sslc exam 
ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವೆಬ್‌ಕಾಸ್ಟ್, ಕ್ಯಾಮರಾ ಕಣ್ಗಾವಲಿನ ನಡುವೆ ಮಾ.18ರಿಂದ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಗುರುವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆ ಮೂಲಕ ಎಲ್ಲ ವಿಷಯಗಳ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ. ಏ.24ರಂದು ಲಿತಾಂಶ ನೀಡುವ ಗುರಿಯೊಂದಿಗೆ ಏ.8ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 13639 ವಿದ್ಯಾರ್ಥಿಗಳ ಪೈಕಿ 13519 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 120 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಖಾಸಗಿ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳೇ ಭಾಗಶಃ ಗೈರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ದೇವನಹಳ್ಳಿಯಲ್ಲಿ 46, ದೊಡ್ಡಬಳ್ಳಾಪುರ 28, ಹೊಸಕೋಟೆ 24 ಹಾಗೂ ನೆಲಮಂಗದಲ್ಲಿ 22 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಡಿಬಾರ್, ಅಕ್ರಮ ಚಟುವಟಿಕೆ ಇಲ್ಲ:
ಪರೀಕ್ಷೆ ನಡೆಯುವ ಸಂದರ್ಭದಲ್ಲಿಯೇ ತೃತೀಯ ಭಾಷೆಯನ್ನು ಗ್ರೇಡ್ ಆಗಿ ಪರಿಗಣಿಸಲಾಗುತ್ತಿದೆ. ಉತ್ತೀರ್ಣ/ಅನುತ್ತೀರ್ಣ ಎಂಬ ವ್ಯತ್ಯಾಸವಿರುವುದಿಲ್ಲ ಎಂಬ ೋಷಣೆಯು ಈ ಬಾರಿಯ ಪರೀಕ್ಷೆಯ ವಿಶೇಷತೆಗಳಲ್ಲಿ ಒಂದಾಗಿತ್ತು. ಇನ್ನು ಈ ಹಿಂದೆ ಪರೀಕ್ಷಾ ಅಕ್ರಮದಿಂದ ಸಾಕಷ್ಟು ವಿದ್ಯಾರ್ಥಿಗಳು ಡಿಬಾರ್ ಆಗುತ್ತಿದ್ದರು. ಆದರೆ, ಕಳೆದ ವರ್ಷದಿಂದ ಜಾರಿಗೊಳಿಸಿರುವ ವೆಬ್‌ಕಾಸ್ಟಿಂಗ್ ವ್ಯವಸ್ಥೆಯಿಂದ ಪರೀಕ್ಷಾ ಪ್ರಕ್ರಿಯೆಗಳಲ್ಲಿಯೂ ಪಾರದರ್ಶಕತೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿರುವ ಮತ್ತು ಅಕ್ರಮ ಚಟುವಟಿಕೆಗಳು ನಡೆದಿರುವ ವರದಿಗಳಾಗಿಲ್ಲ.
ಏ.9ರಿಂದ ಮೌಲ್ಯಮಾಪನ:
ತೃತೀಯ ಭಾಷೆ ಹಿಂದಿ ಮತ್ತು ಸಂಸ್ಕೃತ ವಿಷಯಗಳ ಮೌಲ್ಯಮಾಪನವು ಏ.9ರಿಂದ ಆರಂಭವಾಗಲಿದೆ. ಉಳಿದ ವಿಷಯಗಳ ಮೌಲ್ಯಮಾಪನ ಏ.8ರಿಂದ ಆರಂಭವಾಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಮ್ಮ ಶಾಲೆಯಿಂದ ಮೌಲ್ಯಮಾಪನ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ ಉಪ ಮುಖ್ಯ ಮೌಲ್ಯಮಾಪಕರು ಮತ್ತು ಸಹಾಯಕ ಮೌಲ್ಯಮಾಪಕರ ನೇಮಕಾತಿ ಆದೇಶ ಪತ್ರಗಳನ್ನು ಮಂಡಳಿಯ ಶಾಲಾ ಲಾಗಿನ್‌ನಲ್ಲಿ ಪ್ರಕಟಿಸಲಾಗಿದ್ದು, ಡೌನ್‌ಲೋಡ್ ಮಾಡಿಕೊಳ್ಳುವಂತೆ ಅವಕಾಶ ಕಲ್ಪಿಸಲಾಗಿದೆ.
ವೆಬ್‌ಕಾಸ್ಟಿಕ್ ಸ್ಟಿಕ್ಟ್:
ಈ ಬಾರಿ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು, ಎಲ್ಲ ಬಗೆಯ ಮೂಲಸೌಕರ್ಯಗಳೊಂದಿಗೆ ಅನುಕೂಲಕರ ವಾತಾವರಣ ನಿರ್ಮಾಣಕ್ಕೆ ಬೇಕಾದ ಎಲ್ಲ ಸಿದ್ದತೆ ನಡೆಸಲಾಗಿತ್ತು. ದೇವನಹಳ್ಳಿಯ ಜಿಲ್ಲಾಡಳಿತಭವನದ ಡಿಡಿಪಿಐ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಸಿಸಿ ಕ್ಯಾಮರಾ ದೃಶ್ಯಾವಳಿ ವೀಕ್ಷಣೆಗೆ ಕೇಂದ್ರ ಸ್ಥಾಪಿಸಲಾಗಿತ್ತು. ಇದಕ್ಕಾಗಿಯೇ 12 ಸಿಬ್ಬಂದಿ ನಿಯೋಜಿಸಲಾಗಿತ್ತು.
52 ಸೆಂಟರ್‌ಗಳಲ್ಲಿ ಪರೀಕ್ಷೆ:
ಮಾ.18 ಬುಧವಾರದಿಂದ ಏ.2 ಗುರುವಾರದವರೆಗೆ ಬೆಳಗ್ಗೆ 10.15 ಗಂಟೆಯಿಂದ ಪರೀಕ್ಷೆ ನಡೆದಿತ್ತು. ದೇವನಹಳ್ಳಿ ತಾಲೂಕಿನಲ್ಲಿ 13, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 14, ಹೊಸಕೋಟೆ 12, ನೆಲಮಂಗಲ13 ಸೇರಿ 52 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆ- ಕ್ಕೆ ನೋಂದಣಿ ವಿವರ ನೋಡುವುದಾದರೆ ಗಂಡು ಮಕ್ಕಳ ಸಂಖ್ಯೆ 7070, ಹೆಣ್ಣು ಮಕ್ಕಳ ಸಂಖ್ಯೆ 7244 ಸೇರಿ 14,314 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಮೊದಲ(ಪ್ರಥಮ) ಬಾರಿ ಪರೀಕ್ಷೆ ಬರೆಯುವವರ ಸಂಖ್ಯೆ 13,418, ಪುನರಾವರ್ತಿತ ಅಭ್ಯರ್ಥಿಗಳು 896 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
)
ಯಾರೂ ಅತ್ತ ಇತ್ತ ತಿರುಗಲಿಲ್ಲ:
ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಸ್ವಲ್ಪ ಅತಂಕಗೊಳ್ಳುತ್ತಾರೆ, ಪರೀಕ್ಷಾ ಕೇಂದ್ರಗಳಲ್ಲಿ ಅತ್ತ ಇತ್ತ ತಿರುಗುವುದು, ಕೈಕೈ ಹಿಸಿಕಿಕೊಳ್ಳುವುದು ಒತ್ತಡ ಅನುಭವಿಸುವ ದೃಶ್ಯಗಳು ಕಂಡುಬರುತ್ತವೆ, ಆದರೆ ಈ ಬಾರಿಯ ಪರೀಕ್ಷೆಯಲ್ಲಿ ಇಂಥ ದೃಶ್ಯಗಳು ಕಂಡುಬರಲಿಲ್ಲ. ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಪೂರ್ವಸಿದ್ದತಾ ಪರೀಕ್ಷೆಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿತ್ತು. ಆದ್ದರಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಯಾವುದೇ ಒತ್ತಡವಿಲ್ಲದೆ ಪರೀಕ್ಷೆ ಎದುರಿಸಿದರು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ, ವೆಬ್‌ಕಾಸ್ಟಿಂಗ್ ವ್ಯವಸ್ಥೆಯಿಂದ ಪರೀಕ್ಷಾ ಪ್ರಕ್ರಿಯೆಗಳಲ್ಲಿಯೂ ಪಾರದರ್ಶಕತೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿರುವ ಮತ್ತು ಅಕ್ರಮ ಚಟುವಟಿಕೆಗಳು ನಡೆದಿರುವ ವರದಿಗಳಾಗಿಲ್ಲ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದ್ದಾರೆ.
ಬೈಲಾಂಜಿನಪ್ಪ, ಡಿಡಿಪಿಐ ಬೆಂಗಳೂರು ಗ್ರಾಮಾಂತರ