sir jaata 
ಬೆಂಗಳೂರು ಗ್ರಾಮಾಂತರ

ಅನರ್ಹ ಮತದಾರ ಸೇರ್ಪಡೆಯಾಗಬಾರದು

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಯಾವುದೇ ಅರ್ಹ ಮತದಾರರು ಹೊರಗುಳಿಯಬಾರದು ಹಾಗೆಯೇ ಯಾವುದೇ ಅನರ್ಹ ಮತದಾರರು ಸೇರ್ಪಡೆಯಾಗಬಾರದು ಎಂಬ ೋಷವಾಕ್ಯದೊಂದಿಗೆ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಡಾ.ವಾಸಂತಿ ಅಮರ್ ತಿಳಿಸಿದರು.
ಕೆಪಿ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಹಯೋಗದೊಂದಿಗೆ ನೆಲಮಂಗಲ ತಾಲೂಕಿನ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಮತದಾರರಿಗೆ ಸಹಾಯವಾಗಲು ಎಲ್ಲ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ, ಪುರಸಭೆಗಳಲ್ಲಿ 127 ಬಿಎಲ್‌ಒ ಸಹಾಯ ಕೇಂದ್ರ ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದುವರೆಗೂ 200ಕ್ಕೂ ಅಧಿಕ ಸ್ವೀಪ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಮನೆಗೆ ಹಂಚಲು ಕರಪತ್ರಗಳನ್ನು ವಿತರಿಸಲಾಗಿದೆ ಎಂದರು.
ಸಿಬ್ಬಂದಿಗೆ ತರಬೇತಿ ನೀಡಲಾಗಿದೆ:
ಜಿಲ್ಲೆಯ 18 ವಿಐಪಿಗಳಿಗೆ ಗಣತಿ ನಮೂನೆ ವಿತರಿಸಲಾಗಿದೆ. ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ದುರ್ಬಲ ವರ್ಗದ ಮತದಾರರು ಕೈಬಿಡದಂತೆ ಇವರಿಗೂ ಗಣತಿ ನಮೂನೆಗಳನ್ನು ಹಂಚಲು ಮತ್ತು ಭರ್ತಿ ಮಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಸಿಇಒ ವಿವರಿಸಿದರು. ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಆಪ್‌ಲೋಡ್ ಮಾಡಲು ಸಹಾಯವಾಗುವಂತೆ ಎಲ್ಲ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ, ಪುರಸಭೆಗಳಲ್ಲಿನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದ್ದು ಮತದಾರರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾನೂನು ಕ್ರಮದ ಎಚ್ಚರಿಕೆ:
ಪರಿಷ್ಕರಣೆ ಪ್ರಕ್ರಿಯೆಯ ಸಮಯದಲ್ಲಿ, ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಣೆಗಾಗಿ ಮನೆ-ಮನೆಗೆ ಭೇಟಿ ನೀಡುವುದು ಕಡ್ಡಾಯಗೊಳ್ಳಿಸಲಾಗಿದೆ. ಎಲ್ಲ ಬಿಎಲ್‌ಒ ಗ್ರಾಮದ ಒಂದು ಜಾಗದಲ್ಲಿ ಕುಳಿತು ಅಥವಾ ಒಂದು ಭಾಗದಲ್ಲಿ ಅಂದರೆ ಧಾರ್ಮಿಕ ಸ್ಥಳಗಳಲ್ಲಿ, ಸುಮುದಾಯಭವನಗಳಲ್ಲಿ ಮತದಾರರನ್ನು ಕರಸಿಕೊಂಡು ಎಸ್‌ಐಆರ್ ಪ್ರಕ್ರಿಯೆ ನಡೆಸಿದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದುಎಚ್ಚರಿಕೆ ನೀಡಿದರು.ಜಿಲ್ಲೆಯಲ್ಲಿ 2002 ರ ವೇಳೆಯಲ್ಲಿ 7,91165 ಮತದಾರರಿದ್ದರು. 2026 ಜು.3ರ ಅನ್ವಯ ಜಿಲ್ಲೆಯಲ್ಲಿ 9,12,913 ಮತದಾರರಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಶೇ 91 ಮತದಾರರ 2002 ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಶೇ.91.99, ದೇವನಹಳ್ಳಿ ಶೇ.94.82, ಹೊಸಕೋಟೆಯಲ್ಲಿ ಶೇ.92.64, ನೆಲಮಂಗಲದಲ್ಲಿ ಶೇ.88.23 ಮ್ಯಾಪಿಂಗ್ ಪೂರ್ಣಗೊಂಡಿದೆ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಸೇರಿ ಎಲ್ಲ ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ. ಒಂದೊಮ್ಮೆ ಅವರ ಲಭ್ಯತೆ ಇಲ್ಲದಿದ್ದಲ್ಲಿ ಬಾಡಿಗೆ ಮನೆಗಳ ಮಾಲೀಕರ ಮೂಲಕ ಅವರ ಮೊಬೈಲ್ ನಂಬರ್ ಪಡೆದು ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಂದು ತಿಳಿಸಿದರು.
ಮಾನವ ಸರಪಳಿ ಮೂಲಕ ಜಾಗೃತಿ:
ನೆಲಮಂಗಲ ತಾಲೂಕು ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕಂಪನಿಗಳ ನೌಕರರೊಂದಿಗೆ ಎಸ್‌ಐಆರ್ ಕುರಿತ ಜಾಗೃತಿ ಜಾಥಾ ನಡೆಯಿತು. ಸಾವಿರಾರು ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಸೋಂಪುರ ಕೈಗಾರಿಕಾ ಪ್ರದೇಶದಿಂದ ಹೊರಟ ಕಾಲ್ನಡಿಗೆ ಜಾಥಾವು ಮುಖ್ಯ ರಸ್ತೆಗಲ್ಲಿ ಸಂಚರಿಸಿತು. ದಾರಿ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಸಾಗಿದ ಬಳಿಕ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು