆದು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ಮಾಡುವುದು ಒಳಿತು ಎಂದು ಜಿಲ್ಲಾ ಅರೋಗ್ಯ ಇಲಾಖೆ ತಿಳಿಸಿದೆ.
ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಿರಿ:
ಬಾಯಾರಿಕೆ ಇಲ್ಲದಿದ್ದರೂ ಆಗಾಗ ಹೆಚ್ಚು ನೀರು ಕುಡಿಯಬೇಕು. ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ. ಪ್ರಯಾಣ ಮಾಡುವ ಸಂದರ್ಭದಲ್ಲಿ ಅಗತ್ಯವಾಗಿ ನೀರನ್ನು ತೆಗೆದುಕೊಂಡು ಹೋಗಬೇಕು, ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ಪಾನೀಯಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ. ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಕಲ್ಲಂಗಡಿ, ಕರ್ಬೂಜ, ಕಿತ್ತಲೆ, ದಾಕ್ಷಿ ಅನಾನಸ್ ಬಳಸುವುದು ಸೂಕ್ತ ಅದರಲ್ಲೂ ಎಳನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದು ಜಿಲ್ಲಾ ಅರೋಗ್ಯ ಇಲಾಖೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಆದಷ್ಟು ತೆಳುವಾದ ಸಡಿಲವಾದ ಹತ್ತಿಯ ಬಟ್ಟೆ ಧರಿಸಬೇಕು, ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕವಾದ ಕೆಲಸಗಳನ್ನು ಮಾಡಬಾರದು. ಹೆಚ್ಚು ಸಕ್ಕರೆಯುತ್ತ ಪಾನೀಯಗಳನ್ನು ಕುಡಿಯಬಾರದು. ಹೊರಾಂಗಣದಲ್ಲಿ ಕೆಲಸ ಮಾಡುವಾಗ ಆಗಾಗ್ಗೆ ವಿಶ್ರಾಂತಿ ಪಡೆಯುವುದರಿಂದ ಸೂರ್ಯಘಾತ ದಿಂದ ರಕ್ಷಿಸಿ ಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅಧಿಕಾರಿಗಳ ಸಲಹೆಯಾಗಿದೆ.
ತೀವ್ರತರ ಬಿಸಿಲಿನೊಂದಿಗೆ ಬಿಸಿ ಗಾಳಿ ಬೀಸುತ್ತಿರುವುದು ಮನುಷ್ಯನ ಅರೋಗ್ಯದ ಮೇಲೆ ತೀವ್ರತರವಾದ ಪರಿಣಾಮ ಬೀರಲಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು,ಸೂರ್ಯಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಣ್ಣಗಿನ ಸ್ಥಳದಲ್ಲಿ ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. ಕುಡಿಯಲು ಆಗಾಗ್ಗೆ ನೀನು ಕೊಡಬೇಕು, ವ್ಯಕ್ತಿ ಚೇತರಿಸಿಕೊಂಡ ನಂತರ ನೀರಿನಂಶ ಹೆಚ್ಚಾಗಿ ಇರುವ ಪದಾರ್ಥಗಳನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಾಗೂ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಸಂಪರ್ಕಿಸಬೇಕು.
ಡಾ. ಲಕ್ಕ ಕೃಷ್ಣಾರೆಡಿ, ಜಿಲ್ಲಾ ಆರೋಗ್ಯಾಧಿಕಾರಿ