ವಿಜಯಪುರ ಬಸ್​ ನಿಲ್ದಾಣದಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು. 
ಬೆಂಗಳೂರು ಗ್ರಾಮಾಂತರ

ಹೆಚ್ಚುವರಿ ಬಸ್​ಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ

* ವಿಜಯಪುರ ನಿಲ್ದಾಣದಲ್ಲಿ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ!

ವಿಜಯಪುರ : ಪಟ್ಟಣದಿಂದ ವಿವಿಧ ಭಾಗಗಳಿಗೆ ಸಂಚರಿಸುವ ಶಾಲಾ&ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಮರ್ಪಕ ಬಸ್​ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಿಜಯಪುರ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಸ್​ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣ ಸೇರಿ ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಕೋಲಾರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬೆಂಗಳೂರು, ದೇವನಹಳ್ಳಿ, ಯಲಹಂಕ ಹಾಗೂ ದೊಡ್ಡಬಳ್ಳಾಪುರ ಮಾರ್ಗವಾಗಿ ತೆರಳುವ ವಿದ್ಯಾರ್ಥಿಗಳಿಗೆ ಪ್ರತಿದಿನ ಬಸ್​ಗಳ ಅಭಾವ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬೆಳಗ್ಗೆ ಶಾಲಾ&ಕಾಲೇಜುಗಳಿಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್​ಗಳು ಬರುವುದಿಲ್ಲ. ಬರುವ ಕೆಲವೇ ಬಸ್​ಗಳಲ್ಲಿ ನಿಲ್ಲಲು ಜಾಗವಿಲ್ಲದಷ್ಟು ಪ್ರಯಾಣಿಕರು ಕಿಕ್ಕಿರಿದು ತುಂಬಿರುತ್ತಾರೆ.

ಬಸ್​ ಹತ್ತುವ ರಭಸದಲ್ಲಿ ಹಲವು ವಿದ್ಯಾರ್ಥಿಗಳು ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಸ್​ಪಾಸ್​ ಮಾಡಿಸಿಕೊಂಡರೂ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ ತರಗತಿಗಳಿಗೆ ತಡವಾಗಿ ತಲುಪುವಂತಾಗಿದೆ. ಹೆಚ್ಚುವರಿ ಬಸ್​ಗಳಿಗೆ ಮನವಿ ಮಾಡಿದರೆ "ಕಲೆಕ್ಷನ್​ ಆಗುವುದಿಲ್ಲ'ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಧಿಕಾರಿಗಳು ಕೂಡಲೇ ಸಮರ್ಪಕ ಬಸ್​ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಿಂದಾಗಿ ಬಸ್​ ನಿಲ್ದಾಣದ ಸುತ್ತಮುತ್ತ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಡಿಪೋ ಕಾಮಗಾರಿ ಪೂರ್ಣಗೊಳಿಸಿ: ಟೌನ್​ ಬಿಜೆಪಿ ಅಧ್ಯಕ್ಷ ವೆಂಕಟೇಶ್​ ಪ್ರಭು ಮಾತನಾಡಿ, ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ವಿಜಯಪುರದಲ್ಲಿ ಬಸ್​ ಡಿಪೋ ನಿಮಾರ್ಣಕ್ಕೆ ಸರ್ಕಾರಿ ಜಾಗ ಮಂಜೂರಾಗಿತ್ತು. ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಆ ಜಾಗಕ್ಕೆ ಕಾಂಪೌಂಡ್​ ಗೋಡೆ ನಿರ್ಮಿಸಿ ವರ್ಷಗಳೇ ಕಳೆದರೂ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಅವರು ತಕ್ಷಣವೇ ನನೆಗುದಿಗೆ ಬಿದ್ದಿರುವ ಬಸ್​ ಡಿಪೋ ನಿಮಾರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸ್​ ಇನ್​ಸ್ಪೆಕ್ಟರ್​ ಮಧ್ಯಸ್ಥಿಕೆ&ತಾತ್ಕಾಲಿಕ ಶಮನ : ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಜಯಪುರ ಠಾಣೆ ಇನ್​ಸ್ಪೆಕ್ಟರ್​ ಲಕ್ಷಿ$್ಮನಾರಾಯಣ್​, ಕೆಎಸ್​ಆಸ್​ಟಿಸಿ ಚಿಕ್ಕಬಳ್ಳಾಪುರ ಘಟಕದ ವ್ಯವಸ್ಥಾಪಕರೊಂದಿಗೆ (ಡಿಎಂ) ದೂರವಾಣಿ ಮೂಲಕ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬೆಳಗ್ಗೆ 7ರಿಂದ 9 ಗಂಟೆ ಹಾಗೂ ಸಂಜೆ 4ರಿಂದ 6 ಗಂಟೆಗೆ ಹೆಚ್ಚುವರಿ 2 ಬಸ್​ಗಳನ್ನು ಕಡ್ಡಾಯವಾಗಿ ಕಾರ್ಯಾಚರಣೆಗೆ ಇಳಿಸಲು ಮನವಿ ಮಾಡಿದರು. ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಭರವಸೆ ದೊರೆತ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಹೆಚ್ಚುವರಿ ಬಸ್​ಗಳನ್ನು ಬಿಡದಿದ್ದರೇ ಮುಂದಿನ ದಿನಗಳಲ್ಲಿ ಎಲ್ಲ ಬಸ್​ಗಳನ್ನು ತಡೆದು ಮತ್ತೆ ಹೋರಾಟ ರೂಪಿಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.