school reopen 
ಬೆಂಗಳೂರು ಗ್ರಾಮಾಂತರ

ಹಬ್ಬದ ವಾತಾವರಣದಲ್ಲಿ ಆತ್ಮೀಯ ಸ್ವಾಗತ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭದ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆ ನಾಲ್ಕೂ ತಾಲೂಕುಗಳಲ್ಲೂ ಸೋಮವಾರ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸಗಳನ್ನು ವಿತರಿಸುವ ಜತೆಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಜಿಲ್ಲೆಯ ಹಲವು ಕಡೆಗಳಲ್ಲಿ ಶಾಲಾ ಕಟ್ಟಡಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ವಿವಿಧ ಹೂಗಳಿಂದ ಅಲಂಕರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ ಎಂಬ ಬರಹದಡಿ ಶಾಲಾ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಶಾಲೆಯ ಪ್ರವೇಶದ್ವಾರದ ಕಮಾನುಗಳಿಗೆ ಬಣ್ಣ ಬಣ್ಣದ ಕಾಗದಗಳಿಂದ ಸಿಂಗರಿಸಿದ್ದ ದೃಶ್ಯ ಗಮನ ಸೆಳೆಯಿತು. ಶಿಕ್ಷಕರು, ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು, ಇನ್ನು ಕೆಲವು ಕಡೆಗಳಲ್ಲಿ ಗುಲಾಬಿ ಹೂಗಳನ್ನು ಮಕ್ಕಳಿಗೆ ನೀಡಿ ಸ್ವಾಗತ ಕೋರಲಾಯಿತು.
ಸ್ವಚ್ಛಗೊಂಡ ತರಗತಿಗಳು:
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸುಮಾರು 2 ತಿಂಗಳ ಕಾಲ ಶಾಲಾ ತರಗತಿ ಕೊಠಡಿಗಳನ್ನು ಮುಚ್ಚಿದ್ದರಿಂದ ಅವುಗಳ ಸ್ವಚ್ಛತಾ ಕಾರ್ಯವನ್ನು ಶನಿವಾರ ಹಾಗೂ ಭಾನುವಾರೇ ಪೂರ್ಣಗೊಳಿಸಲಾಯಿತು. ಮುಖ್ಯವಾಗಿ ಕೊಠಡಿಗಳಲ್ಲಿ ಕಸಕಡ್ಡಿ ತೆರವುಗೊಳಿಸಿ, ನೀರಿನ ಸಂಪ್ ಹಾಗೂ ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲಾಯಿತು. ಟ್ಯಾಂಕ್‌ನಲ್ಲಿನ ನೀರನ್ನು ಸಂಪೂರ್ಣ ಹೊರಹಾಕಿ ಹೊಸದಾಗಿ ನೀರು ತುಂಬಿಸುವ ಕೆಲಸ ಮಾಡಲಾಯಿತು. ಕೊಠಡಿಗಳಲ್ಲಿನ ಪ್ಯಾನ್, ಬಲ್ಬ್‌ಗಳ ಪರೀಕ್ಷೆ ನಡೆಸಿ ಕೆಟ್ಟುಹೋಗಿದ್ದವುಗಳನ್ನು ದುರಸ್ತಿಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಮೊದಲ ದಿನದಿಂದಲೇ ಯಾವುದೇ ಮೂಲಸೌಕರ್ಯ ಸಮಸ್ಯೆ ಎದುರಾಗದಂತೆ ಮುಂಜಾಗ್ರತ ಕ್ರಮವಹಿಸಲಾಯಿತು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಶಿಕ್ಷಕರಿಗೆ ಟ್ರೈನಿಂಗ್:
ಆಯಾ ತಾಲೂಕು ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಲವು ಶಾಲೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಬಗ್ಗೆ ತಪಾಸಣೆ ನಡೆಸಿದರು. ಇದೇ ವೇಳೆ ಶಾಲಾ ಮುಖ್ಯಶಿಕ್ಷಕರು ಹಾಗೂ ಇನ್ನಿತರ ಶಿಕ್ಷಕರೊಂದಿಗೆ ಸಭೆ ನಡೆಸಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕೆಲವೊಂದು ಹೊಸ ಪ್ರಯೋಗಗಳ ಮೂಲಕ ಈ ಬಾರಿ ಶಿಕ್ಷಣ ಗುಣಮಟ್ಟ ಉತ್ತಮಗೊಳಿಸುವ ಸಂಬಂಧ ಕೆಲವೊಂದು ಸಲಹೆ ಸೂಚನೆಗಳು ಹಾಗೂ ವಿಷಯ ವಿನಿಮಯ ಹಂಚಿಕೆ ಮಾಡಿಕೊಳ್ಳಲಾಯಿತು. ಉಳಿದಂತೆ ಬಿಸಿಯೂಟ, ಹಾಲು ಮೊಟ್ಟೆ ವಿತರಣೆ ಅಡುಗೆ ಮನೆ ನಿರ್ವಹಣೆ ಬಗ್ಗೆ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಹಬ್ಬದ ವಾತಾವರಣದೊಂದಿಗೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಚಾಲನೆ ನೀಡಲಾಗಿದೆ. ಎಂದಿನಂತೆ ಶಾಲೆ ಆರಂಭದ ದಿನ ಮಕ್ಕಳಿಗೆ ಸಿಹಿ ಹಂಚಿ ಸ್ವಾಗತಕೋರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ದಾಖಲಾತಿ ಆಂದೋಲನ ಚುರುಕುಗೊಳಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಕರಿಗೆ ಸರಣಿ ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಶಾಲಾ ಕಟ್ಟಡಗಳಿವೆ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳು ಲಭ್ಯವಿದೆ.
ಬೈಲಾಂಜಿನಪ್ಪ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ