ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಎಂ.ಸತ್ಯವಾರ ಬಳಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್, ಆರ್‌ಟಿಒ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಪಘಾತ ಸಂಭವಿಸಿದ ಸ್ಥಳದಲ್ಲಿ ಜಂಟಿ ಸರ್ವೆ ನಡೆಸಿದರು.
ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೆ ಪದೇ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಹೆದ್ದಾರಿಯಲ್ಲಿನ ನ್ಯೂನತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದರು. ಎಂ.ಸತ್ಯವಾರ, ಕಂಬಳಿಪುರ ಸೇರಿ ಗ್ರಾಮಸ್ಥರು ತೋರಿಸಿದ ಅಪಘಾತ ವಲಯಗಳಲ್ಲಿ ಖುದ್ಧು ಪರಿಶೀಲನೆ ನಡೆಸಿದ ವಿವಿಧ ಇಲಾಖೆ ಅಧಿಕಾರಿಗಳ ತಂಡ ವರದಿ ಸಿದ್ದಪಡಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಎಐ ಕ್ಯಾಮರಾಗಳಿಲ್ಲದಿರುವುದು ಬೆಳಕಿಗೆ:
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೆಲವೊಂದಷ್ಟು ಕಿಲೋಮೀಟರ್ ಅಂತರದಲ್ಲಿ ಎಐ ಕ್ಯಾಮರಾಗಳಿವೆ ಜತೆಗೆ ಬ್ಯಾಟರಿ ಪ್ಯಾಕಪ್ ಕ್ಯಾಮರಾಗಳಿದ್ದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ, ನೈಟ್ ವಿಷನ್ ಕ್ಯಾಮರಾಗಳೂ ಇವೆ. ಆದರೆ ಸತ್ಯವಾರ, ಕಂಬಳಿಪುರ ಭಾಗದಲ್ಲಿ ಇಂಥ ಕ್ಯಾಮರಾಗಳಿಲ್ಲದಿರುವುದು ವಾಹನ ಸವಾರರ ಅಜಾರೂಕ ಚಾಲನೆಗೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂಬ ಅಭಿಪ್ರಾಯ ಅಧಿಕಾರಿ ವಲಯದಲ್ಲಿ ಕೇಳಿಬಂತು.
ವಾಹನಗಳ ತಪಾಸಣೆಗೆ ಎಎಸ್‌ಪಿ ಸೂಚನೆ:
ರಾಷ್ಟ್ರೀಯ ಹೆದ್ದಾರಿಯಲ್ಲಿ ದೀಢಿರ್ ಕಾರ್ಯಾಚರಣೆ ನಡೆಸುವ ಮೂಲಕ ವಾಹನಗಳ ತಪಾಸಣೆ ನಡೆಸಬೇಕು, ವಾರಕ್ಕೊಮ್ಮೆ ವಿಶೇಷ ಕಾರ್ಯಾಚರಣೆ ಕಡ್ಡಾಯವಾಗಿ ನಡೆಸಬೇಕು, ವಾಹನಗಳ ವೇಗಮೀತಿ ತಪಾಸಣೆ ನಡೆಸಿ ನಿಯಮ ಮೀರಿದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವ ಕೆಲಸ ಮಾಡಬೇಕು ಎಂದು ಪೊಲೀಸರಿಗ ಸೂಚನೆ ನೀಡಲಾಯಿತು.
ರಿಪ್ಲೆಕ್ಟರ್, ಸೂಚನಾ ಲಕ ಹಾಕಿ:
ತಿರುವುಗಳು ಸೇರಿ ತ್ರಿಪಥ ರಸ್ತೆ ದ್ವಿಪಥಕ್ಕೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ರಿಪ್ಲೆಕ್ಟರ್‌ಗಳು ಹಾಗೂ ಸೂಚನಾ ಲಕ ಅಳವಡಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಎಸ್‌ಎಸ್‌ಪಿ ವೆಂಕಟೇಶ್ ಪ್ರಸನ್ನ ಮಾಹಿತಿ ನೀಡಿದರು. ಇದೇ ವೇಳೆ ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಿ ಪಟ್ಟಿ ಮಾಡಲಾಯಿತು. ಸಿಸಿ ಕ್ಯಾಮರಾಗಳನ್ನು ಆವರಿಸಿರುವ ಧೂಳನ್ನು ಸ್ವಚ್ಛಗೊಳಿಸಿ ಸಮರ್ಪವಾಗಿ ನಿರ್ವಹಣೆ ಮಾಡುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ತಾಕೀತು ಮಾಡಲಾಯಿತು.