ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿಗಳ ಸೇವೆ ಜಿಲ್ಲೆಯಲ್ಲಿ ಅಸ್ತವ್ಯಸ್ಥವಾಗಿದೆ. ಕೆಲವು ದಿನಗಳಿಂದ ತೀವ್ರವಾಗಿ ಕಾಣಿಸಿಕೊಂಡಿರುವ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಆದಾಯ ಹಾಗೂ ಜಾತಿ ಪ್ರಮಾಣ ಪತ್ರ, ಜಮೀನುಗಳ ಹಸ್ತುಬಸ್ತು, ನಿವಾಸ ಧೃಢೀಕರಣ, ವಂಶವೃಕ್ಷ, ಪ್ರವೇಶಾತಿ, ವಿದ್ಯಾರ್ಥಿವೇತನ, ಉದ್ಯೋಗ ಅರ್ಜಿ, ಬ್ಯಾಂಕ್ ಸಾಲ, ಪಿಂಚಣಿ, ಬೆಳೆ ಪರಿಹಾರ ಸೇರಿ ಹಲವು ಪ್ರಮಾಣ ಪತ್ರಗಳಿಗಾಗಿ ನಾಡಕಚೇರಿಗೆ ಬರುತ್ತಿರುವ ಸಾರ್ವಜನಿಕರು ಸರ್ವರ್ ಸಮಸ್ಯೆಯಿಂದಾಗಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಹೈರಾಣಾಗುತ್ತಿದ್ದಾರೆ.
ನಾಡಕಚೇರಿ ಸಿಬ್ಬಂದಿಯೂ ಸರ್ವರ್ ಸಮಸ್ಯೆಯಿಂದ ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ. ಏತನ್ಯಧ್ಯೆ ಕಾದು ಸಾಕಾದ ಸಾರ್ವಜನಿಕರ ಆಕ್ರೋಶವನ್ನು ಎದುರಿಸಬೇಕಾಗುತ್ತಿದೆ. ತಾಂತ್ರಿಕ ದೋಷದ ಬಗ್ಗೆ ತಿಳಿಸಿದರೂ ಸಾರ್ವಜನಿಕರ ಆಕ್ಷೇಪಕ್ಕೆ ಮೂಕಪ್ರೇಕ್ಷಕರಾಗುವಂತಾಗಿದೆ.
ಹಲವು ನಾಡಕಚೇರಿಗಳ ಬಳಿ ಸರ್ವರ್ ಸಮಸ್ಯೆ ಇದೆ, ಆದ್ದರಿಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸಿಬ್ಬಂದಿ ನಾಮಲಕ ಹಾಕಿ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಸಾರ್ವಜನಿಕರು ಅರ್ಜಿ ಸ್ವೀಕರಿಸಲ್ಲ ಎಂಬ ನಾಮಲಕ ಓದಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ. ನಾಡಕಚೇರಿಗಳಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತರೂ, ಸರ್ವರ್‌ಡೌನ್ ಎಂಬ ಒಂದೇ ಉತ್ತರ ಸಿಗುತ್ತಿದೆ. ಇದರಿಂದ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಉದ್ಯೋಗಾಕಾಂಕ್ಷಿಗಳು ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಪರದಾಡುವಂತಾಗಿದೆ.
ಹೆಚ್ಚುತ್ತಿರುವ ಬಳಕೆದಾರರ ಸಂಖ್ಯೆಗೆ ತಕ್ಕಂತೆ ಸರ್ವರ್ ಸಾಮರ್ಥ್ಯ ಹೆಚ್ಚಿಸದಿರುವುದು, ತಾಂತ್ರಿಕ ನಿರ್ವಹಣೆಯಲ್ಲಿ ವಿಳಂಬ ಹಾಗೂ ಬ್ಯಾಕಪ್ ವ್ಯವಸ್ಥೆಯ ಕೊರತೆಯೇ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂಬ ಮಾತು ಕೇಳಿಬರುತ್ತಿವೆ. ಸರ್ವರ್ ಸಾಮರ್ಥ್ಯವನ್ನು ತಕ್ಷಣವೇ ಹೆಚ್ಚಿಸಬೇಕು, ಅತ್ಯಾಧುನಿಕ ಡೇಟಾ ಸೆಂಟರ್ ಹಾಗೂ ಬ್ಯಾಕಪ್ ವ್ಯವಸ್ಥೆ ಕಲ್ಪಿಸಬೇಕು, ತಾಂತ್ರಿಕ ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸಬೇಕು ಮತ್ತು ಸಮಸ್ಯೆ ಪರಿಹಾರವಾಗುವವರೆಗೆ ಪರ್ಯಾಯ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಾಡಕಚೇರಿಯ ಪ್ರಮುಖ ಸೇವೆಗಳು:
ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಆದಾಯ ಮತ್ತು ಆಸ್ತಿ ಪ್ರಮಾಣ ಪತ್ರ, ಅಲ್ಪಸಂಖ್ಯಾತರ ಪ್ರಮಾಣ ಪತ್ರ, ಕೃಷಿಕ ಪ್ರಮಾಣ ಪತ್ರ,ಭೂ ಹಿಡುವಳಿ ಪ್ರಮಾಣ ಪತ್ರ, ಜೀವಂತಿಕೆ ಪ್ರಮಾಣ ಪತ್ರ, ನಿರುದ್ಯೋಗ ಪ್ರಮಾಣ ಪತ್ರ, ಏಕ ಪೋಷಕ ಪ್ರಮಾಣ ಪತ್ರ, ಕುಟುಂಬ ವೃಕ್ಷ, ವಿಧವೆ ಪ್ರಮಾಣ ಪತ್ರ, ವಯೋಮಿತಿ ಪ್ರಮಾಣ ಪತ್ರ, ಬಿಪಿಎಲ್/ಎಪಿಎಲ್ ಸಂಬಂಧಿತ ಪ್ರಮಾಣೀಕರಣ ಸೇವೆಗಳು, ಭೂ ದಾಖಲೆಗಳಿಗೆ ಸಂಬಂಧಿಸಿದ ಕೆಲವು ಸೇವೆಗಳು, ಸರ್ಕಾರದ ವಿವಿಧ ಯೋಜನೆಗಳಿಗೆ ಅಗತ್ಯವಿರುವ ಪ್ರಮಾಣ ಪತ್ರಗಳ ವಿತರಣೆ, ಸಾಮಾಜಿಕ ಭದ್ರತಾ ಪಿಂಚಣಿ, ಪಹಣಿ ಮತ್ತು ಮ್ಯೂಟೇಶನ್‌ಗೆ ಸಂಬಂಧಿಸಿದ ಸೇವೆಗಳು, ಬೆಳೆ ಪ್ರಮಾಣ ಪತ್ರ ಮತ್ತಿತರರ ಸೇವೆಗಳು.
ಸರ್ವರ್ ಸಮಸ್ಯೆ ಎಂಬ ಪದ ಕೇಳಿ ಕೇಳಿ ಸಾಕಾಗಿ ಹೋಗಿದೆ, ಪ್ರತಿನಿತ್ಯ ಇದೇ ಉತ್ತರ ಬರುತ್ತದೆ, ನಾಡಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗುತ್ತಿದೆ. ಡಿಜಿಟಲ್ ಸೇವೆಗಳನ್ನು ಚುರುಕುಗೊಳಿಸುವತ್ತ ಸರ್ಕಾರ ಗಮನ ನೀಡಬೇಕು. ಇಲ್ಲವಾದರೆ ಇಂಥ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಪರದಾಡುವಂತಾಗುತ್ತದೆ.
ನಾಗಭೂಷಣ್, ದೊಡ್ಡಬಳ್ಳಾಪುರ ನಿವಾಸಿ
ಶಾಲಾ-ಕಾಲೇಜುಗಳ ಆರಂಭ, ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಹಿನ್ನೆಲೆಯಲ್ಲಿ ಅರ್ಜಿದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಸರ್ವರ್ ಸಮಸ್ಯೆ ಉಂಟಾಗಿದೆ. ಆದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಬ್ಬಂದಿ ಕಚೇರಿ ಅವಧಿಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ಕೇವಲ ನಾಡಕಚೇರಿಗಳಿಗೆ ಸೀಮಿತವಾಗದೆ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಇತರೆ ಆನ್‌ಲೈನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು.
ಮಲ್ಲಪ್ಪ ಕೆ. ಯಾರಗೋಳ ತಹಸೀಲ್ದಾರ್.