struggle 
ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಮತ್ತೊಂದು ಹೋರಾಟದ ಕಿಚ್ಚು

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿತ್ತು. ಸತತ 5 ವರ್ಷಗಳ ನಿರಂತರ ಧರಣಿ, ಹೋರಾಟದ ಲವಾಗಿ ಸರ್ಕಾರ ಅನ್ನದಾನದ ಮುಂದೆ ಮಂಡಿಯೂರಿತ್ತು. ಇದೀಗ ಇದೇ ಹಾದಿಯಲ್ಲಿ ಸಾಗಿರುವ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ಜಿಲ್ಲೆಯಲ್ಲಿ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ವೇದಿಕೆ ಸೃಷ್ಟಿಸುವ ಲಕ್ಷಣ ಗೋಚರಿಸುತ್ತಿದೆ.
ಕೃಷಿ ಭೂಮಿ ಮೇಲೆಯೇ ಕಣ್ಣು?
ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರೀಕರಣ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಈ ಬಗ್ಗೆ ಜಿಲ್ಲೆಯ ಸಾರ್ವಜನಿಕರಾಗಲಿ, ರೈತರಿಗಾಗಲಿ ತಕರಾರಿಲ್ಲ. ಆದರೆ ಕೈಗಾರಿಕೆಗಳಿಗಾಗಿ ಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ಮುಂದಾಗಿರುವುದು ಎಷ್ಟು ಸರಿ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಕೈಗಾರೀಕರಣದಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ಜಿಲ್ಲೆಯಲ್ಲಿಯೂ ಕೈಗಾರಿಕಾ ಕ್ರಾಂತಿಯಾಗುತ್ತದೆ ಎಂಬುದು ಸತ್ಯವಾದರೂ, ಇದರಿಂದ ಭವಿಷ್ಯದಲ್ಲಿ ಕೃಷಿಭೂಮಿ ಕಣ್ಮರೆಯಾಗಿ ರೈತಾಪಿ ಜನರು ಒಕ್ಕಲುತನದಿಂದಲೇ ದೂರವಾಗುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂಬುದೂ ಅಷ್ಟೇ ಸತ್ಯವಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾದರೂ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳಲ್ಲೂ ಮುಂಚೂಣಿಯಲ್ಲಿದೆ, ವಿವಿಧ ಬಗೆಯ ಹಣ್ಣು ತರಕಾರಿಗಳನ್ನು ಯೆಥೇಚ್ಛವಾಗಿ ಬೆಳೆಯಾಗುತ್ತಿದೆ. ಕೃಷಿ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಇದರಿಂದಲೇ ನೆಮ್ಮದಿಯ ಜೀವನ ನಡೆಸುತ್ತಿವೆ. ಏನತ್ಮಧ್ಯೆ ಕೃಷಿ ಭೂಮಿ ಸ್ವಾಧೀನದ ಗುಮ್ಮ ರೈತ ಕುಟುಂಬದ ನೆಮ್ಮದಿಯನ್ನು ಕಸಿದಿದೆ.
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಸುತ್ತಮುತ್ತ ಫಲವತ್ತಾದ 2,100 ಎಕರೆ ಕೃಷಿ ಭೂಮಿ ಸ್ವಾಧೀನದ ವಿರುದ್ಧ ಸ್ಥಳೀಯ ರೈತರು ಆರಂಭಿಸಿರುವ ಧರಣಿ ಸತ್ಯಾಗ್ರಹ 4 ನೇ ದಿನಕ್ಕೆ ಕಾಲಿಟ್ಟಿದೆ. ಸಣ್ಣದಾಗಿ ಆರಂಭವಾಗಿರುವ ಈ ಹೋರಾಟದ ಕಿಚ್ಚು ಬೃಹತ್ ಚಳುವಳಿಯಾಗಿ ರೂಪುಗೊಳ್ಳುವ ಲಕ್ಷಣ ಗೋಚರಿಸುತ್ತಿದೆ. ಈಗಾಗಲೇ ಬೆಂಗಳೂರಿನ ಕಸ ತುಂಬಲು ತಾಲೂಕನ್ನು ಬಳಸಿಕೊಂಡು ರೈತರ ಕೆಂಗಣ್ಣಿಗೆ ಗುರಿಯಾಗಿರುವ ಸರ್ಕಾರ ಇದೀಗ ಕೈಗಾರೀಕರಣದ ನೆಪದಲ್ಲಿ ರೈತರ ತಾಳ್ಮೆ ಪರೀಕ್ಷೆಗೆ ಹೊರಟಿದೆ. ದೇವನಹಳ್ಳಿಯ 5 ವರ್ಷದ ಹೋರಾಟ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದ್ದು, ಇದೇ ನೆರಳಲ್ಲಿ ದೊಡ್ಡಬಳ್ಳಾಪುರ ರೈತರು ಹೆಜ್ಜೆ ಇಟ್ಟಿದ್ದಾರೆ. ಅದೇ ಉತ್ಸಾಹ, ಹುಮ್ಮಸ್ಸಿನಲ್ಲಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ, ಈ ಮೂಲಕ ಜಿಲ್ಲೆಯಲ್ಲಿ ಮತ್ತೊಂದು ಹೋರಾಟದ ಕಿಚ್ಚು ಹೊತ್ತಿಕೊಂಡಿದೆ.
13 ಹಳ್ಳಿಗಳ 1198 ದಿನಗಳ ಹೋರಾಟ:
ದೇವನಹಳ್ಳಿ ತಾಲೂಕಿನ 1777 ಎಕರೆಯಷ್ಟು ಜಮೀನು ಸ್ವಾಧೀನಪಡಿಸಿಕೊಂಡು ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಈ ಭಾಗದ ಲವತ್ತಾದ ಕೃಷಿ ಭೂಮಿ ನೀಡಲು ನಿರಾಕರಿಸಿದ ಸುಮಾರು 13 ಹಳ್ಳಿಗಳ ರೈತರ ಸರ್ಕಾರದ ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಸಣ್ಣದಾಗಿ ಆರಂಭವಾದ ಭೂಸ್ವಾಧೀನ ವಿರೋಧಿ ಹೋರಾಟ ದಿನಗಳದಂತೆ ದೊಡ್ಡಮಟ್ಟಕ್ಕೆ ಕಿಚ್ಚು ಹೊತ್ತಿಸಿತು. ಹಲವು ಪ್ರತಿಭಟನೆ, ಧರಣಿಗಳು ನಡೆದವು, ಮತದಾನ ಬಹಿಷ್ಕಾರ, ದೇವನಹಳ್ಳಿ ಬಂದ್, ದೇವನಹಳ್ಳಿ ಚಲೋದಂಥ ಪ್ರತಿಭಟನೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಆಗೆಲ್ಲ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿ ಹಲವರು ರಾಜಿ ಸಂಧಾನದ ಮೂಲಕ ಪ್ರತಿಭಟನೆ ಶಮನಗೊಳಿಸುವ ಪ್ರಯತ್ನ ಮಾಡಿದ್ದರು. ಹಲವು ಸಂಧಾನ ಸಭೆಗಳು ವಿಲವಾಗಿದ್ದವು. ಹೋರಾಟ ಮುಂದುವರೆದಿತ್ತು. ಅಂತಿಮವಾಗಿ 2025 ರ ಜು.15ರಂದು ಸರ್ಕಾರ ರೈತ ಪರ ನಿರ್ಧಾರ ಪ್ರಕಟಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿತ್ತು.
ದೊಡ್ಡಬೆಳವಂಗಲ ರೈತರ ಹೋರಾಟ ನಮ್ಮ ಚನ್ನರಾಯಪಟ್ಟಣ ರೈತರ ಹೋರಾಟದಂತೆ ದೀರ್ಘವಾಗಿ ಎಳೆಯದಂತಾಗಲಿ, ಸರ್ಕಾರ ತಕ್ಷಣ ಸ್ಪಂದಿಸಿ ರೈತರ ಒತ್ತಾಯಕ್ಕೆ ಸಮ್ಮತಿ ನೀಡಬೇಕು. ರೈತರ ವಿರೋಧದ ನಡುವೆ ಭೂಸ್ವಾಧೀನ ಆಸೆ ಕೈಬಿಡಬೇಕು. ರೈತರನ್ನು ಬೀದಿಯಲ್ಲಿ ಕುಳ್ಳರಿಸಿ ಪ್ರತಿಭಟಿಸುವಂತ ಪರಿಸ್ಥಿತಿಗೆ ಎಳೆತರಬಾರದು. ಜಿಲ್ಲೆಯಲ್ಲಿ ಕೃಷಿ ಭೂಮಿಗಳ ಭೂಸ್ವಾಧೀನ ಕೈಬಿಟ್ಟು ರೈತರು ನೆಮ್ಮದಿಯಿಂದ ಇರುವಂತ ಸನ್ನಿವೇಶ ಕಲ್ಪಿಸಿಕೊಡಬೇಕು.
ಕಾರಹಳ್ಳಿ ಶ್ರೀನಿವಾಸ್, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ
ದೊಡ್ಡಬೆಳವಂಗಳ ಹೋಬಳಿ ವ್ಯಾಪ್ತಿಯಲ್ಲಿ ಸರ್ಕಾರ ಉದ್ದೇಶಿಸಿರುವ ಭೂಸ್ವಾಧೀನ ವಿರೋಧಿಸಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದು, 4ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೆ ಯಾವುದೇ ಅಧಿಕಾರಿ ಇತ್ತ ಸುಳಿದಿಲ್ಲ ನಮ್ಮ ಅಹವಾಲು ಕೇಳಲು ಮುಂದೆ ಬಂದಿಲ್ಲ. ನಮ್ಮ ಹೋರಾಟಕ್ಕೆ ಸಿಐಟಿಯು ಸೇರಿ ವಿವಿಧ ಸಂಘಟನೆಗಳು ಕೈಜೋಡಿಸಿದ್ದು, ಸರ್ಕಾರದ ಎಚ್ಚರಿಕೆ ರವಾನಿಸಲಾಗಿದೆ. ಜಿಲ್ಲಾಧಿಕಾರಿ ಸೇರಿ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಭೂಸ್ವಾಧೀನ ಕೈಬಿಡುವ ಭರವಸೆ ನೀಡಬೇಕು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗುತ್ತಿದ್ದೇವೆ.
ರಾಮಕೃಷ್ಣಪ್ಪ, ದೊಡ್ಡಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ