ವಿಜಯವಾಣಿ ಸುದ್ದಿಜಾಲ ದಾಬಸ್ ಪೇಟೆ
ದಾಬಸ್‌ಪೇಟೆಯಲ್ಲಿ ನಡೆಯುವ ವಾರದ ಸಂತೆ ಕಿರಿಕಿರಿ ತಾಣವಾಗಿ ರೂಪುಗೊಂಡಿದೆ. ಇಲ್ಲಿನ ವಾರದ ಸಂತೆ ಬಂತೆಂದರೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಸಾಕಷ್ಟು ಕಿರಿಕಿರಿ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ದಾಬಸ್‌ಪೇಟೆಯಲ್ಲಿ ವಾರದ ಸಂತೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಸಂತೆಗೆ ಬರುವ ಗ್ರಾಹಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಈ ಭಾಗದಲ್ಲಿ ಸಂಚಾರ ಸಿಕ್ಕು ಏರ್ಪಡುತ್ತಿದೆ. ಸಾರ್ವಜನಿಕರು ಓಡಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಾಹನ ದಟ್ಟಣೆಯಿಂದ ಇನ್ನಿತರ ವಾಹನ ಸವಾರರು ಪರದಾಡುವಂತಾಗಿದೆ. ಸಂತೆ ಬಂತೆಂದರೆ ನರಕ ದರ್ಶನದ ಅನುಭವವಾಗುತ್ತಿದೆ. ತುರ್ತು ಚಿಕಿತ್ಸೆಗೆ ರೋಗಿಗಳನ್ನು ಕರೆದೊಯ್ಯುವ ವೇಳೆ ಆಂಬುಲೆನ್ಸ್‌ಗೂ ಜಾಗವಿಲ್ಲದಂತ ಪರಿಸ್ಥಿತಿ ಏರ್ಪಡುತ್ತದೆ. ಆಂಬುಲೆನ್ಸ್ ಸೈರನ್ ಕೂಗಿಕೊಳ್ಳುತ್ತಿದ್ದರೂ ಆಂಬುಲೆನ್ಸ್ ಸಾಗಲು ಅವಕಾಶ ಮಾಡಿಕೊಡುವುದಿಲ್ಲ. ಆದ್ದರಿಂದ ವಾರದ ಸಂತೆ ವೇಳೆ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಪ್ರಾಣಾಪಾಯದ ಭೀತಿ ಎದುರಾಗುತ್ತದೆ ಎಂದು ಸ್ಥಳೀಯರು ಅಲವತ್ತುಗೊಳ್ಳುತ್ತಿದ್ದಾರೆ.
ಸಂತೆ ಮೈದಾನವಿದ್ದರೂ ಲೇಔಟ್‌ನಲ್ಲಿನ ರಸ್ತೆಗಳಲ್ಲಿಯೇ ಸಂತೆ ಸೇರುವುದರಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕಸದ ತೊಟ್ಟಿಗಳ ನಿರ್ವಹಣೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವಿಲ್ಲ. ಸಮುದಾಯ ಶೌಚಗೃಹದ ವ್ಯವಸ್ಥೆ ಇಲ್ಲ. ಶೆಡ್ ಇದ್ದರೂ ಉಪಯೋಗವಿಲ್ಲ, ಮಾಹಿತಿ ನಾಮಫಲಕ ಪ್ರಕಟಿಸಿಲ್ಲ, ಸ್ವಚ್ಛತೆ ಎಂಬುದು ಇಲ್ಲವೇ ಇಲ್ಲ. ವಿಶಾಲವಾದ ದಾರಿಗಳಿಲ್ಲ, ವಸ್ತುಗಳನ್ನು ಪ್ರತ್ಯೇಕ ಸ್ಥಳದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲ, ಮಳೆ ಬಂತೆಂದರೆ ಗುಂಡಿಗಳಲ್ಲಿ ನೀರು ತುಂಬಿ ಕೊಳಚೆ ಪ್ರದೇಶವಾಗಿ ಮಾರ್ಪಡುತ್ತದೆ. ಇಷ್ಟೆಲ್ಲ ಅವ್ಯವಸ್ಥೆ ನಡೆಯುವ ಸಂತೆಯಿಂದ ಈ ಭಾಗದ ಜನರು ಕಿರಿಕಿರಿ ಎದುರಿಸುವಂತಾಗಿದೆ.
ನಿಗದಿ ಮಾಡಿರುವ ಸುಂಕಕ್ಕಿಂತ ಹೆಚ್ಚು ಹಣ ಪಡೆಯುತ್ತಾರೆ. ಕಾರಣ ಕೇಳಿದರೆ ನಮಗೆ ನಷ್ಟವಾಗುತ್ತದೆ ಎನ್ನುತ್ತಾರೆ. ಹಣ ಕೊಡಲು ನಿರಾಕರಿಸಿದರೆ ಜಾಗಖಾಲಿ ಮಾಡು, ಇಲ್ಲಿ ವ್ಯಾಪಾರ ಮಾಡಬೇಡ ಎಂದು ಧಮ್ಕಿ ಹಾಕುತ್ತಾರೆ, ಈ ವರ್ಷ 26.7 ಲಕ್ಷ ರೂ.ಗೆ ಬಹಿರಂಗ ಹರಾಜು ನಿಂತಿದೆ. ಕಳೆದ ವರ್ಷಕ್ಕಿಂತಲೂ 10 ಲಕ್ಷ ಹೆಚ್ಚಾಗಿದೆ, ಗ್ರಾಮ ಪಂಚಾಯಿತಿ ಸುಂಕದ ಬಗ್ಗೆ ಹಲವು ನಿಬಂಧನೆಗಳನ್ನು ಹಾಕಿದೆಯಾದರೂ ಯಾವುದೂ ಜಾರಿಯಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಸಂತೆಯಲ್ಲಿ ಜೋರಾದ ಮೈಕ್‌ಗಳನ್ನು ಬಳಸುವುದರಿಂದ ಕಿರಿಕರಿಯಾಗುತ್ತದೆ, ಕಸದ ರಾಶಿಯಿಂದ ದುರ್ನಾತ ಬೀರುತ್ತಿದೆ. ಚರಂಡಿಗಳಿಗೆ ಕಸ ತುಂಬುತ್ತಾರೆ ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಮುಂದಿನ ದಿನಗಳಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡು ಸಂತೆ ಸುಸೂತ್ರವಾಗಿ ನಡೆಸಲು ವ್ಯವಸ್ಥೆ ಮಾಡಲಾಗುವುದು, ನಿಗದಿ ಮಾಡಿರುವ ಸುಂಕ ಹೊರತು ಹೆಚ್ಚು ಹಣ ವಸೂಲಿ ಮಾಡದಂತೆ ಎಚ್ಚರಿಸಲಾಗುವುದು, ಸಂತೆಯ ನಿಯಮಗಳ ಮಾಹಿತಿ ಪ್ರಕಟಿಸಲಾಗುವುದು. ಲೇಔಟ್ ಭಾಗದಲ್ಲಿ ಸಂತೆ ಸೇರದಂತೆ ಕ್ರಮವಹಿಸುತ್ತೇವೆ.
ರವಿಶಂಕರ್, ಪಿಡಿಒ ಸೋಂಪುರ ಗ್ರಾಮ ಪಂಚಾಯಿತಿ