ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಆತಂಕದಲ್ಲಿಯೇ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.
20 ರಿಂದ 25ರಷ್ಟು ಶ್ವಾನಗಳು ಗುಂಪುಗೂಡಿಕೊಂಡು ಸಾರ್ವಜನಿಕರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಿದ್ದು, ಶಾಲೆಗೆ ತೆರಳುವ ಮಕ್ಕಳು, ಹಿರಿಯ ನಾಗರಿಕರು ಜೀವಭೀತಿ ಎದುರಿಸುವಂತಾಗಿದೆ. ನಗರದಲ್ಲಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಅಭಿಯಾನ ನನೆಗುದಿಗೆ ಬಿದ್ದಿದ್ದು, ವಿವಿಧ ಬಡಾವಣೆಗಳಲ್ಲಿ ನಾಯಿಮರಿಗಳು ಹೆಚ್ಚೆಚ್ಚು ಕಂಡುಬರುತ್ತಿವೆ.
ಹೊಸಕೋಟೆ ನಗರದಲ್ಲಿ ಕಸದ ಬ್ಲ್ಯಾಕ್‌ಸ್ಪಾಟ್‌ಗಳು ಹೆಚ್ಚುತ್ತಿದ್ದು, ಬೀದಿನಾಯಿಗಳ ಆವಾವಸ್ಥಾನವಾಗಿ ಬಳಕೆಯಾಗುತ್ತಿದೆ. ನಗರದಲ್ಲಿನ ಹಲವು ಮಾಂಸ ಮಾರಾಟದ ಅಂಗಡಿಯವರು ಪ್ರಾಣಿಜನ್ಯ ತ್ಯಾಜ್ಯವನ್ನು ತಂದು ರಸ್ತೆ ಬದಿಗಳಲ್ಲಿ, ರಾಜಕಾಲುವೆ ಬದಿಗಳಲ್ಲಿ ಸುರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಲವು ಮಾಂಸಹಾರಿ ಹೋಟೆಲ್‌ನವರು ಇದೆ ದಾರಿ ಹಿಡಿದಿದ್ದು, ಬೀದಿ ನಾಯಿಗಳು ರಸ್ತೆ ಬದಿಗಳಲ್ಲಿ ಗುಂಪುಗೂಡುತ್ತಿವೆ. ಒಬ್ಬಂಟಿಯಾಗಿ ಸಂಚರಿಸುವವರ ಮೇಲೆ ಮುಗಿಬೀಳುತ್ತಿವೆ. ದ್ವಿಚಕ್ರವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಇದರಿಂದ ಗಲಿಬಿಲಿಗೊಳ್ಳುವ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಇಷ್ಟಾದರೂ ಬೀದಿನಾಯಿಗಳನ್ನು ನಿಯಂತ್ರಿಸುವ ಬಗ್ಗೆ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ಮುಂದುವರೆಸಿವೆ.
ಬೀದಿ ನಾಯಿಗಳ ಸಂತಾನವನ್ನು ನಿಯಂತ್ರಿಸುವ ಜತೆಗೆ ರೇಬಿಸ್ ಲಸಿಕೆ ಮೂಲಕ ಮನುಷ್ಯರ ರಕ್ಷಣೆಗೆ ನಗರ ಸಭೆ ಯೋಜನೆ ರೂಪಿಸಿದೆ. ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಿ ರೇಬಿಸ್ ಲಸಿಕೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ವಾಸ್ತವವಾಗಿ ಇದು ಸತ್ಯಕ್ಕೆ ದೂರವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ದಿನೆ ದಿನೇ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಲೇ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಮನುಷ್ಯರಿಗೆ ರೇಬಿಸ್ ಸೋಂಕು ತಗಲುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬೀದಿನಾಯಿಗಳನ್ನು ನಿಯಂತ್ರಿಸಲು ಇರುವ ಏಕೈಕ ಮಾರ್ಗ ಸಂತಾನಶಕ್ತಿಹರಣ ಶಸಚಿಕಿತ್ಸೆಯಾಗಿದ್ದು, ಹೆಣ್ಣು ಹಾಗೂ ಗಂಡು ಎರಡೂ ವರ್ಗದ ನಾಯಿಗಳಿಗೆ ಶಸಚಿಕಿತ್ಸೆ ಮಾಡಬೇಕು. ಬೀದಿನಾಯಿಗಳನ್ನು ಹಿಡಿದು ತಂದು ಅವುಗಳಿಗೆ ಸಂತಾನಶಕ್ತಿಹರಣ ಶಸ ಚಿಕಿತ್ಸೆ ನಡೆಸಬೇಕು ಜತೆಗೆ ರೇಬಿಸ್ ಲಸಿಕೆ ಹಾಕಬೇಕು. ರಸ್ತೆ ಬದಿ ಕಸ ಸಂಗ್ರಹವಾಗದಂತೆ ನಿಗಾವಹಿಸಬೇಕು, ಮಾಂಸ ಮಾರಾಟದ ಅಂಗಡಿಗಳು ಹಾಗೂ ಹೋಟೆಲ್‌ಗಳ ಮಾಲೀಕರ ವಿರುದ್ಧ ಕ್ರಮ ವಹಿಸಬೇಕು.
ಸಂತೋಷ್‌ಕುಮಾರ್, ಹೊಸಕೋಟೆ ನಗರ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನಾಲ್ಕೂ ತಾಲೂಕುಗಳಲ್ಲಿ ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಶಕ್ತಿಹರಣ ಶಸಚಿಕಿತ್ಸೆ ನಡೆಸುವುದು ಜತೆಗೆ ಕಡ್ಡಾಯವಾಗಿ ರೇಬಿಸ್ ಲಸಿಕೆ ಹಾಕುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿಯೇ ಚಿಕಿತ್ಸಾ ಕೇಂದ್ರಗಳಲ್ಲೇ ಆರೈಕೆ ತಾಣಗಳನ್ನು ರೂಪಿಸಿ ನಾಯಿಗಳ ರಕ್ಷಣೆ ಹಾಗೂ ಪೋಷಣೆ ಮಾಡಲಾಗುತ್ತದೆ. ನಂತರದಲ್ಲಿ ತಾಣಗಳಿಂದ ಬಿಡುಗಡೆ ಮಾಡಲಾಗುತ್ತದೆ.
ಶಿವಕುಮಾರ್, ಜಿಪಂ ಉಪ ಕಾರ್ಯದರ್ಶಿ ಬೆಂ.ಗ್ರಾಮಾಂತರ