road-problem 
ಬೆಂಗಳೂರು ಗ್ರಾಮಾಂತರ

ಗೋಕರೆ ಗ್ರಾಮದ ರಸ್ತೆ ಅವ್ಯವಸ್ಥೆ

ಶಿವರಾಜ.ಎಂ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ತಾಲೂಕು ಯಲಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಕರೆ ಗ್ರಾಮದ ಮುನೇಶ್ವರ ಸ್ವಾಮಿ ದೇವಸ್ಥಾನದಿಂದ ಟಿ.ಅಗ್ರಹಾರ ಗ್ರಾಮ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ.
200 ಮೀಟರ್ ರಸ್ತೆ ಅತಿಕ್ರಮಣ:
ಮುನೇಶ್ವರ ಸ್ವಾಮಿ ದೇವಸ್ಥಾನದಿಂದ ಟಿ ಅಗ್ರಹಾರ ಗ್ರಾಮದವರೆಗಿನ ಸುಮಾರು 2 ಕಿ.ಮೀ ಉದ್ದದ ರಸ್ತೆಯಲ್ಲಿ ಖಾಸಗಿಯವರು ಸುಮಾರು 200 ಮೀಟರ್‌ನಷ್ಟು ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಗ್ರಾಪಂ ಸಿಬ್ಬಂದಿ ರಸ್ತೆ ಅಭಿವೃದ್ಧಿಗೆ ಮೀನಮೇಷ ಎಣಿಸುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಸ್ಥಳೀಯರಿಗೆ ಕಾನೂನು ಪಾಠ ಮಾಡಿ ರಸ್ತೆ ಒತ್ತುವರಿ ತೆರವುಗೊಳಿಸಲು ಹೆದರುತ್ತಿರುವ ಗ್ರಾಪಂ ಸಿಬ್ಬಂದಿ ಇಡೀ ಗ್ರಾಮದ ಜನರ ಆಕ್ರೋಶ ಎದುರಿಸುತ್ತಿದೆ. ಆದರೂ ಇದುವರೆಗೆ ರಸ್ತೆ ಒತ್ತುವರಿ ತೆರವಿಗೆ ಮನಸ್ಸು ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಸ್ಥಳೀಯರಿಂದಲೇ ಅಭಿವೃದ್ಧಿ ಯತ್ನ:
ಗ್ರಾಮ ಪಂಚಾಯಿತಿಗೆ ಹಲವು ವರ್ಷದಿಂದ ಮೊರೆ ಹೋದರೂ ಯಾವುದೇ ಪ್ರಯೋಜವಿಲ್ಲದ ಕಾರಣ ಸ್ಥಳೀಯರೇ ರಸ್ತೆಗೆ ಮಣ್ಣು ಹಾಕಿಸಿ ತಾತ್ಕಾಲಿಕವಾಗಿ ರಸ್ತೆಯಲ್ಲಿ ಸಂಚರಿಸುವಂತೆ ಮಾಡಿಕೊಂಡಿದ್ದಾರೆ. ಮಳೆ ಇಲ್ಲವಾದ್ದರಿಂದ ಸಂಚಾರಕ್ಕೆ ತೊಂದರೆ ಇಲ್ಲವಾಗಿದೆ ಆದರೆ ಸಣ್ಣ ಮಳೆ ಬಂದರೂ ಇಡೀ ರಸ್ತೆ ಕೆಸರು ಗದ್ದೆಯಂತಾಗಿ ಜನ ಸಂಚಾರ ಬಂದ್ ಆಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಜನಸ್ಪಂದನದಿಂದ ಸೂಚನೆ:
ಕಳೆದ ತಿಂಗಳು ಮುಖ್ಯಮಂತ್ರಿಯವರ ಜನಸ್ಪಂದನ ವಿಭಾಗಕ್ಕೆ ಗ್ರಾಮಸ್ಥರು ಪತ್ರ ಬರೆದು ಪರಿಸ್ಥಿತಿ ಬಗ್ಗೆ ಅಳಲು ತೋಡಿಕೊಂಡದ್ದರು. ಇದನ್ನು ಪರಿಗಣಿಸಿದ ಮುಖ್ಯಮಂತ್ರಿಯವರ ವಿಶೇಷಾಧಿಕಾರಿಗಳು ಆದ್ಯತೆ ಮೇರೆಗೆ ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ ಆದರೂ ಇದುವರೆಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ, ಮೇ ತಿಂಗಳಲ್ಲಿ ಇದೇ ರೀತಿ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳು ಜಿಪಂ ಸಿಇಒ ಅವರಿಗೆ ಇದನ್ನು ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಿದೆ. ಇದಕ್ಕೂ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ, ಇದೇ ರೀತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೂ ಸೂಚನೆ ಹೋಗಿದೆ ಆದರೂ ಯಾವುದೇ ಪ್ರಯೋಜವಾಗಿಲ್ಲ. ಸಿಎಂ ಕಚೇರಿ ಆದೇಶಕ್ಕೂ ಯಾವುದೇ ಪ್ರತಿಕ್ರಿಯೆ ಇಲ್ಲದಿರುವುದು ಗ್ರಾಪಂ ವ್ಯವಸ್ಥೆಯನ್ನು ಅಣಕ ಮಾಡುವಂತಿದೆ.
ಗೋಕರೆ ಗ್ರಾಮದ ಈ ರಸ್ತೆಗೆ ಅದ್ಯಾವ ಗ್ರಹಣ ಹಿಡಿದಿದೆಯೋ ಗೊತ್ತಿಲ್ಲ. ಕಳೆದ ಐದಾರು ವರ್ಷದಿಂದ ಸತತವಾಗಿ ರಸ್ತೆ ಅಭಿವೃದ್ಧಿಗೆ ಕಂಡ ಕಂಡ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ ಆದರೂ ಯಾವುದೇ ಪ್ರಯೋಜವಾಗಿಲ್ಲ. ಸಿಎಂ ಕಚೇರಿ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ. ಗ್ರಾಮೀಣ ರಸ್ತೆ, ಗ್ರಾಮೀಣ ಜನರು ಎಂದರೆ ಇಷ್ಟೊಂದು ಅಸಡ್ಡೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಇಲ್ಲಿನ ಪಂಚಾಯಿತಿ ಆಡಳಿತ ಯಾವ ಮಟ್ಟಕ್ಕಿದೆ ಎಂಬುದು ಇದರಿಂದ ತಿಳಿಯುತ್ತದೆ.
ಮಂಜುನಾಥ್, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ದೇವನಹಳ್ಳಿ
ರಸ್ತೆ ಅಭಿವೃದ್ಧಿಗೊಳಿಸಿ ಗ್ರಾಮೀಣ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಲವು ವರ್ಷದಿಂದ ಗ್ರಾಪಂಗೆ ಮನವಿ ಮಾಡುತ್ತಲೇ ಬಂದಿದ್ದೇವೆ ಆದರೆ ಯಾರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಸ್ಥಳೀಯರೇ ಸೇರಿ ರಸ್ತೆಗೆ ಮಣ್ಣು ಸುರಿದು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಪ್ರಯತ್ನ ಮಾಡಿದ್ದೇವೆ. ಆದರೆ ಮಳೆ ಬಂದರೆ ರಸ್ತೆ ಸಂಪೂರ್ಣ ಹದಗೆಟ್ಟು ಜನರ ಓಡಾಟಕ್ಕೆ ಕಷ್ಟವಾಗುತ್ತದೆ.
ಶ್ರೀನಿವಾಸ್, ಗೋಕರೆ ಗ್ರಾಮಸ್ಥ