snakes 
ಬೆಂಗಳೂರು ಗ್ರಾಮಾಂತರ

ಕಸದ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಹಾವಿನ ಮರಿಗಳು!

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಬೇಸಿಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದಂತೆ ಕೆಲವೊಂದು ಜಾತಿಯ ಹಾವುಗಳ ಸಂತಾನೋತ್ಪತ್ತಿ ಚುರುಕುಪಡೆಯುತ್ತದೆ, ಈ ಸಂತಾನೋತ್ಪತ್ತಿಗೆ ಕಸದ ಬ್ಲ್ಯಾಕ್‌ಸ್ಪಾಟ್‌ಗಳು ಆಸರೆಯಾಗುತ್ತಿವೆ. ಕಸ ತೆರವುಗೊಳಿಸಲು ಮುಂದಾಗುವ ಪೌರಕಾರ್ಮಿಕರು ಪ್ರಾಣಾಪಾಯಕ್ಕೆ ಸಿಲುಕುವಂತಾಗುತ್ತದೆ.
ಬೇಸಿಗೆ ವೇಳೆ ಮೊಟ್ಟೆಗಳನ್ನಿಡುವ ನಾಗರಹಾವು, ಕೇರೆಹಾವು ಮತ್ತಿತರ ಜಾತಿಯ ಹಾವುಗಳು ಮಳೆಗಾಲ ಅರಂಭದ ವೇಳೆ ಮೊಟ್ಟೆಗಳಿಂದ ಮರಿ ಮಾಡುತ್ತವೆ. ಏಕಕಾಲಕ್ಕೆ 10 ರಿಂದ 30ಕ್ಕೂ ಹೆಚ್ಚು ಮರಿಗಳು ಹೊರಬರುತ್ತವೆ, ಈ ಸಂತಾನೋತ್ಪತ್ತಿಗೆ ಹಾವುಗಳು 33 ಡಿಗ್ರಿ ಉಷ್ಣಾಂಶ ಹಾಗೂ ತೇವಾಂಶವಿರುವ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇವರೆಡಕ್ಕೂ ಪ್ರಶಸ್ತ ತಾಣವಾಗಿ ಕಸದ ಬ್ಲ್ಯಾಕ್‌ಸ್ಟಾಟ್‌ಗಳು ಕಂಡುಬರುತ್ತಿವೆ. ಇದರಿಂದ ಬಹುತೇಕ ಕಸದ ಬ್ಲ್ಯಾಕ್‌ಸ್ಟಾಟ್‌ಗಳಲ್ಲಿ ಹಾವಿನಮರಿಗಳು ಹೆಚ್ಚು ಕಂಡುಬರಲಿವೆ ಎಂಬುದು ಉರಗತಜ್ಞರ ಮಾಹಿತಿಯಾಗಿದೆ. ಈ ಹಿನ್ನೆಲೆಯಲ್ಲಿ ಕಸ ತೆರವುಗೊಳಿಸಲು ಮುಂದಾಗುವ ಪೌರಕಾರ್ಮಿಕರು ಪ್ರಾಣಾಪಾಯ ಎದುರಿಸುವ ಸನ್ನಿವೇಶ ನಿರ್ಮಾಣವಾಗಲಿದೆ ಎಂಬ ಆತಂಕ ಎದುರಾಗಿದೆ. ಆದ್ದರಿಂದ ಎಲ್ಲೆಂದರಲ್ಲಿ ಕಸ ಎಸೆಯಂತೆ ಸ್ಥಳೀಯ ಆಡಳಿತಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ.
ಮನೆಯಂಗಳಕ್ಕೂ ಬರಬಹುದು ಎಚ್ಚರಿಕೆ:
ರಸ್ತೆ ಬದಿ, ರಾಜಕಾಲುವೆ, ತಡೆಗೋಡೆಗಳು ಸೇರಿ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸೆದು ಹೋಗುತ್ತಾರೆ. ತಿಂಗಳುಗಟ್ಟಲೆ ಕಸದ ರಾಶಿ ಬಿದ್ದಿರುತ್ತದೆ. ಇಂಥ ಜಾಗಗಳಲ್ಲಿ ಹಾವುಗಳು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಹಾವಿನ ಮರಿಗಳು ಮುಂದೆ ಸಾರ್ವಜನಿಕ ಬಡಾವಣೆಗಳಲ್ಲಿ ಮನೆಯ ಅಂಗಳಕ್ಕೂ ಕಾಲಿಡುತ್ತವೆ ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯದೆ ಸ್ಥಳೀಯ ಆಡಳಿತಗಳ ಕಸದ ಗಾಡಿಗೇ ನೀಡಬೇಕು ಎಂಬುದು ಉರುಗ ತಜ್ಞರ ಮನವಿಯಾಗಿದೆ.
ಪೌರಕಾರ್ಮಿಕರು ಎಚ್ಚರವಹಿಸಬೇಕು:
ಬಹುತೇಕ ಕಡೆ ಪೌರಕಾರ್ಮಿಕರು ಯಾವುದೇ ಉಪಕರಣ ಬಳಸದೆ ಕಸ ತೆರವು ಮಾಡುವ ದೃಶ್ಯಗಳು ಕಂಡುಬರುತ್ತವೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಪೌರಕಾರ್ಮಿಕರು ತಪ್ಪದೆ ಕೈಗಳಿಗೆ ದಪ್ಪನೆಯ ಚರ್ಮದ ಕೈ ಚೀಲ ಹಾಗೂ ಕಾಲುಗಳಿಗೆ ಗಂಬೂಟ್ ಧರಿಸಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು ನಗರಸಭೆ ಹಾಗೂ ಪುರಸಭೆ ಅಧಿಕಾರಿಗಳು ಪೌರಕಾರ್ಮಿಕರಿಗೆ ಇದನ್ನು ಕಡ್ಡಾಯಗೊಳಿಸಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂಬುದು ವನ್ಯಜೀವಿ ಸಂರಕ್ಷಕರ ಮನವಿಯಾಗಿದೆ.
ಮರಿಹಾವುಗಳು ಡೇಂಜರ್:
ಹಾವಿನ ಮರಿಗಳಲ್ಲಿ ವಿಷಯ ಪ್ರಮಾಣ ಕಡಿಮೆ ಇದ್ದರೂ ತಕ್ಷಣ ರಿಯಾಕ್ಟ್ ಮಾಡುತ್ತವೆ. ಅವುಗಳಿಗೆ ಸ್ಪಲ್ಪ ತೊಂದರೆ ಎದುರಾಗುತ್ತಿದೆ ಎಂದು ಅರಿವಾದರೆ ತಕ್ಷಣವೇ ಕಚ್ಚುತ್ತವೆ, ವಿಷಯ ಪ್ರಮಾಣ ಕಡಿಮೆ ಇದ್ದರೂ ಕಚ್ಚುವ ರಭಸದಿಂದ ಮನುಷ್ಯನ ಸಾವಿಗೆ ಕಾರಣವಾಗುತ್ತದೆ. ದೊಡ್ಡ ಹಾವುಗಳಿಗೆ ಹೋಲಿಸಿದರೆ ಹಾವಿನ ಮರಿಗಳು ಬಹಳ ಅಪಾಯಕಾರಿಯಾಗಿರುತ್ತವೆ ಎಂದು ಉರಗತಜ್ಞ ನಾಗಭೂಷಣ್ ತಿಳಿಸಿದ್ದಾರೆ.
ಹೊಸಕೋಟೆಯಲ್ಲಿ 23 ಹಾವಿನ ಮರಿಗಳು ಪತ್ತೆ:
ಹೊಸಕೋಟೆ ತಾಲೂಕು ಕಣ್ಣೂರಹಳ್ಳಿ ರಸ್ತೆ ಮಿಲನ ಕಲ್ಯಾಣ ಮಂಟಪದ ಎದುರು ಬೀದಿಯಲ್ಲಿನ ನಿರ್ಮಾಣ ಹಂತದಲ್ಲಿರುವ ಮನೆ ಎದುರು ಸಂಗ್ರಹವಾಗಿದ್ದ ಕಸದ ಬ್ಲ್ಯಾಕ್‌ಸ್ಪಾಟ್‌ನಲ್ಲಿ 23 ಹಾವಿನ ಮರಿಗಳನ್ನು ರಕ್ಷಿಸಲಾಗಿದೆ. ಕಸ ತೆರವುಗೊಳಿಸುವ ವೇಳೆ ಹಾವಿನ ಮರಿಗಳು ಕಂಡುಬಂದಿದ್ದರಿಂದ ಸ್ಥಳೀಯರ ಉರುಗತಜ್ಞರಿಗೆ ಮಾಹಿತಿ ನೀಡಿದ್ದಾರೆ. ಉರುಗತಜ್ಞ ಅಷ್ಟೂ ಹಾವಿನ ಮರಿಗಳನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಅವುಗಳ ಆವಾಸ ಸ್ಥಾನಕ್ಕೆ ಬಿಡುಗಡೆ ಮಾಡಿದ್ದಾರೆ.
ನಾಲ್ಕೂ ತಾಲೂಕುಗಳಲ್ಲಿ ಕಸದ ಕಾಟ:
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ, ಒಂದು ಕಡೆ ಸ್ಥಳೀಯ ಆಡಳಿತಗಳು ಸರಿಯಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾದರೆ, ಕಸದ ಗಾಡಿ ಬಂದರೂ ಸಾರ್ವಜನಿಕರು ಕಸ ಹಾಕದೆ ಎಲ್ಲೆಂದರಲ್ಲಿ ಎಸೆಯುತ್ತಾರೆ ಎಂಬುದು ಸ್ಥಳೀಯ ಆಡಳಿತ ಅಧಿಕಾರಿಗಳ ಆರೋಪವಾಗಿದೆ. ಬಬ್ಬರು ಮತ್ತೊಬ್ಬರ ಮೇಲೆ ಆರೋಪ ಮಾಡುತ್ತಿರುವ ನಡುವೆ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಲೇ ಇದೆ.
ಸಾಮಾನ್ಯವಾಗಿ ನಾಗರಹಾವು, ಕೇರೆ ಹಾವು ಮತ್ತಿತರ ಕೆಲವೊಂದು ಜಾತಿ ಹಾವುಗಳು ಬೇಸಿಗೆಯಲ್ಲಿ ಮೊಟ್ಟೆಗಳನ್ನಿಟ್ಟು ಮಳೆಗಾಲದ ಆರಂಭದಲ್ಲಿ ಮರಿ ಮಾಡುವ ಪ್ರಕ್ರಿಯೆ ನಡೆಯುತ್ತದೆ, ಇದಕ್ಕೆ 3 ಡಿಗ್ರಿ ಉಷ್ಣಾಂಶ ಹಾಗೂ ತೇವಾಂಶವಿರುವ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಕಸದ ಬ್ಲ್ಯಾಕ್‌ಸ್ಟಾಟ್‌ಗಳು ಸೂಕ್ತ ಆಯ್ಕೆಯಾಗಿರುವುದರಿಂದ ಇಂಥ ಜಾಗಗಳಲ್ಲಿ ಹೆಚ್ಚು ಹಾವಿನ ಮರಿಗಳು ಕಂಡುಬರುತ್ತವೆ. ಇದು ಪೌರಕಾರ್ಮಿಕರ ಜೀವಕ್ಕೆ ಕುತ್ತುತರಲಿದೆ, ಆದ್ದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯಬಾರದು ಪೌರಕಾರ್ಮಿಕರ ಜೀವಕ್ಕೆ ಬೆಲೆ ಕೊಡಬೇಕು.
ನಾಗಭೂಷಣ್, ಉರುಗತಜ್ಞ ಹೊಸಕೋಟೆ