school reopen 
ಬೆಂಗಳೂರು ಗ್ರಾಮಾಂತರ

ಶಿಕ್ಷಣ ಇಲಾಖೆ ‘ಮಿಂಚಿನ ಸಂಚಾರ’

ಶಿವರಾಜ.ಎಂ
ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಶೈಕ್ಷಣಿಕ ವರ್ಷದ ಶುಭಾರಂಭಕ್ಕೆ ಸಿದ್ದತೆ ನಡೆಸಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜತೆಗೆ ಶಾಲೆಗಳಲ್ಲಿ ಶಿಸ್ತು ಕಾಪಾಡುವ, ಶಿಕ್ಷಕರ ಜವಾಬ್ದಾರಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಸೇರಿ ಹಲವು ನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ.
ಜೂ.1ರಿಂದ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಆರಂಭವಾಗಲಿದ್ದು, ಶಾಲೆ ಅರಂಭದ ನಾಲ್ಕು ದಿನ ಮಿಂಚಿನ ಸಂಚಾರ ಎಂಬ ಪರಿಕಲ್ಪನೆಯಡಿ ಡಿಡಿಪಿಐ, ಸಿಆರ್‌ಪಿ ಹಾಗೂ ಬಿಇಒಗಳ ತಂಡ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಶಾಲೆಗಳಿಗೆ ಖುದ್ಧು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ತಯಾರಿ ಹೇಗಿದೆ? ವೇಳಾಪಟ್ಟಿ ಸಿದ್ದಪಡಿಸಲಾಗಿದೆಯೇ? ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಎಷ್ಟಿದೆ? ಶಾಲಾ ಅವರಣ ಸ್ವಚ್ಛವಾಗಿದೆಯೇ? ಕೊಠಡಿಗಳ ಸ್ಥಿತಿ ಹೇಗಿದೆ? ಶೌಚಗೃಹ, ಕುಡಿವ ನೀರು ಸೇರಿ ಮೂಲಸೌಕರ್ಯಗಳು ಹೇಗಿವೆ? ಅಕ್ಷರ ದಾಸೋಹ ಪರಿಕರಗಳು ಸುಸ್ಥಿತಿಯಲ್ಲಿವೆಯೇ? ಎಂಬುದರ ಪರಿಶೀಲನೆ ನಡೆಸಲಿದ್ದಾರೆ. ಇದಕ್ಕಾಗಿಯೇ 87 ಸಿಬ್ಬಂದಿ ತಂಡ ಕಾರ್ಯಾಚರಣೆ ಆರಂಭಿಸಿದೆ.
6 ದಿನ ಸಪ್ತಾಹ:
ಶಾಲೆ ಆರಂಭವಾದ ಬಳಿಕ 15 ದಿನ ಸಪ್ತಾಯ ಕಾರ್ಯಕ್ರಮ ರೂಪಿಸಲಾಗಿದ್ದು, ಇದ್ಕಕಾಗಿಯೇ 7 ತಂಡಗಳನ್ನು ರಚಿಸಲಾಗಿದೆ. ಶಾಲೆ ಆರಂಭವಾದ ಬಳಿಕ ಈ 15 ದಿನಗಳಲ್ಲಿ ಏನೆಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ, ನಡೆಯಬೇಕು ಎಂಬುದರ ಬಗ್ಗೆ ಶಿಕ್ಷಕರಿಗೆ ತಂಡ ಮಾರ್ಗದರ್ಶನ ಮಾಡಲಿದೆ. ಇದರ ಜತಗೆ ಈ ಬಾರಿ ದ್ವಿಭಾಷಾ ತರಗತಿಗಳು ಆರಂಭವಾಗುವ ಹಿನ್ನೆಲೆಯಲ್ಲಿ ಯಾವ್ಯಾವ ಶಾಲೆಗಳಲ್ಲಿ ಸಮರ್ಪಕವಾಗಿ ಭಾಷಾವಾರು ಶಿಕ್ಷಕರಿದ್ದಾರೆ, ಎಲ್ಲೆಲ್ಲಿ ಶಿಕ್ಷಕರ ಕೊರತೆಯಿದೆ ಎಂಬುದನ್ನು ಚುರುಕಾಗಿ ಪಟ್ಟಿ ಮಾಡಿ, ಅಗತ್ಯವಿರುವ ಕಡೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಚುರುಕುಗೊಳಿಸಲಾಗುತ್ತದೆ. ಪ್ರತಿ ತಾಲೂಕಿನಲ್ಲಿ ಹತ್ತತ್ತು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಿಕ್ಷಣ ಇಲಾಖೆ ಸಿಬ್ಬಂದಿ ತಂಡ ಪರಿಶೀಲನೆ ನಡೆಸಿ ತುರ್ತು ಕ್ರಮವಹಿಸಲಿದೆ.
ಪೂರ್ವ ಪರೀಕ್ಷೆ, ಸೇತುಬಂಧ:
ತರಗತಿಗಳು ಆರಂಭವಾದ ಬಳಿಕ 1 ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಇಲಾಖೆ ಮುಂದಾಗಿದೆ. ಇದರನ್ವಯ ಮಕ್ಕಳಿಗೆ ಪೂರ್ವ ಕಿರುಪರೀಕ್ಷೆ ನಡೆಸಲಿದೆ, ಇದರಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ತುಲನೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಎ.ಬಿ.ಸಿ ಎಂಬ ಗ್ರೇಡ್‌ಗಳಾಗಿ ವಿಂಗಡಿಸಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವತ್ತ ಗಮನ ನೀಡಲಿದ್ದಾರೆ. ಗಣಿತ, ವಿಜ್ಞಾನ ವಿಷಯಗಳಲ್ಲಿ ಮಕ್ಕಳು ಈ ಹಿಂದಿನ ವರ್ಷ ಎಷ್ಟು ಕಲಿತಿದ್ದಾರೆ ಎಂಬುದನ್ನು ಮತ್ತೊಂದು ಕಿರುಪರೀಕ್ಷೆ ಮೂಲಕ ಸಾಮರ್ಥ್ಯ ಅಳೆಯುವ ಪ್ರಯತ್ನ ನಡೆಯಲಿದೆ ಇದರನ್ವಯ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕಲಿಕಾ ಯೋಜನೆ ರೂಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇ.40 ಪಠ್ಯಪುಸ್ತಕ ದಾಸ್ತಾನು:
ಪ್ರಸಕ್ತ ಸಾಲಿನ ಪಠ್ಯಪುಸ್ತಕಗಳನ್ನು ಜೂ. 1 ರಿಂದಲೇ ವಿತರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ,. ಈಗಾಗಲೇ ಶೇ.40 ಪುಸ್ತಕಗಳು ಬಂದಿದ್ದು, ಎರಡು ವಾರದೊಳಗೆ ಎಲ್ಲ ಪಠ್ಯಪುಸ್ತಕಗಳ ವಿತರಣೆ ನಡೆಯಲಿದೆ, ಜತೆಗೆ ಈಗಾಗಲೇ ಒಂದು ಜತೆ ಸಮವಸ ದಾಸ್ತಾನು ಮಾಡಲಾಗಿದ್ದು ತರಗತಿ ಆರಂಭದ ದಿನವೇ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ, ಇದರೊದಿಗೆ ಶೂ ಹಾಗೂ ಸಾಕ್ಸ್‌ಗಳ ವಿತರಣೆಯೂ ಆಗಲಿದೆ ಎಂದು ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಸ್ಥಳೀಯ ಶಿಕ್ಷಕರಿಗೆ ಆದ್ಯತೆ:
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದ್ದು, ಇದನ್ವಯ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಅಗತ್ಯವಿರುವ ಅತಿಥಿ ಶಿಕ್ಷಕರ ನೇಮಕಕ್ಕೆ ಇಲಾಖೆ ಮುಂದಾಗಿದೆ. ಇದನ್ನು ಆಯಾ ಶಾಲೆಯ ಎಸ್‌ಡಿಎಂಸಿ ಜವಾಬ್ದಾರಿ ಹೊತ್ತಿದೆ. ಸ್ಥಳೀಯ ಶಿಕ್ಷಕರಿಗೆ ಆದ್ಯತೆ ನೀಡಲಾಗುತ್ತದೆ. ಕೊರತೆಯಾದಲ್ಲಿ ಅಕ್ಕಪಕ್ಕದ ಶಿಕ್ಷಕರಿಗೆ ಅವಕಾಶ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷದ ಪುನಾರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಜೂ.1ರಿಂದ ತರಗತಿಗಳು ಆರಂಭವಾಗಲಿದ್ದು. ತಿಂಗಳ ಕಾಲ ಸೇತುಬಂಧ ಕಾರ್ಯಕ್ರಮದಡಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ ನಡೆಯಲಿದೆ. ಮಿಂಚಿನ ಸಂಚಾರ ಕಾರ್ಯಕ್ರಮದಡಿ ಇಲಾಖೆ ಅಧಿಕಾರಿಗಳು ಎಲ್ಲ ಶಾಲೆಗಳಿಗೆ ಖುದ್ಧು ಭೇಟಿ ನೀಡಿ ಮೂಲಸೌಕರ್ಯಗಳ ಪರಿಶೀಲನೆ ಜತೆಗೆ ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.
ಬೈಲಾಂಜನಪ್ಪ, ಡಿಡಿಪಿಐ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ