ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಮುದುಗುರ್ಕಿ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಗ್ರಾಮಸ್ಥರ ಪಾಲಿಗೆ ಸಾವಿನ ರಹದಾರಿಯಾಗಿ ಮಾರ್ಪಾಡಾಗಿದೆ.
ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ಈ ಭಾಗದಲ್ಲಿ ಅಪಘಾತಗಳು ಸಾಮಾನ್ಯವಾಗಿದ್ದು, ಈಗಾಗಲೇ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಭಾಗದಲ್ಲಿ ರಸ್ತೆ ದಾಟಲು ಹರಸಾಹಸ ನಡೆಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಜೀವಪಣಕ್ಕಿಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಯಾವುದೇ ಸೂಚನಾಲಕಗಳಿಲ್ಲದೆ, ಹೈಮಾಸ್ಟ್ ದೀಪದ ವ್ಯವಸ್ಥೆಯಿಲ್ಲದೆ ಸಾಗಿರುವ ಈ ಹೆದ್ದಾರಿ ಅಪಘಾತವಲಯವಾಗಿ ಕುಖ್ಯಾತಿ ಪಡೆದಿದೆ.
ಈ ಭಾಗದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭದ ದಿನದಿಂದಲೂ ಈಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡುವಂತೆ ಸ್ಥಳೀಯರು ಸಾಕಷ್ಟು ಹೋರಾಟ ನಡೆಸಿದ್ದರೂ ಸರ್ಕಾರ ಜನರ ಹೋರಾಟಕ್ಕೆ ದನಿಯಾಗಲಿಲ್ಲ. ಪರಿಣಾಮವಾಗಿ ಗ್ರಾಮಸ್ಥರು ಹೆದ್ದಾರಿಗೆ ಬಲಿದಾನ ನೀಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಭಿವೃದ್ಧಿಯಾದ ಬಳಿಕ ಗ್ರಾಮ ಇಬ್ಬಾಗವಾಗಿದೆ. ಹೆದ್ದಾರಿ ಎರಡು ಕಡೆ ಗ್ರಾಮ ಹಂಚಿಹೋಗಿದೆ. ಆದ್ದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಲು ಅಂಡರ್‌ಪಾಸ್ ಅನಿವಾರ್ಯವಿದೆ ಆದರೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಮನ ನೀಡುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ ಜತೆಗೆ ಈ ಭಾಗದಲ್ಲಿ ಅಜಾರೂಕ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಳಿ, ಅವೈಜ್ಞಾನಿಕ ರಸ್ತೆ ತಿರುವುಗಳು, ಸರ್ವಿಸ್ ರಸ್ತೆಗಳಿಗೆ ಲಿಂಕ್ ರಸ್ತೆ ಸಂಪರ್ಕ ಅಸಮರ್ಪಕವಾಗಿರುವುದುಅಪಘಾತಗಳಿಗೆ ಆಹ್ವಾನ ನೀಡುತ್ತಿದೆ.
ಮುದುಗುರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಮೇ6 ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಗ್ರಾಮದ ಸುಧಾಕರ ಎಂಬುವರು ಮೃತಪಟ್ಟಿದ್ದರು.
ರಾತ್ರಿ 8 ಗಂಟೆ ಸುಮಾರಿನಲ್ಲಿ ಹೆದ್ದಾರಿ ದಾಟುವಾಗ ಅಪಘಾತವಾಗಿದ್ದು, ಸುಧಾಕರ್ ತೀವ್ರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವಾರ್ಗಮಧ್ಯೆ ಕೊನೆಯುಸಿರೆಳೆದರು. ಇದರಿಂದ ಕೆರಳಿದ ಗ್ರಾಮಸ್ಥರು ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದರು.
ಎಲ್ಲ ಪ್ರಮುಖ ಗ್ರಾಮಗಳಲ್ಲಿ ಅಂಡರ್‌ಪಾಸ್:
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಆಂಧ್ರದ ಪೆನುಗೊಂಡವರೆಗೆ 10 ಪಥದ ರಸ್ತೆ ನಿರ್ಮಾಣ ಆರಂಭಗೊಳ್ಳುತ್ತಿದ್ದು ಎಲ ಪ್ರಮುಖ ಗ್ರಾಮಗಳಲ್ಲಿ ಬೆಂಗಳೂರು ಮೈಸೂರು ಹೈವೇ ಮಾದರಿಯಲ್ಲಿ ಅಂಡರ್‌ಪಾಸ್‌ಗಳು ನಿರ್ಮಾಣವಾಗಲಿದ್ದು ಇಂಥ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ಶುಕ್ರವಾರ ಮುದಗುರ್ಕಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು. ತಕ್ಷಣದ ಕ್ರಮವಾಗಿ ಮುದುಗುರ್ಕಿಯಿಂದ ಆವತಿವರಗೆ ರಸ್ತೆ ಬದಿಯಲ್ಲಿ ಲಾರಿ ಸೇರಿ ಇತರೆ ವಾಹನಗಳ ನಿಲುಗಡೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗುವುದು.ಹೈವೇ ಪೊಲೀಸರ ನೇಮಕ, ಹೈಮಾಸ್ಟ್ ದೀಪ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಮುದಗುರ್ಕಿ ಅಪಘಾತದಲ್ಲಿ ಮೃತರಾದ ಸುಧಾಕರ ಕುಟುಂಬದವರಿಗೆ ಸಾಂತ್ವನ ಹೇಳಿ, ಅವರ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ಹೆದ್ದಾರಿ 44 ಅಭಿವೃದ್ಧಿಯಾಗಿ 15 ವರ್ಷ ಕಳೆದಿದೆ. ಹೆದ್ದಾರಿ ನಿರ್ಮಾಣದಿಂದ ಗ್ರಾಮವೇ ವಿಭಜನೆಯಾಗಿದೆ, ಜಮೀನುಗಳು ಒಂದೆಡೆಯಾದರೆ ಮನೆಗಳು ಮತ್ತೊಂದು ಕಡೆಯಾಗಿವೆ ಪ್ರತಿನಿತ್ಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಲು ಪ್ರಾಣಪಣಕ್ಕಿಡುವಂತಾಗಿದೆ. ಇದಕ್ಕೆ ಅಂಡರ್‌ಪಾಸ್ ನಿರ್ಮಾಣ ಅವಶ್ಯವಾಗಿದೆ ಇಲ್ಲವಾದರೆ ಒಬ್ಬಬ್ಬರೇ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.
ಮೋಹನಬಾಬು, ಕಲಾವಿದರ ಸಂಘಂಧ ತಾಲೂಕು ಅಧ್ಯಕ್ಷ
ಪ್ರತೀ ಅಪಘಾತ ನಡೆದಾಗ ಪೋಲಿಸರು ಬಂದು ಏನೋ ಸಮಜಾಯಿಷಿ ಸಮಾಧಾನ ಹೇಳಿ ಹೋಗುತ್ತಾರೆ ಮತ್ತೆ ಅದೇ ಸ್ಥಿತಿ ಮರುಕುಳಿಸುತ್ತಿದೆ ನಮ್ಮ ಸಹನೆ ಮೀರಿದೆ, ಹೆದ್ದಾರಿ ಅಭಿವೃದ್ಧಿಗೊಂಡ ದಿನದಿಂದ ಇದುವರೆಗೆ ಎಲ್ಲ ಅಧಿಕಾರಿ, ಜನಪ್ರತಿನಿಧಿಗಳಿಗೆ ಈ ಬಗ್ಗೆ ಗಮನ ಸೆಳೆಯುವ ಪ್ರಯತ್ನ ನಡೆದಿದೆ ಆದರೂ ಪ್ರಯೋಜನವಾಗಿಲ್ಲ ಇನ್ನೆಷ್ಟು ಸಾವು ನೋವು ನೋಡಬೇಕು ತಿಳಿಯುತ್ತಿಲ್ಲ.
ಪ್ರದೀಪ್‌ಕುಮಾರ್, ಮಾನವಹಕ್ಕುಗಳ ಜಾಗೃತಿ ಸಮಿತಿ ಯುವ ಘಟಕದ ಅಧ್ಯಕ್ಷ