ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಸರ್ಕಾರಿ ನೌಕರರು ದೈನಂದಿನ ಕರ್ತವ್ಯದ ಜತೆಗೆ ಕ್ರೀಡೆ, ವ್ಯಾಯಾಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಹೆಚ್ಚು ಚುರುಕಾಗುತ್ತಾರೆ ಜತೆಗೆ ಆರೋಗ್ಯ ವೃದ್ಧಿಯಾಗಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹಯೋಗದಲ್ಲಿ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಜೀವನದಲ್ಲಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಮತ್ತು ದೇಹದ ಸದೃಢತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಸಚಿವರು ಸಲಹೆ ನೀಡಿದರು.
ದೈನಂದಿನ ಜೀವನದಲ್ಲಿ ಗುಣಮಟ್ಟದ ಆಹಾರ ಸೇವನೆ ಅತಿ ಮುಖ್ಯವಾಗಿದೆ ನಾವು ಸೇವಿಸುವ ಆಹಾರದಲ್ಲಿ ಎಲ್ಲ ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಜತೆಗೆ ಕ್ರೀಡೆ, ವ್ಯಾಯಾಮ, ಯೋಗದಲ್ಲಿ ತೊಡಗಿಕೊಳ್ಳಬೇಕು ಇದರಿಂದ ದೇಹವು ಸದೃಶವಾಗುವ ಜತೆಗೆ ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂದು ಹೇಳಿದರು. ಸರ್ಕಾರಿ ನೌಕರರು ಕೆಲಸ ಕೆಲವು ಸಂದರ್ಭಗಳಲ್ಲಿ ಒತ್ತಡದಿಂದ ಕೂಡಿರಬಹುದು, ಒತ್ತಡದ ಜೀವನ ನಿವಾರಣೆಗೆ ಕ್ರಿಡಾ ಮನೋಭಾವ ಬೆಳೆಸಿಕೊಳ್ಳಬೇಕು ಇದರಿಂದ ಕೆಲಸದ ಮೇಲಿನ ಆಸಕ್ತಿ ಹೆಚ್ಚಾಗಲಿದೆ ಸಾರ್ವಜನಿಕ ವಲಯದಲ್ಲಿರುವ ಅಧಿಕಾರಿಗಳಿಗೆ ಇವು ಮುಖ್ಯವಾಗಲಿವೆ ಎಂದರು.
ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಬೇಕು. ಸರ್ಕಾರಿ ನೌಕರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು. ಇದಕ್ಕೆ ಬೇಕಾದ ಎಲ್ಲ ಪ್ರೋತ್ಸಾಹ ನೀಡಲಾಗುತ್ತದೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸಬೇಕು ಎಂದು ಸೂಚಿಸಿದರು.
ದೇವನಹಳ್ಳಿ ಟೌನ್ ಕ್ರೀಡಾಂಗಣ ಅಭಿವೃದ್ಧಿಗೆ 13.5 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ, ಒಂದು ವರ್ಷದೊಳಗೆ ಆಧುನಿಕ ಕ್ರೀಡಾಂಗಣವಾಗಿ ಅಭಿವೃದ್ಧಿ ಆಗಲಿದೆ. ಇದರಿಂದ ನಗರವಾಸಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು. ಹಾಗೇಯೇ ವಿಜಯಪುರ ರಸ್ತೆಯಲ್ಲಿ ಇರುವ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಗೆ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಸುಧಾಕರ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಅದನ್ನೂ ರಾಷ್ಟ್ರ ಮಟ್ಟದ ಕ್ರೀಡಾಂಗಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.ದೊಡ್ಡಬಳ್ಳಾಪುರ ಆದಿನಾರಾಯಣ ಹೊಸಹಳ್ಳಿ ಗ್ರಾಮದಲ್ಲಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ 25 ಕೋಟಿ ರೂ.ಗಳು ಮಂಜೂರು ಆಗಿದೆ. ಶೀಘ್ರ ಶಿಲಾನ್ಯಾಸ ಮಾಡಲಾಗುವುದು ಎಂದರು.
ಹುತಾತ್ಮರ ದಿನಾಚರಣೆ ಅಂಗವಾಗಿ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಎರಡು ನಿಮಿಷಗಳ ಕಾಲ ಮೌನಾಚರಣೆಯೊಂದಿಗೆ ಹುತಾತ್ಮರಿಗೆ ಗೌರವ ನಮನ ಸಿಲ್ಲಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ಜತೆಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸುವುದು ಹಾಗೂ ದೇಶಾದ್ಯಂತ ಹುತಾತ್ಮರಾದ ಯೋಧರ ಸ್ಮರಣಾರ್ಥ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದರು.