ಜ.23ರಂದು ಜಿಲ್ಲಾ ಮಟ್ಟದ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸುಗ್ಗಿ ಹಬ್ಬ ಸಂಕ್ರಾಂತಿ ಸಡಗರದ ಬೆನ್ನಲ್ಲೆ ಗ್ರಾಮಾಂತರ ಜಿಲ್ಲೆಯಲ್ಲಿ ಸಿರಿಧಾನ್ಯದ ಹಬ್ಬ ಆಚರಿಸಲು ಜಿಲ್ಲಾಡಳಿತ ಮುಂದಾಗಿದೆ.
ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಮತ್ತು ರೈತರು ತಯಾರಿಸುವ ಸಿರಿಧಾನ್ಯದ ಉತ್ಪನ್ನಗಳ ಮೌಲ್ಯವರ್ಧಿತ ಪದಾರ್ಥಗಳ ಕುರಿತು ಜನಸಾಮಾನ್ಯರ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಹಬ್ಬ ಆಚರಣೆಗೆ ಸಕಲ ಸಿದ್ದತೆ ಆರಂಭವಾಗಿದೆ. ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆ ವತಿಯಿಂದ 2.23ರಂದು ಬೆಳಗ್ಗೆ 9 ಗಂಟೆಗೆ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ-2026 ರ ಅಂಗವಾಗಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಫರ್ಧೆ ಏರ್ಪಡಿಸಲಾಗಿದೆ.
ಜಿಲ್ಲೆಯ ಆಸಕ್ತ ರೈತರು ಹಾಗೂ ಸಾರ್ವಜನಿಕರು ಇದರಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ. ಜ. 21 ರ ಮಧ್ಯಾಹ್ನ 3 ಗಂಟೆಯೊಳಗಾಗಿ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಿಗದಿತ ನಮೂನೆ ಅರ್ಜಿ ಪಡೆದು ಭರ್ತಿ ಮಾಡಿ ತಮ್ಮ ಭಾವಚಿತ್ರದೊಂದಿಗೆ ಮಾಹಿತಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ನಮೂನೆ ಸಲ್ಲಿಸಬಹುದು. ಇದಕ್ಕೆ ಎಲ್ಲರಿಗೂ ನೋಂದಣಿಯಾಗುವ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರು, ಜಿಲ್ಲೆಯ ಜನರಿಗೆ ಅವಕಾಶ:
ಪ್ರತಿ ಸ್ಫರ್ಧೆಗೆ ಒಂದೇ ತಿನಿಸು ಮಾಡಲು (ಸಸ್ಯಹಾರಿ ಸಿರಿಧಾನ್ಯ ತಿನಿಸುಗಳಿಗೆ ಮಾತ್ರ) ಸಿಹಿ, ಖಾರ ಮತ್ತು ಮರೆತು ಹೋದ ಖಾದ್ಯಗಳ ತಿನಿಸು ಮಾಡಲು ಅವಕಾಶವಿದ್ದು, ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಮತ್ತು ಅಧಿಕೃತ ತರಬೇತಿ, ಪದವಿ, ಶಿಕ್ಷಣ ಪಡೆದವರನ್ನು ಹೊರತುಪಡಿಸಿ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಸ್ಫರ್ಧಿಸಬಹುದಾಗಿದೆ. ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯದ ಖಾದ್ಯ ಪ್ರದರ್ಶಿಸುವುದಕ್ಕೆ ಬಳಸುವ ಸಾಮಗ್ರಿಗಳ ಮಾದರಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಒಂದು ಸಿಹಿ, ಖಾರ ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ ಮತ್ತು ಮರೆತುಹೋದ ಖಾದ್ಯಗಳ ತಿನಿಸನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಪ್ರಥಮ ಸ್ಥಾನಕ್ಕೆ ಸಿಹಿ, ಖಾರದ ತಿನಿಸು (ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ) ಅಥವಾ ಮರೆತುಹೋದ ಖಾದ್ಯದ ತಿನಿಸುಗಳಿಗೆ ತಲಾ ಸಾವಿರ ರೂ, ದ್ವಿತೀಯ ಸ್ಥಾನಕ್ಕೆ 3 ಸಾವಿರ ರೂ. ತೃತೀಯ ಸ್ಥಾನಕ್ಕೆ 2 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುತ್ತದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.
ಜ.19 ಕ್ಕೆ ಸಿರಿಧಾನ್ಯ ನಡಿಗೆ
ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ-2026 ಅಂಗವಾಗಿ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಜ.19ರಂದು ಬೆಳಗ್ಗೆ 6 ಗಂಟೆಗೆ ಸಿರಿಧಾನ್ಯ ನಡಿಗೆ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿರಿಧಾನ್ಯ ನಡಿಗೆ-ಆರೋಗ್ಯದ ಕಡೆಗೆ ಎಂಬ ಧೈಯವಾಕ್ಯದೊಂದಿಗೆ ಕೃಷಿ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಕೃಷಿ ಇಲಾಖೆ ಮನವಿ ಮಾಡಿದೆ.
ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೈತರು ಸಿರಿಧಾನ್ಯ ಬೆಳೆಯಲು ಮುಂದೆ ಬಂದಿದ್ದಾರೆ. ಮತ್ತಷ್ಟು ರೈತರಿಗೆ ಈ ಬಗ್ಗೆ ಅರಿವು ಮೂಡಿಸುವುದು ಸಿರಿಧಾನ್ಯ ಹಬ್ಬದ ಪ್ರಮುಖ ಉದ್ದೇಶವಾಗಿದೆ ಅದೇ ರೀತಿ ಸಾರ್ವಜನಿಕರಿಗೆ ಸಿರಿಧಾನ್ಯಗಳ ಮಹತ್ವ ಸಾರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿಶೇಷವಾಗಲಿದೆ.
ಬಿ.ಜಿ. ಕಲಾವತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಬೆಂ.ಗ್ರಾಮಾಂತರ