Self-enumeration 
ಬೆಂಗಳೂರು ಗ್ರಾಮಾಂತರ

ಸ್ವಯಂ ಗಣತಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜನಗಣತಿ-2027 ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್ ಪೋರ್ಟಲ್ ಮೂಲಕ ಸ್ವಯಂ- ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ಏ.16 ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ 15 ದಿನಗಳ ಮುಂಚಿತವಾಗಿ ಅಂದರೆ ಏ.1 ರಿಂದ 15 ವರೆಗೆ ಸ್ವಯಂ ಗಣತಿ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸ್ವಯಂ ಗಣತಿ ವೆಬ್ ಪೋರ್ಟಲ್ ಬಳಸಿಕೊಂಡು ತಮ್ಮ ಕುಟುಂಬದ ಸಾಮಾನ್ಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.ಏ.1ರಿಂದ ಸ್ವಯಂ ಗಣತಿ ವೆಬ್ ಪೋರ್ಟಲ್ ಲಭ್ಯವಿದ್ದು ಮೊಬೈಲ್, ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಸಾಧನಗಳ ಮೂಲಕ ನಮೂದಿಸಬಹುದು. ಇದರಿಂದ ಸಮಯದ ಉಳಿತಾಯ ಜತೆಗೆ ನಿಖರ ಹಾಗೂ ಸಮಗ್ರ ಮಾಹಿತಿ ಸಂಗ್ರಹಿಸಲು ಸಹಕಾರಿ ಆಗಲಿದೆ.
ಮಾಹಿತಿ ಭರ್ತಿಯ ವೇಳೆ, ಕುಟುಂಬಗಳು ತಮ್ಮ ಸ್ಥಳದ ವಿವರಗಳನ್ನು (ರಾಜ್ಯ, ಜಿಲ್ಲೆ, ತಾಲ್ಲಕು, ಗ್ರಾಮ,ನಗರ ಇತ್ಯಾದಿ) ಕಡ್ಡಾಯವಾಗಿ ನಮೂದಿಸಬೇಕು. ಸ್ಥಳವನ್ನು ನಿಖರವಾಗಿ ಗುರುತಿಸಲು ಪಿನ್‌ಕೋಡ್ ಮತ್ತು ಡಿಜಿಟಲ್ಮ್ಯಾಪ್ ಮೂಲಕ ಮನೆಯ ಸ್ಥಳವನ್ನು ಗುರುತಿಸುವ ವ್ಯವಸ್ಥೆಯೂ ಇರುತ್ತದೆ ಎಂದು ತಿಳಿಸಿದ್ದಾರೆ.
ಗೌಪ್ಯತೆ ಇರುತ್ತದೆ:
ಸ್ವಯಂ-ಗಣತಿ ಪೋರ್ಟ್‌ಲ್‌ನಲ್ಲಿ ಕೇಳುವ ಪ್ರಶ್ನೆಗಳು ಮನೆಪಟ್ಟಿ ಕಾರ್ಯಾಚರಣೆ ಮೊಬೈಲ್ ಆಪ್‌ನಲ್ಲಿ ಇರುವಂತೆಯೇ ರೂಪಿಸಲ್ಪಟ್ಟಿದ್ದು, ಕೆಲವು ಮಾಹಿತಿಗಳು ಪೂರ್ವ ಭರ್ತಿಯಾಗಿರಬಹುದು. ಸಾರ್ವಜನಿಕರಿಗೆ ಸಹಾಯವಾಗುವಂತೆ ಪದೇ ಪದೇ ಕೇಳುವ ಪ್ರಶ್ನೆಗಳು ಮತ್ತು ಮಾರ್ಗಸೂಚಿಗಳನ್ನೂ ಒದಗಿಸಲಾಗುತ್ತದೆ. ಕುಟುಂಬವು ತಮ್ಮ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಅವರಿಗೆ ಒಂದು ವಿಶಿಷ್ಟ ಸ್ವಯಂ-ಗಣತಿ ಐಡಿ ನೀಡಲಾಗುತ್ತದೆ. ಈ ಐಡಿಯನ್ನು ಮತ್ತು ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಅದನ್ನು ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಈ ಐಡಿಯನ್ನು ಸಾರ್ವಜನಿಕರು ಹಂಚಿಕೊಳ್ಳಬಹುದು.
ಜನಗಣತಿ-2027 ಕ್ಕೆ ಸಂಬಂಧಿಸಿ ಸಾರ್ವಜನಿಕರು ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.