ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾಗಿರುವ ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿಯಲ್ಲಿನ ಶಿವಗಂಗೆ ಬೆಟ್ಟ ಅಕ್ರಮ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿದೆ..! ಬೆಟ್ಟದ ಪೊಟರೆಗಳು, ಗುಹೆಗಳು ಸೇರಿ ಕಲ್ಲುಬಂಡೆಗಳ ಸಂದಿಗಳಲ್ಲಿ ಪ್ರೀತಿ-ಪ್ರೇಮದ ಹೆಸರಿನಲ್ಲಿ ಹುಡುಗ-ಹುಡುಗಿಯರ ರಾಸಲೀಲೆಗಳು ಮೇರೆ ಮೀರಿವೆ. ಗುಟ್ಖಾ, ಸಿಗರೇಟು, ಮದ್ಯದ ಬಾಟಲಿಗಳ ರಾಶಿ ಕಣ್ಣಿಗೆ ರಾಚುತ್ತಿದೆ. ಇಷ್ಟೇ ಅಲ್ಲದೆ ಬೆಟ್ಟದ ಇಕ್ಕೆಲಗಳಲ್ಲಿ ಕಂಡುಬರುತ್ತಿರುವ ಕಾಂಡೋಮ್ ಪ್ಯಾಕೇಟ್‌ಗಳು ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಸಾಕ್ಷಿ ಒದಗಿಸುತ್ತಿವೆ.
ಹೌದು..! ಕಳೆದ 6 ದಿನಗಳಿಂದ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾದ ಅದ್ವೆತ್ ಉಪಾಧ್ಯಾಯ ಎಂಬ ಯುವಕನ ಪತ್ತೆಕಾರ್ಯದಲ್ಲಿ ತೊಡಗಿರುವ ಎಸ್‌ಡಿಆರ್‌ಎ್, ಎನ್‌ಡಿಆರ್‌ಎ್, ಅರಣ್ಯ ಇಲಾಖೆ ಸಿಬ್ಬಂದಿಗೆ ಇಂಥ ದೃಶ್ಯಗಳು ಗೋಚರಿಸಿವೆ. ಅಷ್ಟೇ ಅಲ್ಲದೆ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕೋತಿರಾಜ್ ತಂಡ ಹಾಗೂ ಸ್ಥಳೀಯ ಯುವಕರ ತಂಡವು ಇಂಥ ಅಕ್ರಮ ಚಟುವಟಿಕೆಗಳ ದರ್ಶನ ಮಾಡಿವೆ ಎನ್ನಲಾಗಿದ್ದು, ಜಿಲ್ಲೆಯಲ್ಲಿನ ಪವಿತ್ರ ಧಾರ್ಮಿಕ ಕೇಂದ್ರ ಇಂಥ ಅಕ್ರಮ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿವೆ ಎಂಬುದನ್ನು ಬಯಲು ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಶಿವಗಂಗೆ ಬೆಟ್ಟ ಅದ್ವೆತ್ ನಾಪತ್ತೆ ಪ್ರಕರಣದ ಬಳಿಕ ಹೆಚ್ಚು ಸುದ್ದಿಯಾಗಿದೆ. ಕಳೆದ ಆರೇಳು ದಿನಗಳಿಂದ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ದಿನಕ್ಕೊಂದು ತಿರುವು ಪಡೆಯುತ್ತಿರುವ ಪ್ರಕರಣದಿಂದಾಗಿ ಹೆಚ್ಚು ಸದ್ದು ಮಾಡುತ್ತಿದೆ. ಜಾಲತಾಣಗಳಲ್ಲಿ ಅದ್ವೆತ್ ನಾಪತ್ತೆ ಹಾಗೂ ಹುಡುಕಾಟದ ಸುದ್ದಿ ತರಹೇವಾರಿಯಾಗಿ ಪೋಸ್ಟ್ ಅಗುತ್ತಿವೆ ಇದರ ನಡುವೆ ಶಿವಗಂಗೆ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ. ಸ್ಥಳೀಯರ ಯುವಕರು ಈ ಬಗ್ಗೆ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
1368 ಮೀಟರ್ ಎತ್ತರವಿರುವ ಶಿವಗಂಗೆ ಬೆಟ್ಟದಲ್ಲಿ ಗಂಗಾಧೇಶ್ವರ ಸ್ವಾಮಿ ದೇವಸ್ಥಾನದವರೆಗೆ ಮಾತ್ರ ಸಿಸಿ ಟಿವಿ ಕ್ಯಾಮರಾಗಳಿವೆ. ಅಲ್ಲಿಂದ ಮುಂದಕ್ಕೆ ಎಲ್ಲಿಯೂ ಕ್ಯಾಮರಾ ಕಣ್ಣುಗಳಿಲ್ಲ. ಬೆಟ್ಟದ ವೀರಸಾಗರ ಗೇಟ್, ಶಾಂತಲಾ ಡ್ರ್ಾ, ನಂದಿ ವಿಗ್ರಹ ಸೇರಿ ಮತ್ತೆಲ್ಲಿಯೂ ಸಿಸಿ ಟಿವಿ ಕ್ಯಾಮರಾಗಳಿಲ್ಲದಿರುವುದು ಇಂಥ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಕಡಿದಾದ ಬಂಡೆಗಳಿಂದ ಆವೃತ್ತವಾಗಿರುವ ಸುಂದರ ತಾಣ ಶಿವಗಂಗೆ ಇಂಥ ಪುಂಡಾಟಿಕೆಗಳಿಗೆ ಆವಾಸಸ್ಥಾನವಾಗಿ ಬಳಕೆಯಾಗುತ್ತಿರುವುದು ಮುಜರಾಜಿ ಇಲಾಖೆಗಿರುವ ಕಾಳಜಿಯನ್ನು ಪ್ರಶ್ನೆ ಮಾಡುವಂತಾಗಿದೆ.
ಶಿವಗಂಗೆ ಬೆಟ್ಟದ ವ್ಯಾಪ್ತಿಯಲ್ಲಿ ಚಿರತೆ, ಕರಡಿಯಂಥ ಕಾಡುಪ್ರಾಣಿಗಳ ಸಂಚಾರವಿದೆ, ಕಳೆದು ಒಂದುವರೆ ವರ್ಷದ ಹಿಂದೆ ಶಿವಗಂಗೆ ತಪ್ಪಲಿನ ಗ್ರಾಮದಲ್ಲಿ ಚಿರತೆ ದಾಳಿಗೆ ವೃದ್ಧೆಯೊಬ್ಬರು ಬಲಿಯಾಗಿದ್ದ ಪ್ರಕರಣ ಬೆಚ್ಚಿಬೀಳಿಸಿತ್ತು. ಇನ್ನು ನಾಯಿ, ಕುರಿ-ಮೇಕೆ, ದನಕರುಗಳ ಮೇಲೆ ಚಿರತೆ ದಾಳಿ ಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಯುವಕ-ಯುವತಿಯರು ಬೆಟ್ಟದ ಗುಪ್ತ ಸ್ಥಳಗಳಲ್ಲಿ ಕುಳಿತು ಮೋಜುಮಸ್ತಿ ಮಾಡುತ್ತಿದ್ದಾರೆ. ಇದರ ಜತೆಗೆ ಕೆಲವು ಪುಂಡರು ಮದ್ಯದ ಪಾರ್ಟಿ ಮಾಡುವುದು. ಜೋಡಿಯನ್ನು ರೇಗಿಸುವುದು, ಹಣ ಮತ್ತಿತರ ವಸ್ತುಗಳನ್ನು ಕಸಿದುಕೊಳ್ಳುವಂತ ಘಟನೆಗಳು ನಡೆಯುತ್ತವೆ. ಪ್ರಾಣಾಪಾಯದಿಂದ ಸನ್ನಿವೇಶಗಳು ನಿರ್ಮಾಣವಾದರೆ ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಎದುರಾಗಿದೆ.
ವಲಸಿಗರ ಸಂಖ್ಯೆಯೂ ದೊಡ್ಡದಿದೆ:
ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಉತ್ತರ ಭಾರತ ಸೇರಿ ಇನ್ನಿತರ ಕಡೆಗಳ ವಲಸಿಗರ ಸಂಖ್ಯೆಯೂ ದೊಡ್ಡದಿದೆ. ಇವರು ಯಾವಾಗ ಈ ಕಡೆಗೆ ಬಂದು ವಾಸ್ತವ್ಯ ಮಾಡುತ್ತಾರೆ. ಯಾವಾಗ ಜಾಗ ಖಾಲಿ ಮಾಡುತ್ತಾರೆ ಎಂಬುದೇ ತಿಳಿಯುವುದಿಲ್ಲ. ಶಿವಗಂಗೆ ಬೆಟ್ಟದಲ್ಲಿ ಇವರ ಓಡಾಟವು ಹೆಚ್ಚಿದೆ. ಇವರಲ್ಲಿ ಹಲವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದೆಲ್ಲ ದೃಷ್ಟಿಯಿಂದ ಇಡಿ ಶಿವಗಂಗೆ ಬೆಟ್ಟದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಚಾರಣಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿದೆ.
ಶಿವಗಂಗೆ ಬೆಟ್ಟದ ಸಮಗ್ರ ಅಭಿವೃದ್ಧಿ ಬಗ್ಗೆ ಈಗಾಗಲೇ ರೂಪುರೇಷೆ ಸಿದ್ದಪಡಿಸಲಾಗುತ್ತಿದ್ದು ಇದರಲ್ಲಿ ಸಿಸಿ ಟಿವಿ ಕ್ಯಾಮರಾಗಳ ಅಳವಡಿಕೆಯೂ ಸೇರಿದೆ. ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಬೆಟ್ಟದ ತುದಿವರಗೆ ಅಗತ್ಯವಿರುವಷ್ಟು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವ ಕುರಿತು ತುರ್ತು ಕ್ರಮಕೈಗೊಳ್ಳಲಾಗುವುದು. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗುವುದು.
ಡಾ.ಕೆ.ಎನ್.ಅನುರಾಧಾ, ಜಿಲ್ಲಾಧಿಕಾರಿ, ಬೆಂ.ಗ್ರಾಮಾಂತರ
ಯಾವುದೇ ಪ್ರಕರಣಗಳನ್ನು ಪತ್ತೆ ಹಚ್ಚುವಲಿ ಸಿಸಿ ಟಿವಿ ಕ್ಯಾಮರಾಗಳು ಹೆಚ್ಚು ಸಹಕಾರಿಯಾಗಿವೆ, ಜಿಲ್ಲೆಯಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಶಿವಗಂಗೆ ಬೆಟ್ಟದಲ್ಲಿ ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವುದು ಹೆಚ್ಚು ಸೂಕ್ತವಾಗಿದೆ. ಇದರಿಂದ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಬೀಳುತ್ತದೆ.
ಉಮಾರಾಣಿ, ಡಿವೈಎಸ್‌ಪಿ, ನೆಲಮಂಗಲ