ಸೋಂಪುರ ಗೇಟ್​ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 50ನೇ ಸುವರ್ಣ ಮಹೋತ್ಸವದಲ್ಲಿ ಸಂಘದ ಅಧ್ಯಕ್ಷ ಕೆ.ನಂದಕುಮಾರ್​, ಉಪಾಧ್ಯಕ್ಷ ಟಿ.ಸಿ.ಸತೀಶ್​ ಕುಮಾರ್​, ನಿರ್ದೇಶಕರಾದ ಕೆ.ವಿಶ್ವನಾಥ್​ ರೆಡ್ಡಿ, ಎಸ್​.ವಿ.ಶ್ವೇತಾ ರಾಘವೇಂದ್ರ, ಆಶಾ ಕಿರಣ್​ ಬುಲೆಟ್​ ಬಾಬು ಇತರರು ಇದ್ದರು. 
ಬೆಂಗಳೂರು ಗ್ರಾಮಾಂತರ

ರೇಷ್ಮೆ ಬೆಳೆಗಾರರ ಸಂಕ್ಕೆ 5.17 ಕೋಟಿ ರೂ. ಲಾಭ

ಸರ್ಜಾಪುರ: ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು 2025&26ನೇ ಸಾಲಿನಲ್ಲಿ 5.17 ಕೋಟಿ ರೂ. ಹೆಚ್ಚು ನಿವ್ವಳ ಲಾಭ ಗಳಿಸಿದ್ದು, ಶೇ.25 ಲಾಂಭಾಂಶವನ್ನು ಎಲ್ಲ ಷೇರುದಾರರಿಗೆ ವಿತರಿಸಲಾಗುವುದು ಎಂದು ಅಧ್ಯಕ್ಷ ಕೆ.ನಂದಕುಮಾರ್​ ತಿಳಿಸಿದರು.
ಸರ್ಜಾಪುರದ ಸಮೀಪದ ಸೋಂಪುರ ಗೇಟ್​ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2025&26ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ಸಂಘದ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದರು. 1976ರಲ್ಲಿ ದಿ.ಎಸ್​.ಪಿ.ಗುರಪ್ಪ ರೆಡ್ಡಿ ಸ್ಥಾಪಿಸಿದ ಸಂಘವು 5 ದಶಕಗಳಿಂದ ಯಶಸ್ವಿ ಸೇವೆ ಪೂರೈಸುತ್ತಿದೆ. ರೈತರಿಗೆ ಅನುಕೂಲವಾಗಲೆಂದು ಸಂಘದಿಂದ 5 ಲಕ್ಷ ರೂ.ವರೆಗೆ ಕೃಷಿ ಸಾಲ, 25 ಲಕ್ಷ ರೂ.ವರೆಗೆ ಚಿನ್ನಾಭರಣದ ಮೇಲೆ ಸಾಲ, 25 ಲಕ್ಷ ರೂ.ವರೆಗೆ ಜಮೀನು ಅಡಮಾನ ಸಾಲ ನೀಡಲಾಗುತ್ತಿದೆ. ಸಂಘದ ಸುವರ್ಣ ಮಹೋತ್ಸವ ಪ್ರಯುಕ್ತ ಚಿನ್ನದ ಅಭರಣದ ಮೇಲೆ ಶೇ. 0.50 ಬಡ್ಡಿ ರಿಯಾಯಿತಿ ನೀಡಲಾಗುವುದು ಎಂದ ಅಧ್ಯಕ್ಷರು, ಸಿಬ್ಬಂದಿಯ ಪ್ರಾಮಾಣಿಕ ದುಡಿಮೆಯೇ ಸಂದ ಬೆಳವಣಿಗೆಗೆ ಕಾರಣ ಎಂದು ಈ ವೇಳೆ ಸ್ಮರಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ನಂಜಪ್ಪ ಮಾತನಾಡಿ, ರೈತರು ಹಾಗೂ ಸದಸ್ಯರ ವಿಶ್ವಾಸ, ಆಡಳಿತ ಮಂಡಳಿಯ ದೂರದೃಷ್ಟಿ ಮತ್ತು ಸಿಬ್ಬಂದಿ ಸಮರ್ಪಿತ ಸೇವೆಯಿಂದ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಸಂಘವು ಸಾಲ ವಿತರಣೆಗೆ ಸೀಮಿತವಾಗದೆ ರೈತರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗುವ ಹಲವು ಯೋಜನೆ ಜಾರಿಗೊಳಿಸಿದ್ದು, ಶಿಕ್ಷಣಕ್ಕೂ ಆದ್ಯತೆ ನೀಡುತ್ತಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಿಸಲಾಗಿದೆ. ಇನ್ನು ಮಹಾಸಭೆಗೆ 3500ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದು ವಿಶೇಷ ಎಂದರು.
ಸಂಘದ ಬೆಳವಣಿಗೆಗೆ ಶ್ರಮಿಸಿದ ಹಿರಿಯರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಸಿ.ಸತೀಶ್​ ಕುಮಾರ್​, ನಿರ್ದೇಶಕರಾದ ಟಿ.ಪಿಲ್ಲಾರೆಡ್ಡಿ, ಬಿ.ಆರ್​.ಬ್ರಹ್ಮರೇಶ್​, ಸುಬ್ಬಾರೆಡ್ಡಿ, ವೈ.ಹರೀಶ್​ ಬಾಬು, ವೆಂಕಟೇಶ್​, ಎಂ.ಪವನ್​ ಕುಮಾರ್​, ಎಸ್​.ವಿ ಶ್ವೇತಾ ರಾಘವೇಂದ್ರ, ಆಶಾ ಕಿರಣ್​ ಬುಲೆಟ್​ ಬಾಬು, ಜಿ.ಸುಧಾ, ಹಿರಿಯ ಮುಖಂಡರಾದ ಎಸ್​.ಆರ್​.ಗೋಪಾಲ್​ ರೆಡ್ಡಿ, ಕೆ.ವಿ.ಶಿವಪ್ಪ, ಆಂಜಿನಪ್ಪ, ಮುರಳಿ ಕೃಷ್ಣ, ಎಸ್​.ವಿ.ಟಿ ಮಂಜುನಾಥ್​, ಕೇಶವ್​, ಆರ್​.ಕೃಷ್ಣರೆಡ್ಡಿ ಇತರರು ಇದ್ದರು.
ಸಂಕ್ಕೆ ಗಣನೀಯ ಲಾಭ
ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ವಿಶ್ವನಾಥ್​ ರೆಡ್ಡಿ ಮಾತನಾಡಿ, ಸರ್ಜಾಪುರ ಸುತ್ತಮುತ್ತ ಗ್ರಾಮಗಳಲ್ಲಿ ಇದ್ದ 15 ಸೊಸೈಟಿಗಳು ಒಂದಾಗಿ 1976ರಲ್ಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ರೂಪುಗೊಂಡಿತು. ಅಂದಿನಿಂದ ಇಲ್ಲಿಯವರೆಗೆ ಸಂಘವು ಗಣನೀಯ ಸಾಧನೆ ಮಾಡುತ್ತಿದ್ದು, ರಾಜ್ಯದಲ್ಲಿಯೇ ಮಾದರಿ ಸಹಕಾರ ಸಂಘವಾಗಿ ಗುರುತಿಸಿಕೊಂಡಿದೆ. ಈ ಹಿಂದೆ 30 ವರ್ಷ ಸಂಘವು ನಿರಂತರವಾಗಿ ವಾರ್ಷಿಕ 5ರಿಂದ 10 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಿತ್ತು. 2015ರಲ್ಲಿ ನಾನು ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ರೈತರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಿತು. ಸಂಘವು ಕೋಟ್ಯಂತರ ರೂ. ನಿವ್ವಳ ಲಾಭಗಳಿಸುವ ಮಟ್ಟಕ್ಕೆ ಬೆಳೆದಿದೆ. ಇದಕ್ಕೆ ರೈತ ಸದಸ್ಯರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಹಾಗೂ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಬೆಂಬಲಿಸಿರುವುದೇ ಕಾರಣ ಎಂದರು.