hanuma jayanti 
ಬೆಂಗಳೂರು ಗ್ರಾಮಾಂತರ

ಹನುಮ ಮಾಲಾಧಾರಿಗಳಿಂದ ವಿಶೇಷ ಪೂಜೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹನುಮ ಜಯಂತಿ ಅಂಗವಾಗಿ ನೆಲಮಂಗಲ ತಾಲೂಕು ನಿಜಗಲ್ ಸಿದ್ಧರಬೆಟ್ಟದಲ್ಲಿ ಮಂಗಳವಾರ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಹನುಮಮಾಲಾಧಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲಿಸಿದರು. ಬೆಟ್ಟದಲ್ಲಿನ ಸಿದ್ದಪ್ಪ ಮತ್ತು ಅಂಜನೇಯಸ್ವಾಮಿಗೆ ಸಾವಿರಾರು ಹನುಮಮಾಲಾದಾರಿಗಳು ಭಕ್ತಿ ಸಮರ್ಪಣೆ ಮಾಡುತ್ತಿದ್ದ ದೃಶ್ಯ ಗಮನ ಸೆಳೆಯಿತು.
ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ಬೆಳಕಿನಲ್ಲಿ ಕೇಸರಿಮಯವಾಗಿ ಬೆಟ್ಟ ಕಂಗೋಳಿಸುತ್ತಿತ್ತು.
ಮಾಲೆ ವಿಸರ್ಜನೆ:
ಬೆಟ್ಟಕ್ಕೆ ಮೆಟ್ಟಿಲುಗಳನ್ನು ಮಾಡಿರುವುದರಿಂದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ದೂರದೂರಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದರು. ಕೇಸರಿಬಟ್ಟೆ ಕೊರಳಲ್ಲಿ ತುಳಸಿಮಾಲೆ ಧರಿಸಿದ ಹನುಮಮಾಲಾಧಾರಿಗಳು ನಿರಾಯಾಸವಾಗಿ ಬೆಟ್ಟ ಹತ್ತಿ ಅಂಜನೇಯನಿಗೆ ಪೂಜೆ ಸಲ್ಲಿಸಿ ಮಾಲೆ ವಿಸರ್ಜನೆ ಮಾಡಿದರು. ಅಂಜನೇಯನ ಮೂರ್ತಿ ಹೊತ್ತ ಬೆಳ್ಳಿರಥ ಮತ್ತು ವಿವಿಧ ಭಾಗಗಳಿಂದ ಬಂದ ಹನುಮಮಾಲಧಾರಿಗಳು ಪೇಟೆಯಲ್ಲಿ ಸಮಾಗಮಗೊಂಡ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು. ಪೂರ್ಣಕುಂಭ ಹೊತ್ತ ಮಹಿಳೆಯರು ಹೂಚೆಲ್ಲಿ ರಥವನ್ನು ಸ್ವಾಗತಿಸಿದರು, ಆಯಾಸ ನಿವಾರಣಗೆ ಅಲ್ಲಲ್ಲಿ ನೀರು ಮಜ್ಜಿಗೆ ವಿತರಿಸಲಾಯಿತು. ಜಾತ್ರೆ ಪ್ರಯುಕ್ತ 3 ದಿನಗಳ ಕಾಲ ಬೆಟ್ಟವನ್ನು ಲೇಸರ್ ಶೋ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪೌರಾಣಿಕ ನಾಟಕ ಆಯೋಜಿಸಲಾಗಿತ್ತು ಸಾವಿರಾರು ಜನ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದರು.
ಉಚಿತ ಆರೋಗ್ಯ ತಪಾಸಣೆ:
ದಾಬಸಪೇಟೆಯ ಮೆಡಿಟೈಡ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮ ಸೇನೆ, ಬಜರಂಗ ದಳ, ವಿಶ್ವ ಹಿಂದೂ ಪರಿಷತ್, ಜಯ ಕರ್ನಾಟಕ, ಕನ್ನಡ ಪರ ಸಂಘಟನೆಗಳು, ನಿಜಗಲ್ ಸಿದ್ದರಬೆಟ್ಟ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು ಜಾತ್ರಾ ಮಹೋತ್ಸವದ ಜವಬ್ದಾರಿ ವಹಿಸಿಕೊಂಡಿದ್ದರು.
ಪೊಲೀಸರಿಂದ ಬಿಗಿ ಭದ್ರತೆ:
ಬೆಟ್ಟದಲ್ಲಿನ ಗೋರಿಯ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿತ್ತು. ಸಿಸಿ ಟಿವಿ ಕ್ಯಾಮರಾ ಮೂಲಕ ಪೊಲೀಸರು ನಿಗಾವಹಿಸಿದ್ದರು. ಡಿವೈಎಸ್‌ಪಿ, ಮೂವರು ಸರ್ಕಲ್ ಇನ್ಸ್ಪೆಕ್ಟರ್, 6 ಮಂದಿ ಪೊಲೀಸ್ ಉಪ ನಿರೀಕ್ಷಕರು, 2 ಕೆಎಸ್‌ಆರ್‌ಪಿ ಪಡೆ, 120 ಪೊಲೀಸರು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಸಿದ್ದಿ ಪಡೆದ ಸ್ಥಳ ಸಿದ್ದರಬೆಟ್ಟ:
ಸಿದ್ದರು ಸಾಧಕರು ತಪಸ್ಸು ಮಾಡಿ ಸಿದ್ದಿ ಪಡೆದ ಸ್ಥಳಕ್ಕೆ ಸಿದ್ದರಬೆಟ್ಟ ಎಂದು ಹೆಸರು ಬಂದಿದೆ, ಬೆಟ್ಟದ ಸುತ್ತಲೂ ರಮಣೀಯ ಪರಿಸರ ಎಲ್ಲರನ್ನು ಆಕರ್ಷಿಸುವ ಶಕ್ತಿ ಕೇಂದ್ರವಾಗಿದೆ, ತುಂಬಿರುವ ಕೆರೆಗಳು, ಬೆಟ್ಟಗಳ ಸಾಲು, ಹಚ್ಚಹಸಿರಿನೊಂದಿಗೆ ಕಂಗೊಳಿಸುವ ಪ್ರಕೃತಿ ಸೊಬಗು, ಬೆಟ್ಟದಲ್ಲಿನ ಕೋಟೆ ಕೊತ್ತಲುಗಳು, ಪರಿವಾರ ದೇವತೆಗಳ ಮೂರ್ತಿಗಳು, ಕಂಚಿನದೊಣೆ, ಸಿದ್ದರ ದೊಣೆ, ಆನೆದೊಣೆಗಳು, ಸ್ಮಾರಕಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.