SIR meeting 
ಬೆಂಗಳೂರು ಗ್ರಾಮಾಂತರ

ಜವಾಬ್ದಾರಿಯಿಂದ ಎಸ್‌ಐಅರ್ ಕರ್ತವ್ಯ ಮಾಡಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇತ್ತೀಚಿನ ಘಟನಾವಳಿಗಳು ಗಮನಿಸಿದರೆ ಸಾಕಷ್ಟು ಆರೋಪಗಳು ಬರುವುದು ಸಹಜ, ಅಂತಹ ಆರೋಪಗಳಿಗೆ ಅಧಿಕಾರಿಗಳು ಆಸ್ಪದ ನೀಡಬೇಡಿ ಎಂದು ಸೂಚನೆ ನೀಡಿದರು. ಅಧಿಕಾರಿಗಳು ಯಾರಿಗೂ ಸಹಾಯ ಮಾಡುವುದು ಬೇಡ, ಯಾರಿಗೂ ತೊಂದರೆ ಕೊಡುವುದೂ ಬೇಡ. ಗುಂಪು ಗುಂಪಾಗಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಮಾಡುವುದು ಬೇಡ ಎಂದ ಅವರು ತಪ್ಪಿತಸ್ಥರು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು, ನಿಮ್ಮ ಜವಾಬ್ದಾರಿಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಕೆಲಸ ಮಾಡಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿ ಎಂದರು.
ಕಡ್ಡಾಯವಾಗಿ ಮನೆ ಭೇಟಿ ನೀಡಬೇಕು:
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು(ಎಸ್‌ಐಆರ್) ಜಿಲ್ಲೆಯಾದ್ಯಂತ ಆರಂಭವಾಗಿದ್ದು ಬಿಎಲ್ಒಗಳು ಕಡ್ಡಾಯವಾಗಿ ಮನೆ ಮನೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆ (ಎನ್ಯುಮರೇಶನ ಫಾರ್ಮ್) ವಿತರಿಸಿ, ಭರ್ತಿ ಮಾಡಿಸಿ ವಾಪಸ್ ಪಡೆಯಬೇಕು ಎಂದು ಜಾರ್ ಸೂಚಿಸಿದರು. ಮತದಾರ ಪಟ್ಟಿಯಲ್ಲಿ ಯಾವುದೇ ಅರ್ಹ ನಾಗರಿಕರು ಬಿಟ್ಟು ಹೋಗಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿಗಳನ್ನು ಸೇರ್ಪಡೆ ಮಾಡಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗದಿಂದ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದರು. ಮನೆಗೆ ಬರುವ ಬಿಎಲ್ಒಗಳು ಎರಡು ಗಣತಿ ನಮೂನೆಗಳನ್ನು (ಎನ್ಯುಮರೇಶನ ಫಾರ್ಮ್) ನೀಡುತ್ತಾರೆ. ಮತದಾರರು ಎರಡನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಒಂದನ್ನು ಸ್ವೀಕೃತಿಯಾಗಿ ಮತದಾರರಿಗೆ ಮರಳಿಸಿದರೆ, ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಎಲ್ಒಗಳ ಪಾತ್ರ ದೊಡ್ಡದು, ಗಣತಿ ನಮೂನೆ ಸ್ವೀಕೃತಿಯಾದ ನಂತರ ಅವುಗಳನ್ನು ಡಿಜಟಲೀಕರಣ(ಬಿಎಲ್ಒ ಆಪ್) ಮಾಡಿ ನಂತರ ಅವುಗಳನ್ನು ಸುರಕ್ಷಿತವಾಗಿ ಇಡಬೇಕಾಗಿರುವುದು ತಹಸೀಲ್ದಾರ್ ಜವಾಬ್ದಾರಿಯಾಗಿದೆ ಎಂದರು. ಮನೆ ಮನೆ ಭೇಟಿ ಪ್ರಕ್ರಿಯೆ ಮುಗಿದ ನಂತರ ಆ.5 ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಆ ಸಂದರ್ಭದಲ್ಲಿ ಬರುವಂತಹ ಹಕ್ಕು, ಆಕ್ಷೇಪಣೆ ಸರಿಪಡಿಸಲು ಸಿದ್ಧತೆ ಕೈಗೊಳ್ಳಿ ಎಂದರಲ್ಲದೆ ಅಂತಿಮ ಮತದಾರರ ಪಟ್ಟಿಯನ್ನು ಅ.7 ರಂದು ಪ್ರಕಟಿಸಲಾಗುವುದು ಎಂದರು.
ರೈತರಿಗೆ ಸೂಕ್ತ ಸಲಹೆ ನೀಡಿ:
ಜುಲೆನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಮುಂಗಾರು ಮಳೆ ಕೊರತೆ ಉಂಟಾದಲ್ಲಿ ರೈತರು ಬೆಳೆ ನಷ್ಟದಿಂದ ತಪ್ಪಿಸಲು ಈ ಸಂಧರ್ಭದಲ್ಲಿ ಯಾವ ರೀತಿ ಬೆಳೆ ಬಿತ್ತನೆ ಮಾಡಬೇಕು? ಯಾವ ಬೆಳೆ ಬೇಗ ಫಸಲು ಬರುತ್ತದೆ ಎಂಬುದರ ಬಗ್ಗೆ ರೈತರಿಗೆ ಸೂಕ್ತ ಸಲಹೆ ನೀಡಿ ಎಂದು ಕೃಷಿ ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು. ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆ ಇರಬೇಕು. ಮುಂಗಾರು ಅಭಾವದ ಈ ಸಂಧರ್ಭದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಕ್ರಮ ವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.