channarayapattana buswadina virodi horata samiti
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಕೃಷಿ ಭೂಮಿ ರಕ್ಷಣೆ ಹೋರಾಟಕ್ಕೆ ಅಂತಿಮವಾಗಿ ತಾಂತ್ರಿಕ ಜಯ ಸಿಕ್ಕ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಸಕೋಟೆ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿನ ರೈತ ಸಂಘಟನೆಗಳಿಗೆ ಹೆಚ್ಚಿನ ಬಲ ಬಂದಂತಾಗಿದೆ.
ರೈತರ ಪಾಲಿಗೆ ಇದೊಂದು ಐತಿಹಾಸಿಕ ಗೆಲುವು ಎನಿಸಿಕೊಂಡಿದ್ದರೆ, ಗ್ರಾಮಾಂತರ ಜಿಲ್ಲೆಯ ಹಲವು ಕಡೆಗಳಲ್ಲಿ ಭೂಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರಕ್ಕೆ ಈ ಕ್ರಮ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಕೈಗಾರೀಕರಣ, ಟೌನ್‌ಶೀಪ್, ಏರ್‌ಪೋರ್ಟ್ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಾಂತರ ಜಿಲ್ಲೆಯ ಕೃಷಿ ಭೂಮಿ ಮೇಲೆ ಕಣ್ಣು ಹಾಕಿರುವ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ರೈತರ ಒಗ್ಗಟ್ಟಿನ ನ್ಯಾಯಯುತ ಹೋರಾಟಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದ್ದು, ಜಿಲ್ಲೆಯ ಇನ್ನಿತರ ಕಡೆಗಳಲ್ಲಿನ ರೈತ ಸಂಘಟನೆಗಳು ’ರೈತರ ಭೂಮಿ, ರೈತರ ಹಕ್ಕು’ ೋಷವಾಕ್ಯದೊಡನೆ ಸರ್ಕಾರ ವಿರುದ್ಧ ಸಮರಕ್ಕೆ ಸಜ್ಜಾಗಿವೆ.
ಒಗ್ಗಟ್ಟಿನ ಮಂತ್ರ ಲ ನೀಡಿದೆ:
1341 ದಿನಗಳ ನಿರಂತರ ಹೋರಾಟದಲ್ಲಿ ಪಾಲ್ಗೊಂಡ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಸಮಿತಿ ಸದಸ್ಯರ ಒಗ್ಗಟ್ಟಿನ ಮಂತ್ರ ಲ ನೀಡಿದೆ ಎಂದೇ ವಿಶ್ಲೇಷಣೆ ಕೇಳಿಬರುತ್ತಿದ್ದು ಜಿಲ್ಲೆಯ ಇತರೆ ಕಡೆಗಳಲ್ಲೂ ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದೆ. ನಗರೀಕರಣ, ಕೈಗಾರೀಕರಣ ಮತ್ತಿತರ ನೆಪದಲ್ಲಿ ಲವತ್ತಾದ ಕೃಷಿ ಭೂಮಿಯನ್ನು ಕಬ್ಜ ಮಾಡಿಕೊಳ್ಳಲು ಹವಣಿಸುತ್ತಿರುವ ಸರ್ಕಾರಗಳ ಕ್ರಮದ ವಿರುದ್ಧ ರೈತರು ಅಕ್ಷರಶಃ ದಂಗೆ ಏಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟಗಾರರ ಬಿಗಿಪಟ್ಟಿಗೆ ಸರ್ಕಾರ ಮಣಿದ ನಿದರ್ಶನವನ್ನು ಮುಂದಿಟ್ಟುಕೊಂಡು ಜಿಲ್ಲೆಯ ಇತರ ತಾಲೂಕುಗಳ ರೈತಪರ ಹೋರಾಟಗಾರರು, ವಿವಿಧ ಸಂಘಟನೆಗಳು ಒಗ್ಗಟ್ಟಿನಿಂದ ಸರ್ಕಾರದ ವಿರುದ್ಧ ಮುಗಿಬೀಳಲು ತಾಲೀಮು ಆರಂಭಿಸಿವೆ.
ಹೊಸಕೋಟೆ ಟೌನ್‌ಶೀಪ್‌ಗೆ ತೀವ್ರ ವಿರೋಧ:
ಬೆಂಗಳೂರು ನಗರದ ಹೆಬ್ಬಾಗಿಲಿನಂತಿರುವ ಹೊಸಕೋಟೆ ತಾಲೂಕಿನಲ್ಲಿ ನಂದಗುಡಿ ಹೋಬಳಿ ಭಾಗದಲ್ಲಿ ನೂರಾರು ಎಕರೆ ಲವತ್ತಾದ ಕೃಷಿ ಭೂಮಿಯನ್ನು ಟೌನ್‌ಶೀಪ್ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವ ಕ್ರಮದ ವಿರುದ್ಧ ಈಗಾಗಲೇ ಹಲವು ರೈತ ಸಂಘಟನೆಗಳು ತಿರುಗಿಬಿದ್ದಿವೆ, ಯಾವುದೇ ಕಾರಣಕ್ಕೂ ಬಲವಂತದ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿವೆ. ಚನ್ನರಾಯಪಟ್ಟಣ ಹೋರಾಟದ ಗೆಲುವು ಸ್ಥಳೀಯ ಸಂಘಟನೆಗಳಿಗೆ ಟಾನಿಕ್ ನೀಡಿದಂತಾಗಿದ್ದು ದೊಡ್ಡಮಟ್ಟದಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ.
ಕೆಲವು ತಿಂಗಳಿಂದ ಕೇಳಿಬರುತ್ತಿರುವ ಹೊಸ ವಿಮಾನ ನಿಲ್ದಾಣ ನಿರ್ಮಾಣದ ಸುದ್ದಿಗೆ ಸಾಕಷ್ಟು ರೆಕ್ಕೆಪುಕ್ಕ ಬಂದಿದ್ದು ನೆಲಮಂಗಲ ವ್ಯಾಪ್ತಿಯ ಹಲವು ರೈತಪರ ಹೋರಾಟಗಾರರು ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾಗಿದ್ದಾರೆ. ಏರ್‌ಪೋರ್ಟ್ ನಿರ್ಮಾಣಕ್ಕೆ ಜಾಗ ಗುರುತಿಸುವ ಕಾರ್ಯ ಆರಂಭವಾಗಿದೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಏರ್‌ಪೋರ್ಟ್ ನಿರ್ಮಾಣಕ್ಕೆ ಗುರುತಿಸುತ್ತಿರುವ ಜಾಗ ಲವತ್ತಾದ ಕೃಷಿಭೂಮಿಯಾಗಿದೆ ಎಂಬುದು ರೈತರ ವಾದವಾಗಿದ್ದು ಯಾವುದೇ ಕಾರಣಕ್ಕೂ ಭೂಮಿ ಕೊಡಲು ಸಿದ್ದವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೈಗಾರೀಕರಣ, ನಗರೀಕರಣ ನೆಪದಲ್ಲಿ ಭೂಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಸಘಟಕಗಳ ನಿರ್ಮಾಣಕ್ಕೆ ಹೆಚ್ಚು ಅಸಕ್ತಿ ತೋರಿಸುತ್ತಿರುವುದು ತಾಲೂಕಿನ ರೈತ ಸಂಘಟನೆಗಳನ್ನು ಕೆರಳಿಸಿದೆ. ಇತ್ತೀಚಿಗಷ್ಟೇ ದೊಡ್ಡಬೆಳವಂಗಳ ಹೋಬಳಿ ವ್ಯಾಪ್ತಿಯ ರೈತರು ಬೃಹತ್ ಕಾಲ್ನಡಿಗೆ ಜಾಥಾ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದರು. ತಾಲೂಕು ವ್ಯಾಪ್ತಿಯಲ್ಲಿ ಎಲ್ಲಿಯೂ ಒಂದಿಂಚು ಭೂಮಿ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿರುವ ರೈತ ಸಂಘಟನೆಗಳಿಗೆ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದ ಗೆಲುವು ಮಾರ್ಗದರ್ಶನವಾಗಿದೆ.
ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ರೈತರಿಂದ ಯಾವುದೇ ವಿರೋಧವಿಲ್ಲ ಆದರೆ ಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗುವುದು ವೈಜ್ಞಾನಿಕ ಕ್ರಮವಲ್ಲ. ಬಲವಂತದ ಭೂಸ್ವಾಧೀನ ಕ್ರಮಕ್ಕೆ ನಮ್ಮೆಲ್ಲರ ವಿರೋಧವಿದೆ. ಅಭಿವೃದ್ಧಿ ಹೆಸರಲ್ಲಿ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಬಾರದು. ಎಲ್ಲಿಯಾದರೂ ಬಲವಂತ ಭೂಸ್ವಾಧೀನಕ್ಕೆ ಮುಂದಾದರೆ ಅಲ್ಲಿನ ರೈತಪರ ಹೋರಾಟಗಾರರ ಬೆಂಬಲಕ್ಕೆ ನಾವು ಸದಾ ಸಿದ್ದರಿರುತ್ತೇವೆ.
ಕಾರಹಳ್ಳಿ ಶ್ರೀನಿವಾಸ್, ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಸಮಿತಿ ಮುಖಂಡ