ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಮಕ್ಕಳಿಗೆ ವಿದ್ಯಾಭ್ಯಾಸ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುವ ಜತೆಗೆ ಮಕ್ಕಳ ಪ್ರತಿಭೆ ಗುರುತಿಸಲು ಉತ್ತಮ ಅವಕಾಶ ಸಿಕ್ಕಂತಾಗುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ದೇವನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಶಾಲೆಗಳಲ್ಲಿ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತಮ ಕೆಲಸ ಮಾಡುತ್ತಿದೆ. ವಿದ್ಯಾಭ್ಯಾಸ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಭಾಷಣ ಸ್ಪರ್ಧೆ, ರಸಪ್ರಶ್ನೆ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಏಕಪಾತ್ರಾಭಿನಯ, ನಾಟಕ ಮುಂತಾದ ಕಲೆ, ಪ್ರತಿಭೆಯನ್ನು ಮಕ್ಕಳು ತೋರಿಸಲು ಉತ್ತಮ ವೇದಿಕೆಯಾಗಿದೆ ಎಂದರು. ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಬೇಕು. ಜಿಲ್ಲೆಗೆ, ರಾಜ್ಯಕ್ಕೆ ಒಳ್ಳೆಯ ಹೆಸರು ತಂದು ಕೊಡಬೇಕು ಎಂದು ಹೇಳಿದರು.
ಮಕ್ಕಳನ್ನು ಪೋಷಿಸಿ ಬೆಳೆಸುವುದರಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯವೋ ಹಾಗೆಯೇ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯ. ವಿದ್ಯಾಬ್ಯಾಸ ಜತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು, ಭವ್ಯ ಭಾರತ ನಿರ್ಮಾಣಕ್ಕೆ ಮಕ್ಕಳನ್ನು ಬೆಳೆಸುವುದು ಪಾಲಕರ, ಶಿಕ್ಷಕರ ಮೇಲಿದೆ ಎಂದು ಸಚಿವರು ತಿಳಿಸಿದರು.
ಮಾದರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ:
ಈಗಿನ ಸರ್ಕಾರಿ ಪ್ರೌಢಶಾಲೆಯು ಸುಮಾರು 75 ವರ್ಷದ ಹಳೆಯ ಕಟ್ಟಡವಾಗಿದೆ. ಇನ್ಫೋಸಿಸ್ ಸಂಸ್ಥೆಯು ಸಿಎಸ್‌ಆರ್ ಅನುದಾನದಡಿ 25 ಕೊಠಡಿ ನಿರ್ಮಿಸಲು ಉದ್ದೇಶಿಸಿದ್ದಾರೆ. ಸರ್ಕಾರಿ ಹಾಗೂ ಸಿಎಸ್‌ಆರ್ ಅನುದಾನದಡಿ ಸುಸಜ್ಜಿತ ಮಾದರಿ ಸರ್ಕಾರಿ ಶಾಲೆ ನಿರ್ಮಿಸಲಾಗುವುದು. ಅಧಿಕಾರಿಗಳು ಮಾದರಿ ಕಟ್ಟಡದ ರೂಪುರೇಷೆ ಸಿದ್ದಪಡಿಸಿ ವರದಿ ನೀಡಿ ಆದಷ್ಟು ಬೇಗ ಕೆಲಸ ಶುರು ಮಾಡೋಣ ಎಂದು ಸಚಿವರು ತಿಳಿಸಿದರು.